Advertisement

ಒಳಗಣ್ಣಿಂದಲೇ ಜಗತ್ತನ್ನು ಗೆಲ್ಲುವ ಹಂಬಲ

01:31 AM Apr 23, 2019 | sudhir |

ಕುಂದಾಪುರ: ಸಾಧನೆಗೆ ವೈಕಲ್ಯ ಶಾಪವಲ್ಲ ಎನ್ನುವ ಆಕೆಯ ದಿಟ್ಟ ನಿರ್ಧಾರದ ಮುಂದೆ ಅಂಧತ್ವ ಸೋತು ಮಂಡಿಯೂರಿದೆ.

Advertisement

ಅಂಧಳಾಗಿ ಬಡ ಕುಟುಂಬದಲ್ಲಿ ಜನಿಸಿದರೂ ಕಷ್ಟವನ್ನು ಮೆಟ್ಟಿನಿಂತು, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 70 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವಳು ರಜನಿ ಭಂಡಾರಿ. ಕುಂದಾಪುರದ ಕುಂದಬಾರಂದಾಡಿ ಗ್ರಾಮದ ಮಾಣಿಕೊಳಲು ನಿವಾಸಿ ಶಂಕರ ಭಂಡಾರಿ ಮತ್ತು ಜ್ಯೋತಿ ದಂಪತಿಯ ಪುತ್ರಿ ಈಕೆ.

ರಜನಿ ಶಾಲೆಗೆ ದಾಖಲಾಗಿದ್ದೇ ಇಲ್ಲ. ಹಕ್ಲಾಡಿ ಶಾಲೆಯಲ್ಲಿ ತರಗತಿಗಷ್ಟೇ ಹಾಜರಾಗುತ್ತಿದ್ದಳು. 3-4ನೇ ತರಗತಿಯನ್ನು ಮಂಗಳೂರಿನ ಚಿಲಿಂಬಿಯ ರೋಮನ್‌ ಕ್ಯಾಥಲಿನ್‌ ಸಂಸ್ಥೆಯಲ್ಲಿ ಓದಿದಳು. 9 ಮತ್ತು 10ನೇ ತರಗತಿಯನ್ನು ಬೆಂಗಳೂರಿನ ಶೇಷಾದ್ರಿಪುರಂನ “ದ ಕರ್ನಾಟಕ ಅಸೋಸಿಯೇಶನ್‌ ಆಫ್‌ ಬ್ಲೆ„ಂಡ್‌’ ಎನ್ನುವ ವಿಶೇಷ ಸಂಸ್ಥೆಯಲ್ಲಿ ಮುಗಿಸಿದಳು.

ಎಸೆಸೆಲ್ಸಿಯಲ್ಲಿ ಶೇ. 55 ಅಂಕ ಗಳಿಸಿದ ಈಕೆ, ಪಿಯು ಶಿಕ್ಷಣವನ್ನು ರಾಜಾಜಿನಗರದಲ್ಲಿರುವ ಶ್ರೀ ಹೊಂಬೆಗೌಡ ಪ.ಪೂ. ಕಾಲೇಜಿನಲ್ಲಿ ಪಡೆದಳು. ಪಿಯು ವಾರ್ಷಿಕ ಪರೀಕ್ಷೆಯನ್ನು ಸಹಾಯಕರ ನೆರವಿನಿಂದ ಆಂಗ್ಲ ಮಾಧ್ಯಮದಲ್ಲಿ ಉತ್ತರಿಸಿ ಶೇ. 70 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀ ರ್ಣಳಾಗಿದ್ದಾಳೆ. ಪ್ರಾಥಮಿಕ -ಪ್ರೌಢ ಶಿಕ್ಷಣವನ್ನು ಸಾಂಪ್ರದಾಯಿಕ ರೀತಿಯಲ್ಲಿ ಪಡೆಯದೆ ಇದ್ದರೂ ಅದೊಂದು ಸಮಸ್ಯೆಯೇ ಅಲ್ಲ ಎಂಬಂತೆ ಈಕೆ ಸಾಧನೆ ಮಾಡಿರುವುದು ವಿಶೇಷ.

ಬಡ ಕುಟುಂಬ
ತಂದೆ ಶಂಕರ ಭಂಡಾರಿ ಗ್ರಾಮೀಣ ಪ್ರದೇಶವಾದ ಕುಂದಬಾರಂದಾಡಿಯಲ್ಲಿ ಸಣ್ಣ ಕೌÒರದ ಅಂಗಡಿ ಹೊಂದಿದ್ದಾರೆ. ಮಗಳನ್ನು ಚೆನ್ನಾಗಿ ಓದಿಸಬೇಕು ಎನ್ನುವ ಮಹದಾಸೆಯಿದ್ದರೂ ಹಣ ಹೊಂದಿಸುವುದು ಸಮಸ್ಯೆಯಾಗಿತ್ತು. ತಾಯಿ ಗೃಹಿಣಿ. ಸಹೋದರ ರಂಜಿತ್‌ ಕೂಡ ಅಂಧರಾಗಿದ್ದು, ದ್ವಿತೀಯ ಪಿಯುಸಿವರೆಗೆ ಓದಿದ್ದಾರೆ.

Advertisement

ಉಪನ್ಯಾಸಕಿಯಾಗುವ ಕನಸು
ಬಿಎ, ಬಿಎಡ್‌ ಪೂರೈಸಿ ಉಪನ್ಯಾಸಕಿಯಾಗುವ ಬೆಟ್ಟ ದಂತಹ ಕನಸು ರಜನಿ ಅವರದ್ದು. ಆದರೆ ಅದಕ್ಕೆ ವೈಕಲ್ಯಕ್ಕಿಂತಲೂ ಹಣಕಾಸಿನ ಸಮಸ್ಯೆಯೇ ಅಡ್ಡಿ
ಯಾಗಿದೆ. ಆರಂಭದಲ್ಲಿ ಬೆಂಗಳೂರಿನ ಬಸ್‌ಗಳಲ್ಲಿ ಓಡಾಡುವುದು ಕಷ್ಟವಾಗುತ್ತಿತ್ತು. ಅದಕ್ಕೆ ಕಾಲೇಜು ಸಮೀಪವೇ ದಾನಿಯೊಬ್ಬರ ನೆರವಿನಿಂದ ಪಿಜಿಗೆ ಸೇರಿಕೊಂಡೆ ಎನ್ನುತ್ತಾರೆ ರಜನಿ.

ಬಿಎ ಕಲಿಯುವೆ
10ನೇ ತರಗತಿಯ ವರೆಗೆ ಮಾತ್ರ ನಮಗೆ ವಿಶೇಷ ಶಾಲೆಗಳಿರುತ್ತವೆ. ನಾನು ಸೇರಿದ ರಾಜಾಜಿನಗರದ ಕಾಲೇಜಿನಲ್ಲಿ ನಾನೊಬ್ಬಳೇ ಅಂಧಳು. ಹಾಗಾಗಿ ಮೊದಲಿಗೆ ಕಷ್ಟವಾಗುತ್ತಿತ್ತು. ಸ್ನೇಹಿತರೆಲ್ಲ ಸಹಾಯ ಮಾಡಿದರು. ಪದವಿಯನ್ನೂ ಅಲ್ಲೇ ಪೂರೈಸುವೆ.
– ರಜನಿ ಭಂಡಾರಿ

ಅವಕಾಶ ನೀಡಲಿ
ನಮ್ಮ ಸಂಸ್ಥೆಯಿಂದ ಸಾಧ್ಯವಾದಷ್ಟು ಸಹಾಯ ಮಾಡಿದ್ದೇವೆ. ಆಕೆಗೆ ಉನ್ನತ ವ್ಯಾಸಂಗದ ಕನಸಿದೆ. ಯಾವುದಾದರೂ ಶಿಕ್ಷಣ ಸಂಸ್ಥೆ ಆಕೆಯನ್ನು ದತ್ತು ಪಡೆದು ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದರೆ ಅನುಕೂಲ.
– ಬನ್ನಂಜೆ ಗೋವಿಂದ ಭಂಡಾರಿ, ಸವಿತಾ ಸಮಾಜದ ಮಾಜಿ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next