Advertisement

ಸುವರ್ಣ ವಿಧಾನಸೌಧ: ಮೊದಲ ದಿನ ಖಾಲಿ 

06:00 AM Nov 14, 2017 | |

ಸುವರ್ಣ ವಿಧಾನಸೌಧ, ಬೆಳಗಾವಿ: ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಖರ್ಚು ಮಾಡಿ, ನಾಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೊಂದು ಪರಿಹಾರದ ರೂಪ ನೀಡುವಂಥ ತಾಣವಾದ ಬೆಳಗಾವಿ ಸುವರ್ಣಸೌಧದಲ್ಲಿ ಹೇಳಲಿಕ್ಕೂ, ಕೇಳಲಿಕ್ಕೂ ಯಾರೂ ಇಲ್ಲದೇ ಚಳಿಗಾಲದ ಅಧಿವೇಶನದ ಮೊದಲ ದಿನವೇ “ವ್ಯರ್ಥಕಲಾಪ’ದ ದೃಶ್ಯ ಕಂಡು ಬಂತು.

Advertisement

ಈಗಾಗಲೇ ಶಾಸಕರ ನಿರಾಸಕ್ತಿ ಈ ಹಿಂದಿನ ಅಧಿವೇಶನಗಳನ್ನು ಗಮನಿಸಿದರೆ ಸಾಬೀತಾಗುತ್ತದೆ. ಆದರೆ ಬೆಂಗಳೂರು ಬಿಟ್ಟು, “ಉತ್ತರ’ದ ಸಮಸ್ಯೆಗಳ ಮೇಲೆಯೇ ಗಮನಹರಿಸಬಹುದಾದ ಸುವರ್ಣಸೌಧದ ಕಲಾಪಕ್ಕೂ ಬಾರದೇ ಜನಪ್ರತಿನಿಧಿಗಳು ತಮ್ಮ ಅಸಡ್ಡೆಯ ಪ್ರದರ್ಶನ ನಡೆಸಿದರು. ಕೆಳಮನೆಯಲ್ಲಿ ಶಾಸಕರ ಕೊರತೆ ಕಂಡು ಬಂದರೆ, ಮೇಲ್ಮನೆಯಲ್ಲಿ ಸಚಿವರೇ ಇರಲಿಲ್ಲ!

ಬೆಳಗ್ಗೆ 11ಕ್ಕೆ ಕಲಾಪ ಆರಂಭಕ್ಕೆ ನಿಗದಿಯಾಗಿದ್ದು, 10.45ರಿಂದಲೇ ಬೆಲ್‌ ಹೊಡೆಯಲು ಶುರು ಮಾಡಲಾಯಿತು. ಆದರೆ ಯಾರೊಬ್ಬ ಶಾಸಕರೂ ಸದನದಲ್ಲಿ ಉಪಸ್ಥಿತರಿರಲೇ ಇಲ್ಲ. 11 ಗಂಟೆಗೆ ಸದನ ಆರಂಭವಾದಾಗ ಕಾಂಗ್ರೆಸ್‌ನ 10, ಬಿಜೆಪಿಯ 7 ಮತ್ತು ಜೆಡಿಎಸ್‌ನ 3 ಸದಸ್ಯರು ಮಾತ್ರ ಉಪಸ್ಥಿತರಿದ್ದರು. ಮೊದಲ ದಿನ ಸಂತಾಪಕ್ಕೆ ಕಾರ್ಯಕಲಾಪ ಸೀಮಿತವಾಗಿತ್ತಾದರೂ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲೂ ಸಹ ಸದಸ್ಯರು ಇರಲಿಲ್ಲ. ಬಳಿಕ, ಕೋರಂ ಕೊರತೆಯಿಂದ ಐದು ನಿಮಿಷಗಳ ವರೆಗೆ ಸದನವನ್ನು ಸ್ಪೀಕರ್‌ ಕೋಳಿವಾಡ ಅವರು ಮುಂದೂಡಿದರು.

ಈ ಬಾರಿ ಇದೇ ವಿಶೇಷ. ಅಧಿವೇಶನದ ಮೊದಲ ದಿನದ ಆರಂಭದ ಕಲಾಪವೇ ಕೋರಂ ಕೊರತೆಯಿಂದ ಮುಂದೂಡಲ್ಪಟ್ಟಿತು. ಇತ್ತೀಚಿನ ವರ್ಷಗಳಲ್ಲಿ ಮೊದಲ ದಿನವೇ ಕೋರಂ ಕೊರತೆಯಿಂದ ಕಲಾಪ ಮುಂದೂಡುವಂತಾಗಿದ್ದು ಕೂಡ ಒಂದು ದಾಖಲೆ!

ಐದು ನಿಮಿಷಗಳ ನಂತರ ಸದನ ಆರಂಭವಾದಾಗ ಉಪಸ್ಥಿತರಿದ್ದ ಸದಸ್ಯರ ಸಂಖ್ಯೆ 30. ಕಡೆಗೆ ಕೋರಂ ಸಮಸ್ಯೆ ಬಾರದ ಕಾರಣ ಕಲಾಪವನ್ನು ಆರಂಭಿಸಲಾಯಿತು. ಮಧ್ಯಾಹ್ನ 12 ಗಂಟೆ ವೇಳೆಗೆ ಸದನದಲ್ಲಿ 55 ಸದಸ್ಯರು ಉಪಸ್ಥಿತರಿದ್ದರು. ಸಂತಾಪ ನಿರ್ಣಯದ ಸಂದರ್ಭದಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಸದನದಲ್ಲಿ ಉಪಸ್ಥಿತರಿದ್ದ ಸದಸ್ಯರ ಸಂಖ್ಯೆ 130ಕ್ಕೆ ತಲುಪಿತ್ತು. ಕಾಂಗ್ರೆಸ್‌ನ 90, ಬಿಜೆಪಿಯ 25, ಜೆಡಿಎಸ್‌ನ 12, ಎಂಇಎಸ್‌ನ ಇಬ್ಬರು ಸದಸ್ಯರ ಜತೆಗೆ ರೈತಸಂಘದ ಪುಟ್ಟಣ್ಣಯ್ಯ ಸದನದಲ್ಲಿ ಉಪಸ್ಥಿತರಿದ್ದರು.

Advertisement

ಬಿಜೆಪಿಯ ಪರಿವರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಆ ಪಕ್ಷದ ಕೆಲವು ಶಾಸಕರು ಗೈರು ಹಾಜರಾಗಿದ್ದರು. ಉಳಿದಂತೆ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯಿಂದ ಒಟ್ಟು 100 ಕ್ಕೂ ಹೆಚ್ಚು ಸದಸ್ಯರು ಬೆಳಗಾವಿಗೆ ಬಂದರೂ ಅಧಿವೇಶನದತ್ತ ತಲೆ ಹಾಕಲಿಲ್ಲ. ಈಗಾಗಲೇ ಶಾಸಕರು ಚುನಾವಣೆ ಮೂಡ್‌ಗೆ ತೆರಳಿರುವುದರಿಂದ ಅಧಿವೇಶನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಹಿರಿಯ ಶಾಸಕರೊಬ್ಬರು ವಿಧಾನಸಭೆ ಮೊಗಸಾಲೆಯಲ್ಲಿ ಚಟಾಕಿ ಹಾರಿಸಿದರು.

ವಿಧಾನಸಭೆಯಲ್ಲಿ ಶಾಸಕರ ಟೈಮಿಂಗ್ಸ್‌
ಬೆಳಗ್ಗೆ 11 ಗಂಟೆ: 20 ಸದಸ್ಯರು
ಬೆಳಗ್ಗೆ 11.10: 30 ಸದಸ್ಯರು
ಮಧ್ಯಾಹ್ನ 12 ಗಂಟೆ: 55 ಸದಸ್ಯರು
ಮಧ್ಯಾಹ್ನ 1 ಗಂಟೆ: 130 ಸದಸ್ಯರು

ಮೇಲ್ಮನೆಯಲ್ಲಿ ಬಿಜೆಪಿ ಸಭಾತ್ಯಾಗ
ವಿಧಾನ ಪರಿಷತ್‌:
ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾಗಿದ್ದ ಸಚಿವರ ಪೈಕಿ ಬಹುತೇಕರು ಗೈರು ಹಾಜರಾಗಿದ್ದರಿಂದ ಸರ್ಕಾರದ ವಿರುದ್ಧ ಆಕ್ರೋಶಗೊಂಡು ಪ್ರತಿಪಕ್ಷ ಬಿಜೆಪಿ ಸಭಾತ್ಯಾಗ ನಡೆಸಿದ ಪ್ರಸಂಗ ಸೋಮವಾರ ನಡೆಯಿತು.

ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ, ಸದನದಲ್ಲಿ ಸೋಮವಾರ ಕಡ್ಡಾಯವಾಗಿ ಹಾಜರಿರಬೇಕಿದ್ದ ಸಚಿವರ ಪಟ್ಟಿಯನ್ನು ಪ್ರದರ್ಶಿಸಿ, ಸಚಿವರ ಹೆಸರುಗಳನ್ನು ಉಲ್ಲೇಖೀಸಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರಗಳು, ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎಂದು ಸರ್ಕಾರ ಅಧಿವೇಶನ ನಡೆಸುತ್ತಿದೆ.

ಆದರೆ, ಇಲ್ಲಿ ಸಚಿವರೇ ಇಲ್ಲ. ನಾವು ಯಾರಿಗೆ ಹೇಳಬೇಕು. ಸಚಿವರೇ ಇಲ್ಲ ಎಂದರೆ ನಾವ್ಯಾಕೆ ಸದನಕ್ಕೆ ಬರಬೇಕು ಎಂದು ಹರಿಹಾಯ್ದರು. ಕೆಲವರು ಇಲ್ಲೇ ಇದ್ದಾರೆ, ಉಳಿದವರು ಬರುತ್ತಾರೆ ಎಂದು ಆಡಳಿತ ಪಕ್ಷದ ಸದಸ್ಯರು ಸಮಜಾಯಿಷಿ ನೀಡಿದರಾದರೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಸದಸ್ಯರು ಸದನದಿಂದ ಹೊರನಡೆದರು.

ಸೋಮವಾರದ ಕಾರ್ಯಸೂಚಿ ಪಟ್ಟಿಯಂತೆ ಸದನದಲ್ಲಿ ಕಡ್ಡಾಯವಾಗಿ ಹಾಜರಿದ್ದು, ಉತ್ತರಿಸಬೇಕಾದ ಸಚಿವರ ಪಟ್ಟಿಯಲ್ಲಿ ರಮೇಶ್‌ಕುಮಾರ್‌, ಆಂಜನೇಯ, ಯು.ಟಿ.ಖಾದರ್‌, ಉಮಾಶ್ರಿ, ಡಾ.ಶರಣಪ್ರಕಾಶ್‌ ಪಾಟೀಲ್‌, ಎಂ.ಆರ್‌.ಸೀತಾರಾಂ, ಪ್ರಿಯಾಂಕ್‌ ಖರ್ಗೆ, ರೋಷನ್‌ ಬೇಗ್‌, ತನ್ವಿರ್‌ ಸೇs…, ರಮೇಶ್‌ ಜಾರಕಿಹೊಳಿ, ವಿನಯ್‌ ಕುಲಕರ್ಣಿ, ಎ.ಮಂಜು, ರುದ್ರಪ್ಪ ಲಮಾಣಿ, ಈಶ್ವರ್‌ ಖಂಡ್ರೆ, ಎಚ್‌.ಎಂ.ರೇವಣ್ಣ, ಆರ್‌.ಬಿ. ತಿಮ್ಮಾಪುರ ಅವರ ಹೆಸರಿತ್ತು. ಆದರೆ, ಸದನ ಆರಂಭವಾದಾಗ ಆಂಜನೇಯ, ಸೀತಾರಾಂ, ಖಾದರ್‌ ಮಾತ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next