Advertisement

Winter Session: ಇಂದು ಸದನದಲ್ಲಿ ಪಂಚಮಸಾಲಿ ಕದನ

11:29 PM Dec 11, 2024 | Team Udayavani |

ಬೆಂಗಳೂರು: ಪಂಚಮಸಾಲಿ ಮೀಸಲು ಹೋರಾಟದ ಬಿಸಿ ಗುರುವಾರ ವಿಧಾನಸಭೆಯಲ್ಲಿ ತೀವ್ರ ಜಟಾಪಟಿ ಸೃಷ್ಟಿಸುವ ಸಾಧ್ಯತೆ ಇದ್ದು, ಪ್ರಶ್ನೋತ್ತರ ಕಲಾಪ ಮುಗಿದ ತಕ್ಷಣ ಲಾಠಿಚಾರ್ಜ್‌ ವಿವಾದ ಸ್ಫೋಟಗೊಳ್ಳಲಿದೆ.

Advertisement

ಪಂಚಮಸಾಲಿ ಹೋರಾಟದ ಮುಂಚೂಣಿಯಲ್ಲಿರುವ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್‌, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸೇರಿದಂತೆ ಪಂಚಮಸಾಲಿ ಸಮುದಾಯದ ಶಾಸಕರು ಈ ವಿಚಾರವನ್ನು ಪ್ರಸ್ತಾಪಿಸಲಿದ್ದಾರೆ.

ವಕ್ಫ್ ವಿಚಾರವನ್ನು ಮೊದಲು ಚರ್ಚೆಗೆ ತೆಗೆದುಕೊಳ್ಳಬೇಕೆಂಬುದು ವಿಪಕ್ಷ ನಾಯಕ ಆರ್‌. ಅಶೋಕ್‌ ಅವರ ಅಭಿಪ್ರಾಯವಾಗಿದ್ದು, ಈ ಬಗ್ಗೆ ಸಾಕಷ್ಟು ಸಿದ್ಧತೆಯನ್ನೂ ನಡೆಸಿದ್ದಾರೆ. ಆದರೆ, ಪಂಚಮಸಾಲಿ ಸಮುದಾಯದ ವ ರ ಮೇಲೆ ಲಾಠಿ ಚಾರ್ಜ್‌ ಮಾಡಿರುವುದು ಹಾಗೂ ಸ್ವಾಮೀಜಿಗಳ ಬಂಧನ ವಿಚಾರ ಸಮುದಾಯದ ನಾಯಕರನ್ನು ಕೆರಳಿಸಿದೆ. ಹೀಗಾಗಿ ಪ್ರಶ್ನೋತ್ತರ ಕಲಾಪ ಮುಕ್ತಾಯಗೊಂಡ ತತ್‌ಕ್ಷಣ ಸರಕಾರ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ನಾಯಕರು ಪಟ್ಟು ಹಿಡಿಯುವ ಸಾಧ್ಯತೆ ಇದೆ.

ಸಿಎಂ ದಾಖಲೆ ಮಂಡಿಸುವರೇ?
ಸೋಮವಾರ ಚರ್ಚೆ ಪ್ರಾರಂಭವಾಗುತ್ತಿದ್ದಂತೆ ಹಿಂದಿನ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರವನ್ನು ಉಲ್ಲೇಖಿಸಿದ್ದ ಸಿಎಂ ಸಿದ್ದರಾಮಯ್ಯ ಬೇಕಿದ್ದರೆ ಅದನ್ನು ಸದನದಲ್ಲಿ ಮಂಡಿಸುತ್ತೇನೆ ಎಂದು ಸವಾಲು ಹಾಕಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ಡಾ| ಸಿ.ಎನ್‌. ಅಶ್ವಥ್‌ ನಾರಾಯಣ ಹಾಗೂ ಅರವಿಂದ ಬೆಲ್ಲದ್‌ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿರುವ ಎಲ್ಲ ಅಂಶಗಳನ್ನು ಬಹಿರಂಗಗೊಳಿಸುವಂತೆ ಸವಾಲು ಹಾಕಿದ್ದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ಈ ದಾಖಲೆ ಮಂಡಿಸುವರೇ ಎಂಬ ಕುತೂಹಲ ಸೃಷ್ಟಿಯಾಗಿದೆ.

ಆದರೆ, ಯಾವ ನಿಯಮದಡಿ ಪಂಚಮಸಾಲಿ ಮೀಸಲು ಹೋರಾಟದ ವಿಚಾರ ಪ್ರಸ್ತಾಪವಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉತ್ತರ ಕರ್ನಾಟಕ ಹಾಗೂ ಲಿಂಗಾಯತ ವಿಚಾರ ಇಲ್ಲಿ ಅಡಕವಾಗಿರುವುದರ ಜತೆಗೆ ಲಾಠಿ ಚಾರ್ಜ್‌ ಪ್ರಕರಣ ವಿವಾದ ಸೃಷ್ಟಿಸಿರುವುದರಿಂದ ವಕ್ಫ್ ಗಿಂತ ಮುಂಚಿತವಾಗಿ ಈ ವಿಚಾರವನ್ನು ಮಂಡಿಸಬೇಕೆಂದು ಬಿಜೆಪಿಯ ಒಂದು ಬಣ ಅಭಿಪ್ರಾಯ ಮಂಡಿಸಿದೆ.

Advertisement

ನ್ಯಾಯಾಂಗ ತನಿಖೆ ನಡೆಯಲಿ
ಪಂಚಮಸಾಲಿ ಸಮಾಜದ ಶಾಂತಿಯುತ ಪ್ರತಿಭಟನೆ, ಹೋರಾಟಗಾರರ ಮೇಲೆ ಸರಕಾರವು ಲಾಠಿಚಾರ್ಜ್‌ ನಡೆಸಿ ಅಮಾನವೀಯವಾಗಿ ವರ್ತಿಸಿದೆ. ಈ ಸಂಬಂಧ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು. ಲಾಠಿ ಪ್ರಹಾ ರ ದಿಂದ ಹೋರಾಟದಲ್ಲಿ ಪಾಲ್ಗೊಂಡಿದ್ದ ನೂರಾರು ಜನ ಲಿಂಗಾಯತ ಸಮುದಾಯಕ್ಕೆ ಸೇರಿದ ಪಂಚಮಸಾಲಿ ರೈತರು ಗಾಯಗೊಂಡಿದ್ದಾರೆ. ಸರ್ಕಾರದ್ದು ಸರ್ವಾಧಿಕಾರಿ ನಡೆ, ಪ್ರಜಾಪ್ರಭುತ್ವ ವಿರೋಧಿ ನಡೆ.
– ಸಿ.ಟಿ. ರವಿ, ವಿಧಾನ ಪರಿಷತ್‌ ಸದಸ್ಯ

ಸ್ವಾಭಿಮಾನಕ್ಕೆ ಪೆಟ್ಟು
ಪಂಚಮಸಾಲಿ ಹೋರಾಟಗಾರರ ಮೇಲೆ ಬಿದ್ದ ಲಾಠಿ ಏಟು ಇಡೀ ಲಿಂಗಾಯತ ಸಮುದಾಯದ ಆತ್ಮಸಾಕ್ಷಿ ಹಾಗೂ ಸ್ವಾಭಿಮಾನಕ್ಕೆ ಕಾಂಗ್ರೆಸ್‌ ಸರ್ಕಾರ ಕೊಟ್ಟ ಕೊಡಲಿಪೆಟ್ಟಾಗಿದೆ. ಉತ್ತರ ಕರ್ನಾಟಕದಲ್ಲಿ ಸಮುದಾಯದ ಮತ ಪಡೆದು, ರಾಜ್ಯದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಪಕ್ಷ, ಇಂದು ಲಿಂಗಾಯತರ ವಿರುದ್ಧವೇ ತಿರುಗಿ ಬಿದ್ದಿದೆ. ಕಾಂಗ್ರೆಸ್‌ ಪಕ್ಷದಲ್ಲಿ 34 ಜನ ಲಿಂಗಾಯತ ಶಾಸಕರಿದ್ದರೂ, ಈ ಕುಕೃತ್ಯದ ಕುರಿತು ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಿಲ್ಲ.
– ಅರವಿಂದ ಬೆಲ್ಲದ್‌,
ವಿಧಾನಸಭೆ ವಿಪಕ್ಷದ ಉಪನಾಯಕ

Advertisement

Udayavani is now on Telegram. Click here to join our channel and stay updated with the latest news.