Advertisement

ಮಾಲಿನ್ಯದ ವಿರುದ್ಧ ಸದನ ಸಮರ ; ಲೋಕಸಭೆಯಲ್ಲಿ ಗಂಭೀರ ಚರ್ಚೆ

10:06 AM Nov 21, 2019 | Team Udayavani |

ಹೊಸದಿಲ್ಲಿ: ‘ಮಲಿನಗೊಂಡ ತನ್ನ ಗಾಳಿಯನ್ನು ಸ್ವಚ್ಛಗೊಳಿಸಲು ಬೀಜಿಂಗ್‌ಗೆ ಸಾಧ್ಯವೆಂದಾದರೆ, ಭಾರತಕ್ಕೇಕೆ ಸಾಧ್ಯವಿಲ್ಲ? ನಮಗೆ ಅಂಥ ಇಚ್ಛಾಶಕ್ತಿ ಇಲ್ಲವೇ ಅಥವಾ ಸಂಪನ್ಮೂಲಗಳ ಕೊರತೆಯಿದೆಯೇ?’ ಇಂಥದ್ದೊಂದು ಪ್ರಶ್ನೆ ಹಾಕಿದ್ದು ಕಾಂಗ್ರೆಸ್‌ ನಾಯಕ ಮನೀಷ್‌ ತಿವಾರಿ. ಸಂಸತ್‌ನ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಆರಂಭದಲ್ಲಿ ಸ್ವಲ್ಪ ಗದ್ದಲಗಳು ನಡೆದರೂ, ಅನಂತರ ದೆಹಲಿಯ ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಗಂಭೀರವಾದ ಚರ್ಚೆ ನಡೆಯಿತು. ಲೋಕಸಭೆಯಲ್ಲಿ ಎಲ್ಲ ಸದಸ್ಯರೂ ಪಕ್ಷಭೇದ ಮರೆದು ವಾಯುಮಾಲಿನ್ಯ ನಿಗ್ರಹಕ್ಕೆ ಸಂಬಂಧಿಸಿದಂತೆ ಉತ್ತಮ ಚರ್ಚೆಯಲ್ಲಿ ತೊಡಗಿದ್ದು ಕಂಡುಬಂತು.

Advertisement

ಮಾಲಿನ್ಯ ಮತ್ತು ಹವಾಮಾನ ಬದಲಾವಣೆ ಕುರಿತು ಮಾತ್ರವೇ ಗಮನ ಹರಿಸುವಂಥ ಶಾಸನಬದ್ಧ ಸಮಿತಿಯೊಂದನ್ನು ರಚಿಸೋಣ, ಪ್ರತಿ ಸಂಸತ್‌ ಅಧಿವೇಶನದಲ್ಲಿ ಒಂದು ದಿನವನ್ನು ಈ ಸಮಿತಿ ಮಾಡಿರುವ ಕಾರ್ಯಗಳ ಕುರಿತು ಚರ್ಚಿಸಲೆಂದೇ ಮೀಸಲಿಡೋಣ ಎಂಬ ಸಲಹೆಗಳೂ ಕೇಳಿಬಂದವು. ಇದೇ ವೇಳೆ, ಮಾಲಿನ್ಯಕ್ಕೆ ಬೆಳೆ ಕಳೆಗಳನ್ನು ಸುಡುವ ರೈತರೇ ಕಾರಣ ಎಂದು ನಿಂದಿಸುವುದು ಬೇಡ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಇನ್ನು ಎಲ್ಲ ಸಂಸದರೂ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ 2 ಕೋಟಿ ರೂ.ಗಳನ್ನು ದೇಣಿಗೆ ನೀಡಿ, ಆ ಹಣದಿಂದ ದೆಹಲಿಯಲ್ಲಿ ವಾಯು ಶುದ್ಧೀಕರಣ ಟವರ್‌ಗಳನ್ನು ನಿರ್ಮಿಸುವ ಕುರಿತೂ ಚರ್ಚೆಯಾಯಿತು.

ಪ್ರತಿಪಕ್ಷಗಳ ಗದ್ದಲ: ಇದಕ್ಕೂ ಮುನ್ನ, ಅಂದರೆ ಲೋಕಸಭೆ ಕಲಾಪ ಆರಂಭವಾದಾಗ, ಸೋನಿಯಾ, ರಾಹುಲ್‌ ಸೇರಿದಂತೆ ಗಾಂಧಿ ಕುಟುಂಬದ ಎಸ್‌ಪಿಜಿ ಭದ್ರತೆ ವಾಪಸ್‌ ಪಡೆದುಕೊಂಡ ಕೇಂದ್ರ ಸರಕಾರದ ಕ್ರಮ ಖಂಡಿಸಿ ಕಾಂಗ್ರೆಸ್‌ ತೀವ್ರ ಪ್ರತಿಭಟನೆ ನಡೆಸಿತು.

ವಿಧೇಯಕ ಅಂಗೀಕಾರ: ಜಲಿಯನ್‌ವಾಲಾ ಬಾಗ್‌ ರಾಷ್ಟ್ರೀಯ ಸ್ಮಾರಕದ ಟ್ರಸ್ಟಿ ಸ್ಥಾನದಿಂದ ಕಾಂಗ್ರೆಸ್‌ ಅಧ್ಯಕ್ಷರನ್ನು ತೆಗೆದುಹಾಕುವ ಪ್ರಸ್ತಾಪವಿರುವ ವಿಧೇಯಕ ರಾಜ್ಯಸಭೆಯಲ್ಲಿ ಮಂಗಳವಾರ ಅಂಗೀಕಾರಗೊಂಡಿದೆ. ಕಾಂಗ್ರೆಸ್‌ ಅಧ್ಯಕ್ಷರು ಟ್ರಸ್ಟ್‌ನ ಖಾಯಂ ಸದಸ್ಯತ್ವ ಹೊಂದಿರುತ್ತಾರೆ ಎಂಬ ಅಂಶವನ್ನು ವಿಧೇಯಕದಲ್ಲಿ ಅಳಿಸಲಾಗಿದೆ.

765 ಮಂದಿ ಬಂಧನ: 370ನೇ ವಿಧಿ ರದ್ದು ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 765 ಮಂದಿಯನ್ನು ಬಂಧಿಸಲಾಗಿದೆ ಎಂದು ಸಚಿವ ಕಿಶನ್‌ ರೆಡ್ಡಿ ತಿಳಿಸಿದ್ದಾರೆ. ಕಲ್ಲು ತೂರಾಟದಂಥ ಪ್ರಕರಣಗಳಲ್ಲಿ ಭಾಗಿಯಾದ ಕಾರಣ ಈ ಬಂಧನ ನಡೆದಿದೆ ಎಂದಿದ್ದಾರೆ. ಇದೇ ವೇಳೆ, ವಿಶೇಷ ಸ್ಥಾನಮಾನ ರದ್ದಾದ ಅನಂತರ ಪಾಕಿಸ್ಥಾನವು ಗಡಿಯಲ್ಲಿ 950 ಬಾರಿ ಕದನ ವಿರಾಮ ಉಲ್ಲಂಘಿಸಿದೆ ಎಂದೂ ಮಾಹಿತಿ ನೀಡಿದ್ದಾರೆ.

Advertisement

ಸರಕಾರಕ್ಕಿದೆ ಅಧಿಕಾರ: ಯಾವುದೇ ಕಂಪ್ಯೂಟರ್‌ನಲ್ಲಿ ಉತ್ಪತ್ತಿಯಾದ, ಪ್ರಸರಣಗೊಂಡ, ಸ್ವೀಕಾರವಾದ ಅಥವಾ ಸಂಗ್ರಹವಾದ ಯಾವುದೇ ಮಾಹಿತಿಯನ್ನು ಛೇದಿಸುವ ಅಧಿಕಾರವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಮ್ಮ ಕಾನೂನು ನೀಡಿದೆ ಎಂದೂ ಸಚಿವ ಕಿಶನ್‌ ರೆಡ್ಡಿ ತಿಳಿಸಿದ್ದಾರೆ. ಸರಕಾರವು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೆಸೆಂಜರ್‌, ವೈಬರ್‌ ಮತ್ತು ಗೂಗಲ್‌ ಕರೆ, ಸಂದೇಶಗಳ ಬೇಹುಗಾರಿಕೆ ಮಾಡಿ ದೆಯೇ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ.

ಸಮವಸ್ತ್ರ ಮರುಪರಿಶೀಲನೆ: ಸೋಮವಾರವಷ್ಟೇ ಹೊಸ ಸಮವಸ್ತ್ರದೊಂದಿಗೆ ಕಾಣಿಸಿಕೊಂಡ ಮಾರ್ಷಲ್‌ಗ‌ಳು ಮತ್ತೆ ತಮ್ಮ ಸಮವಸ್ತ್ರದಲ್ಲಿ ಬದಲಾವಣೆಯನ್ನು ಕಾಣುವ ಸಾಧ್ಯತೆ ಅಧಿಕವಾಗಿದೆ. ಸೇನಾ ಮಾದರಿ ಸಮವಸ್ತ್ರಕ್ಕೆ ನಿವೃತ್ತ ಸೇನಾಧಿಕಾರಿಗಳು ಹಾಗೂ ಪ್ರತಿಪಕ್ಷಗಳ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಸಮವಸ್ತ್ರ ಕುರಿತು ಮರುಪರಿಶೀಲನೆ ನಡೆಸುವುದಾಗಿ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಮಂಗಳವಾರ ತಿಳಿಸಿದ್ದಾರೆ.

ಸದನದ ಬಾವಿಗಿಳಿದವರಿಗೆ ಕಠಿಣ ಕ್ರಮದ ಎಚ್ಚರಿಕೆ
ಲೋಕಸಭೆ ಕಲಾಪದ 2ನೇ ದಿನವೂ ವಿವಿಧ ವಿಚಾರಗಳನ್ನೆತ್ತಿಕೊಂಡು ಕಾಂಗ್ರೆಸ್‌ ಹಾಗೂ ಇತರೆ ಪ್ರತಿಪಕ್ಷಗಳು ಗದ್ದಲವೆಬ್ಬಿಸಿದ ಹಿನ್ನೆಲೆಯಲ್ಲಿ ಸ್ಪೀಕರ್‌ ಓಂ ಬಿರ್ಲಾ ತೀವ್ರ ಅಸಮಾಧಾನಗೊಂಡಿದ್ದಾರೆ. 20ಕ್ಕೂ ಹೆಚ್ಚು ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗಲು ಆರಂಭಿಸಿದಂತೆ, ಆಕ್ರೋಶ ಹೊರಹಾಕಿದ ಸ್ಪೀಕರ್‌, ಸದನದ ಬಾವಿಗಿಳಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ರವಾನಿಸಿದರು. ಇಂದಿನಿಂದ ಯಾರು ಕೂಡ ಸದನದ ಬಾವಿಗೆ ಇಳಿಯುವಂತಿಲ್ಲ. ಯಾರಾದರೂ ಇಳಿದಿದ್ದು ಕಂಡುಬಂದರೆ ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳುತ್ತೇನೆ ಎಂದರು ಬಿರ್ಲಾ.

ಸಮುದ್ರಮಟ್ಟ 50 ವರ್ಷಗಳಲ್ಲಿ 8.5 ಸೆಂ.ಮೀ. ಹೆಚ್ಚಳ
ಭಾರತೀಯ ಕರಾವಳಿಯಲ್ಲಿ ಕಳೆದ 50 ವರ್ಷಗಳಲ್ಲಿ ಸಮುದ್ರ ಮಟ್ಟವು 8.5 ಸೆಂ.ಮೀ.ನಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೋ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಜಾಗತಿಕ ತಾಪಮಾನದಿಂದಾಗಿ ಮುಂದೊಂದು ದಿನ ಹಲವು ನಗರಗಳು ಮುಳುಗಡೆಯಾಗಲಿವೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ವೇಳೆ ಅವರು ಈ ಅಂಕಿ ಅಂಶ ಒದಗಿಸಿದ್ದಾರೆ. ಪ್ರತಿ ವರ್ಷ ಸಮುದ್ರ ಮಟ್ಟ ಸರಾಸರಿ 1.70ಮಿ.ಮೀ. ಏರಿಕೆಯಾಗುತ್ತಾ ಇದೆ. 2003-2013ರ ಅವಧಿಯಲ್ಲಿ ಇದು ವರ್ಷಕ್ಕೆ 6.1 ಮಿ.ಮೀ. ದರದಲ್ಲಿ ಏರಿಕೆ ಕಂಡಿದೆ ಎಂದೂ ಸುಪ್ರಿಯೋ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next