ಹೊಸದಿಲ್ಲಿ : “ನೀವೇ ನಮ್ಮ ದೇಶದ ಪ್ರಧಾನಿಯಾಗಿರುತ್ತಿದ್ದರೆ ನಮ್ಮ ದೇಶ ಅದೆಷ್ಟೋ ಬದಲಾಗಿರುತ್ತಿತ್ತು’ ಎಂದು ಪಾಕಿಸ್ಥಾನದ ಕರಾಚಿಯ ಮಹಿಳೆಯೊಬ್ಬರು ಲಿವರ್ ತೊಂದರೆಗೆ ಗುರಿಯಾಗಿರುವ ರೋಗಿಯೊಬ್ಬರ ಪರವಾಗಿ, ಭಾರತದಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಲು ವೀಸಾ ನೀಡುವಂತೆ ಕೋರಿರುವ ಪ್ರಕರಣದಲ್ಲಿ ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರನ್ನು ಹೃದಯದುಂಬಿ ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ.
ರೋಗಿಯೊಬ್ಬರ ಪರವಾಗಿ ವೈದ್ಯಕೀಯ ವೀಸಾ ಕೋರಿರುವ ಪಾಕ್ ಮಹಿಳೆ ಹಿಜಾಬ್ ಆಸೀಫ್ ಅವರ ಅರ್ಜಿಯನ್ನು ಕೂಡಲೇ ನೋಂದಾಯಿಸಿಕೊಳ್ಳುವಂತೆ ಸುಶ್ಮಾ ಅವರು ಪಾಕಿಸ್ಥಾನದಲ್ಲಿರುವ ಭಾರತೀಯ ಹೈಕಮಿಶನರ್ ಗೌತಮ್ ಬಂಬವಾಳೆ ಅವರಿಗೆ ಸೂಚಿಸಿದ್ದಾರೆ.
ಪಾಕ್ ಮಹಿಳೆ ಹಿಜಾಬ್ ಆಸೀಫ್ ಅವರು ತಮ್ಮ ಟ್ವೀಟ್‌ನಲ್ಲಿ ಹೀಗೆ ಬರೆದಿದ್ದಾರೆ :
“ನಿಮ್ಮನ್ನು ನಾನು ಏನೆಂದು ಕರೆಯಲಿ ? ಸೂಪರ್ ವೂಮನ್ ? ದೇವರು ? ನಿಮ್ಮ ಉದಾರತೆಯನ್ನು ವರ್ಣಿಸಲು ಶಬ್ದಗಳೇ ಇಲ್ಲ ! ಮ್ಯಾಮ್ ನಿಮ್ಮನ್ನು ನಾನು ಪ್ರೀತಿಸುತ್ತೇನೆ; ಕಣ್ಣೀರಿನಲ್ಲಿ ನಿಮ್ಮನ್ನು ಪ್ರಶಂಸಿಸುವುದನ್ನು ನಾನು ತಡೆಯಲಾರೆ’.
ಹಿಜಾಬ್ ಆಸೀಫ್ ಅವರ ಇನ್ನೊಂದು ಟ್ವೀಟ್ ಹೀಗಿದೆ : “ನಮ್ಮದು ಭ್ರಷ್ಟ ಸರಕಾರ. ನಾವು ಭಾರತವನ್ನು ದ್ವೇಷಿಸುವುದಿಲ್ಲ; ನಾನು ಹಿಂದೆ ಭಾರತಕ್ಕೆ ಬಂದಿದ್ದೇನೆ; ಪ್ರಮಾಣ ಮಾಡಿ
ಹೇಳುತ್ತೇನೆ : ನಾನು ಭಾರತವನ್ನು ಮತ್ತು ಭಾರತೀಯರನ್ನು ಪ್ರೀತಿಸುತ್ತೇನೆ”.
ಆಸಿಫ್ ಅವರು ವೈದ್ಯಕೀಯ ವೀಸಾ ಕೋರಿರುವುದು ಲಿವರ್ ತೊಂದರೆಗೆ ಗುರಿಯಾಗಿ ಗಂಭೀರ ಸ್ಥಿತಿಯಲ್ಲಿರುವ ಶಹಮಾತ್ ಅಬ್ಟಾಸ್ ತಕ್ವೀ ಎಂಬವರ ಪರವಾಗಿ. ಪಾಕ್ ವಿದೇಶ ವ್ಯವಹಾರಗಳ ಸಚಿವ ಸರ್ತಾಜ್ ಅಜೀಜ್ ಅವರು ಆಸಿಫ್ ಕೋರಿಕೆಯ ಪರಿಗಣನೆಯನ್ನು ವಿಳಂಬಿಸಿರುವುದಕ್ಕೆ ಸುಶ್ಮಾ ಖಂಡಿಸಿದ್ದಾರೆ.