Advertisement

ಇತಿಹಾಸ ಪುಟ ಸೇರಲಿರುವ ವೈರ್‌ಲೆಸ್‌ ಫೋನ್‌ ಸೇವೆ 

06:00 AM Sep 05, 2018 | |

ಬೆಂಗಳೂರು: ರಾಜ್ಯದಲ್ಲಿ ಸದ್ಯ ಚಾಲ್ತಿಯಲ್ಲಿರುವ 30,000ಕ್ಕೂ ಹೆಚ್ಚು “ವೈರ್‌ಲೆಸ್‌ ಲ್ಯಾಂಡ್‌ ಲೈನ್‌’ (ಡಬ್ಲ್ಯೂಎಲ್‌ಎಲ್‌) ದೂರವಾಣಿ ಸೇವೆ ಸೆ.6ಕ್ಕೆ ಅಂತ್ಯವಾಗುವ ಸಾಧ್ಯತೆ ಇದ್ದು, ಇತಿಹಾಸದ ಪುಟ ಸೇರುವ ಕಾಲ ಸನ್ನಿಹಿತವಾದಂತಿದೆ. ಬೆಂಗಳೂರು, ಮಂಗಳೂರು, ದಾವಣಗೆರೆಯಲ್ಲಿ ಸದ್ಯ
ಬಳಕೆಯಲ್ಲಿರುವ ಡಬ್ಲ್ಯೂಎಲ್‌ಎಲ್‌ ದೂರವಾಣಿ ಸೇವೆಯು ಲಾಭದಾಯಕವಾಗಿಲ್ಲದ ಕಾರಣ ಭಾರತ್‌ ಸಂಚಾರ ನಿಗಮ (ಬಿಎಸ್‌ಎನ್‌ಎಲ್‌) ತೀವ್ರ ನಷ್ಟ ಅನುಭವಿಸುತ್ತಿದ್ದು, ಬಾಕಿ ಉಳಿದಿರುವ 30,000 ಸಂಪರ್ಕ ಸೇವೆಯನ್ನು ಅಂತ್ಯಗೊಳಿಸಲು ಮುಂದಾಗಿದೆ. ಗ್ರಾಹಕರು ನಿಗಮದ ಬೇರೆ ಸಂಪರ್ಕ ಸೇವೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಿದೆ. 

Advertisement

ಸುಧಾರಿತ ತಂತ್ರಜ್ಞಾನವಾಗಿ ಜಾರಿಗೆ ಬಂದ ಸೇವೆಯೇ ಹೊಸ ತಂತ್ರಜ್ಞಾನಕ್ಕೆ ಶರಣಾಗಿ ಬಳಕೆಯಿಂದ ಹಿಂದೆ ಸರಿಯುತ್ತಿರುವುದು ವಿಚಿತ್ರ. 21ನೇ ಶತಮಾನದ ಆರಂಭದಲ್ಲಿ ಗೃಹ ಬಳಕೆ ಸ್ಥಿರ ದೂರವಾಣಿ ಸಂಪರ್ಕ ಪಡೆಯುವವರ ಸಂಖ್ಯೆ ಹೆಚ್ಚಾಗ ತೊಡಗಿತು. ಅದರಂತೆ ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ದೂರವಾಣಿ ಸಂಪರ್ಕ ಪಡೆಯುವುದು ವ್ಯಾಪಕವಾಗಿತ್ತು. ಗುಡ್ಡಗಾಡು, ಅರಣ್ಯ  ದಂಚಿನ ಪ್ರದೇಶಗಳು, ಮಲೆನಾಡು, ಕರಾವಳಿ ಭಾಗಗಳಲ್ಲಿ ದೂರವಾಣಿ ಸಂಪರ್ಕ ಕಲ್ಪಿಸಲು ಕೆಲ ಅಡಚಣೆಗಳೂ ಎದುರಾಗಿದ್ದವು.

ವೈರ್‌ಲೆಸ್‌ ಸೇವೆಗೆ ಚಾಲನೆ: ಮುಖ್ಯವಾಗಿ ನೆಟ್‌ವರ್ಕ್‌ ಗೋಪುರಗಳ ಕೊರತೆ, ತಂತಿ ಮಾರ್ಗದಲ್ಲಿ ಟೆಲಿಕಾಂ ಸೇವೆ ಕಲ್ಪಿಸುವಲ್ಲಿನ ಅಡೆತಡೆಗಳಿಂದಾಗಿ ಆಯ್ದ ಪ್ರದೇಶಗಳಲ್ಲಿ ಸ್ಥಿರ ದೂರವಾಣಿ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿರಲಿಲ್ಲ. ಆ ಭಾಗದ ಗ್ರಾಹಕರಿಗೆ ಸೌಲಭ್ಯ ಕಲ್ಪಿಸಲು “ಕೋಡ್‌ ಡಿವಿಷನ್‌ ಮಲ್ಟಿಪಲ್‌ ಆಕ್ಸೆಸ್‌’ ಆಧಾರಿತ ವೈರ್‌ಲೆಸ್‌ ಸಂಪರ್ಕ ಸೇವೆ ಕಲ್ಪಿಸಲು ಮುಂದಾಯಿತು. ದೂರವಾಣಿ ಕರೆಗಳು ಮಾತ್ರವಲ್ಲದೆ, ಇಂಟರ್ನೆಟ್‌ ಡಾಟಾ ಸೇವೆಯನ್ನೂ ಒದಗಿಸಿತ್ತು. 

ತೀವ್ರ ನಷ್ಟ: ತಂತ್ರಜ್ಞಾನ ಬದಲಾವಣೆ, ಸಂವಹನ ಕ್ಷೇತ್ರದಲ್ಲಿನ ಕ್ರಾಂತಿಯಿಂದಾಗಿ ಕ್ರಮೇಣ ಡಬ್ಲ್ಯೂಎಲ್‌ಎಲ್‌ ಸಂಪರ್ಕ ಪಡೆಯುವವರ ಸಂಖ್ಯೆ ಕ್ರಮೇಣ ಕಡಿಮೆಯಾಯಿತು. ಮುಖ್ಯವಾಗಿ ಮೊಬೈಲ್‌ ಬಳಕೆ ಹೆಚ್ಚಾದಂತೆ ವೈರ್‌ಲೆಸ್‌ ಲ್ಯಾಂಡ್‌ ಲೂಪ್‌ ಸೇವೆ ಆಕರ್ಷಣೆ ಕಳೆದುಕೊಳ್ಳಲಾರಂಭಿಸಿತು. ಇದು ಆರ್ಥಿಕ ನಷ್ಟಕ್ಕೂ ಕಾರಣವಾಯಿತು.  

30,000 ಸಂಪರ್ಕ ಬಾಕಿ: ಈಗಾಗಲೇ ಹಲವು ಜಿಲ್ಲೆಗಳಲ್ಲಿ ಈ ಸೇವೆ ಮುಂದುವರಿಕೆಗೆ ಗ್ರಾಹಕರು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ಬೆಂಗಳೂರು, ಮಂಗಳೂರು, ದಾವಣಗೆರೆ ವ್ಯಾಪ್ತಿಯಲ್ಲಿಷ್ಟೇ ಸದ್ಯ ಈ ಸೇವೆಯಿದ್ದು, 30,000ಕ್ಕೂ ಹೆಚ್ಚು ಸಂಪರ್ಕ ಬಾಕಿ ಉಳಿದಿವೆ. ಸೇವೆಯು ಬಹುಪಾಲು ನಷ್ಟದಲ್ಲಿರುವುದರಿಂದ ಸ್ಥಗಿತಗೊಳಿಸಲು ಬಿಎಸ್‌ಎನ್‌ ಎಲ್‌ ನಿರ್ಧರಿಸಿದೆ. ಅದರಂತೆ ಸೆ.6ಕ್ಕೆ ಈ ಸೇವೆ ಸ್ಥಗಿತವಾಗುವ ಸಾಧ್ಯತೆ ಇದೆ. ಅವಧಿ ವಿಸ್ತರಣೆಗೆ ನಿಗಮದ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಸಿಗದ ಕಾರಣ ಸೇವೆ ಅಂತ್ಯವಾಗುವುದು ಬಹುತೇಕ ಖಚಿತವೆನಿಸಿದೆ.

Advertisement

ನೋಟಿಸ್‌ ನೀಡಲಾಗಿದೆ: ಸೇವೆ ಸ್ಥಗಿತ ಸಂಬಂಧ ತಿಂಗಳ ಹಿಂದೆಯೇ ಗ್ರಾಹಕರಿಗೆ ನೋಟಿಸ್‌ ನೀಡಿರುವ ನಿಗಮವು ಪರ್ಯಾಯವಾಗಿ ಬಯಸುವ ಸೇವೆಗಳ ಬಗ್ಗೆಯೂ ಮಾಹಿತಿ ಕೋರಿದೆ. ಒಂದೊಮ್ಮೆ ಗ್ರಾಹಕರು ಮೊಬೈಲ್‌ ಸಂಪರ್ಕ ಬಯಸಿದರೆ ಸಿಮ್‌ ವಿತರಿಸಲಾಗುವುದು. ಸ್ಥಿರ ದೂರವಾಣಿ ಕೋರಿದರೆ ನೀಡಲಾಗುವುದು. ಆರಂಭಿಕ ಮೂರು ತಿಂಗಳ ಕಾಲ ಉಚಿತ ಸೇವೆ ನೀಡಿ ನಂತರ ಶುಲ್ಕ ವಿಧಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಬಿಎಸ್‌ಎನ್‌ಎಲ್‌ ಮೂಲಗಳು ತಿಳಿಸಿವೆ.

ನಷ್ಟ ಕಾರಣಕ್ಕೆ ಸ್ಥಗಿತ
ರಾಜ್ಯದಲ್ಲಿರುವ ಸ್ಥಿರ ದೂರವಾಣಿ ಸಂಪರ್ಕದ ಪೈಕಿ ಶೇ.3ರಷ್ಟು ಮಾತ್ರ “ಡಬ್ಲ್ಯೂಎಲ್‌ಎಲ್‌’ ಸೇವೆ ಬಳಕೆಯಲ್ಲಿದೆ. ಆದರೆ ಶೇ.99ರಷ್ಟು ನಷ್ಟದಲ್ಲಿದೆ. ಸಂಪರ್ಕವಿದ್ದರೂ ಗ್ರಾಹಕರು ಬಳಸದೆ ಸ್ತಬಟಛಿವಾಗಿದ್ದರೆ, ಕೆಲ ಬಳಕೆದಾರರು ಬಳಸಿದರೂ ಸಮರ್ಪಕವಾಗಿ ಶುಲ್ಕ ಪಾವತಿಸುತ್ತಿಲ್ಲ. ಇದು ನಷ್ಟದಾಯಕ ವ್ಯವಹಾರವೆಂದು ನಿಗಮವು ನಿರ್ಧರಿಸಿದೆ. ಬೆಂಗಳೂರು, ಮಂಗಳೂರು, ದಾವಣಗೆರೆ ಸೇರಿದಂತೆ ಆಯ್ದ ಪ್ರದೇಶಗಳಲ್ಲಷ್ಟೇ ಈ ಸೇವೆಯಿದ್ದು, ಉಳಿದೆಡೆ ಸ್ಥಗಿತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆ, ಕಾರವಾರದಲ್ಲಿ ಇನ್ನೂ ಮೂರು ತಿಂಗಳ ಕಾಲ ಸೇವೆ ಮುಂದುವರಿಕೆಗೆ ಅವಕಾಶ ಕೋರಿದರೂ ಈವರೆಗೆ ಸ್ಪಂದನೆ ಸಿಕ್ಕಿಲ್ಲ. ಅನುಮತಿ ಸಿಗದಿದ್ದರೆ ಸೆ.6ಕ್ಕೆ ಸೇವೆ ಅಂತ್ಯವಾಗಲಿದೆ.
● ಆರ್‌. ಮಣಿ, ಮುಖ್ಯ ವ್ಯವಸ್ಥಾಪಕ ನಿರ್ದೇಶಕ, ಬಿಎಸ್‌ಎನ್‌ಎಲ್‌ ಕರ್ನಾಟಕ ವೃತ್ತ

● ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next