ಉಡುಪಿ: ನಾವು ಅಂಕಿ – ಅಂಶಗಳಲ್ಲಿರುವ ಮಾಹಿತಿಗಳನ್ನು ಜ್ಞಾನವಾಗಿ ಪರಿವರ್ತಿಸಿದ ಅನಂತರ ಜ್ಞಾನವನ್ನು ವಿವೇಕವಾಗಿ ಪರಿವರ್ತಿಸುವ ಅಗತ್ಯವಿದೆ ಎಂದು ಹೊಸ ದಿಲ್ಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನ ಇಲಾಖೆ ಕಾರ್ಯದರ್ಶಿ ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ
ಸಂಶೋಧನ ಮಂಡಳಿ ಮಹಾ ನಿರ್ದೇಶಕ ಡಾ| ಶೇಖರ್ ಸಿ. ಮಂಡೆ ಪ್ರತಿಪಾದಿಸಿದರು.
ಮಣಿಪಾಲದ ಕೆಎಂಸಿ ಗ್ರೀನ್ಸ್ ನಲ್ಲಿ ಶನಿವಾರ ಮಾಹೆ ವಿ.ವಿ.ಯ ಎರಡನೇ ದಿನದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ದೇಶದ ದಿಕ್ಕು ಬದಲಾಗಿದೆ. ಇಂದು ದೇಶ ಜಾಗತೀಕರಣವನ್ನು ಅಪ್ಪಿಕೊಂಡಿದೆ. ಅಂಕಿ-ಅಂಶಗಳ ಪೂರೈಕೆ ಹೆಚ್ಚಿಗೆ ಆಗುತ್ತಿದೆ. ಎಲ್ಲ ಅಂಕಿ-ಅಂಶಗಳು ಮಾಹಿತಿಯಾಗಿ ರುವುದಿಲ್ಲ. ಎಲ್ಲ ಮಾಹಿತಿಗಳು ಜ್ಞಾನ ಆಗಿರುವುದಿಲ್ಲ. ಎಲ್ಲ ಜ್ಞಾನಗಳು ವಿವೇಕವಾಗಿರು ವುದಿಲ್ಲ. ಅಂಕಿ-ಅಂಶಗಳು ಶಿಕ್ಷಣದಲ್ಲಿ ದೊರಕುತ್ತಿವೆ. ವಿಶಿಷ್ಟ ಶಿಕ್ಷಕರು ಮಾತ್ರ ಇವುಗಳನ್ನು ಜ್ಞಾನವಾಗಿ ಪರಿವರ್ತಿಸುತ್ತಾರೆ. ಕೆಲವೇ ಕೆಲವರು ಇದನ್ನು ವಿವೇಕವಾಗಿ ಪರಿವರ್ತಿಸುತ್ತಾರೆ ಎಂದರು.
ವಿವೇಕವನ್ನು ಮಾನವೀಯತೆ ಸ್ಪರ್ಶದಿಂದ ಉಪಯೋಗಿಸುವುದು ವ್ಯಕ್ತಿಗಳ ಕೈಯಲ್ಲಿರುತ್ತದೆ. ಆಧುನಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಮೆದುಳಿಗೆ ಜೀರ್ಣವಾಗದ ಮಾಹಿತಿಗಳನ್ನು ತುಂಬಿಸಿದ ಮೂಟೆಯಾಗಿರುತ್ತದೆ ಎಂದು ವಿವೇಕಾನಂದರು ಹೇಳುತ್ತಿ ದ್ದರು. ಇದನ್ನು ಪರಿವರ್ತಿಸುವ ಜಾಣ್ಮೆ ನಮ್ಮದಾಗಬೇಕು ಎಂದು ಮಂಡೆ ಅವರು ಹೇಳಿದರು.
ಎಂಇಎಂಜಿ ಅಧ್ಯಕ್ಷ ಡಾ| ರಂಜನ್ ಪೈ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ, ಸಹಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್, ಕುಲಪತಿ ಡಾ| ಎಚ್.ವಿನೋದ ಭಟ್ ಮೊದಲಾದವರು ಘಟಿಕೋತ್ಸವ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಗಾಂಧೀಜಿಯವರು ಹೇಳಿದ ಅಪರಾಧಗಳು
ಗಾಂಧೀಜಿಯವರು ಏಳು ರೀತಿಯ ಅಪರಾಧಗಳು ಜೀವನ ವನ್ನು ಹಾಳುಗೆಡಹುತ್ತವೆ ಎಂದು ಹೇಳುತ್ತಿ ದ್ದರು. ಶ್ರಮಪಡದ ಶ್ರೀಮಂತಿಕೆ, ಪ್ರಜ್ಞೆ ಇಲ್ಲದ ಸುಖ, ನಡತೆ ಇಲ್ಲದ ಜ್ಞಾನ, ನೈತಿಕತೆ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ವಿಜ್ಞಾನ, ತ್ಯಾಗವಿಲ್ಲದ ಧರ್ಮ, ನೀತಿ ಇಲ್ಲದ ರಾಜಕೀಯ ಇವುಗಳೇ ಆ ಏಳು ಅಪರಾಧಗಳು ಎಂದು ಡಾ| ಶೇಖರ್ ಸಿ. ಮಂಡೆ ಹೇಳಿದರು.