Advertisement

ಮೈಕೊರೆಯುವ ಚಳಿಗೆ ತತ್ತರಿಸುತ್ತಿದೆ ರಾಜ್ಯ; ಮುಂದಿನ 4 ದಿನ ರಾಜ್ಯಾದ್ಯಂತ ತೀವ್ರ ಚಳಿ

02:59 AM Dec 23, 2021 | Team Udayavani |

ಬೆಂಗಳೂರು: ಅಕಾಲಿಕ ಮಳೆಯ ಅವಾಂತರ ಮುಗಿಯುತ್ತಿರುವಂತೆಯೇ ರಾಜ್ಯಾದ್ಯಂತ ಚಳಿ ಮೈಕೊರೆಯ ತೊಡಗಿದೆ. ಉತ್ತರ ಭಾರತದ ಚಳಿಗಾಳಿ ದಕ್ಷಿಣದತ್ತಲೂ ಬೀಸತೊಡಗಿದ್ದು, ರಾಜ್ಯದ ಬೀದರ್‌ನಲ್ಲಿ ಡಿಸೆಂಬರ್‌ ತಿಂಗಳ ಕನಿಷ್ಠ ತಾಪಮಾನ ದಾಖಲೆ ಮಟ್ಟಕ್ಕೆ ಕುಸಿದಿದೆ. ಇಲ್ಲಿ ಕಳೆದ 80 ವರ್ಷಗಳಲ್ಲೇ ಅತ್ಯಂತ ಕನಿಷ್ಠ ತಾಪಮಾನ ಬುಧವಾರ ದಾಖಲಾಗಿದೆ.

Advertisement

ಅಷ್ಟೇ ಅಲ್ಲ ಮುಂದಿನ 3-4 ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಚಳಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆಯನ್ನೂ ನೀಡಿದೆ.

ಬೀದರ್‌ನಲ್ಲಿ ಸೋಮವಾರ 9.7 ಡಿ.ಸೆ., ಮಂಗಳವಾರ 9.4 ಡಿ.ಸೆ. ಇದ್ದ ಕನಿಷ್ಠ ತಾಪಮಾನ ಬುಧವಾರ 9.0 ಡಿ.ಸೆ.ಗೆ ಇಳಿದಿದೆ. ಅಂದರೆ ಸಾಮಾನ್ಯ ದಿನಗಳಿಗಿಂತ 6.7 ಡಿ.ಸೆ.ನಷ್ಟು ತಾಪಮಾನ ಕಡಿಮೆಯಾಗಿದೆ. ಇದು ಡಿಸೆಂಬರ್‌ನಲ್ಲಿ ಈವರೆಗೆ ದಾಖಲಾದ ಅತೀ ಕನಿಷ್ಠ ತಾಪಮಾನ.

ಒಟ್ಟಾರೆ ಚಳಿಗಾಲದ ದಾಖಲೆ ಪ್ರಮಾಣವನ್ನು ಲೆಕ್ಕ ಹಾಕಿದರೆ ಬೀದರ್‌ನಲ್ಲಿ ಈವರೆಗಿನ ಕನಿಷ್ಠ ತಾಪಮಾನ 5.6 ಡಿ.ಸೆ.ನಷ್ಟಿದೆ. ಆದರೆ ಡಿಸೆಂಬರನ್ನು ಮಾತ್ರ ಪರಿಗಣಿಸಿದಾಗ ಒಂದಂಕಿಗೆ ಕನಿಷ್ಠ ತಾಪಮಾನ ದಾಖಲಾಗಿರುವ ಉದಾಹರಣೆಗಳಿರಲಿಲ್ಲ. ಆದರೆ ಬುಧವಾರ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಇದನ್ನೂ ಓದಿ:ಆನ್‌ಲೈನ್‌ ಗೇಮ್‌ ನಿಷೇಧ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

Advertisement

ವಾಹನ ಸಂಚಾರಕ್ಕೂ ಸಮಸ್ಯೆ
ಚಳಿಗಾಲ ಆರಂಭವಾಗಿ 20 ದಿನಗಳು ಕಳೆದಿದ್ದರೂ ಚಳಿ ಸಾಮಾನ್ಯ ವಾಗಿತ್ತು. ಉತ್ತರ ಹಾಗೂ ಈಶಾನ್ಯ ಭಾರತದಿಂದ ಬೀಸುತ್ತಿರುವ ಶೀತಗಾಳಿಯಿಂದ ಈಗ ದಿಢೀರ್‌ ಹೆಚ್ಚಳವಾಗಿದೆ. ಸಂಜೆಯಾಗುತ್ತಲೇ ಚಳಿಗಾಳಿ ಬೀಸುತ್ತಿರುವುದರಿಂದ ಜನ ಬೇಗನೆ ಮನೆ ಸೇರಿಕೊಳ್ಳುತ್ತಿದ್ದಾರೆ. ಬಯಲುಸೀಮೆ ಪ್ರದೇಶಗಳಲ್ಲಿ ಮೈ ಥರಗುಟ್ಟಿಸುವಂತಹ ರೀತಿಯಲ್ಲಿ ಚಳಿಯ ತೀವ್ರತೆ ಹೆಚ್ಚಳವಾಗಿದೆ. ಸೂರ್ಯ ಮುಳುಗುತ್ತಿದ್ದಂತೆ ಮಂಜು ಕವಿಯುತ್ತಿದ್ದು, ರಾತ್ರಿ ಮತ್ತು ಬೆಳಗಿನ ಜಾವ ಮಂಜು ಕವಿಯುವುದರಿಂದ ವಾಹನ ಸಂಚಾರ ಮತ್ತು ಜನರ ಸಂಚಾರಕ್ಕೆ ಅಡಚಣೆಯಾಗಿದೆ.

ಎಲ್ಲೆಲ್ಲಿ ಎಷ್ಟು ತಾಪಮಾನ?
ಬುಧವಾರ ಚಿಂತಾಮಣಿಯಲ್ಲಿ ಕನಿಷ್ಠ ತಾಪಮಾನ 10.3 ಡಿ.ಸೆ., ಉತ್ತರ ಕರ್ನಾಟಕದ ಬೆಳಗಾವಿ ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ 10.8 ಡಿ.ಸೆ., ಬಾಗಲಕೋಟೆ 11.0 ಡಿ.ಸೆ., ದಾವಣಗೆರೆ ಹಾಗೂ ಧಾರವಾಡ 11.3 ಡಿ.ಸೆ., ವಿಜಯಪುರ 11.4, ರಾಯಚೂರು ಹಾಗೂ ಹಾವೇರಿಯಲ್ಲಿ 12.0, ಚಿಕ್ಕಮಗಳೂರು 12.2, ಚಿತ್ರದುರ್ಗ 12.6, ಕೊಪ್ಪಳದಲ್ಲಿ 12.5, ಆಗುಂಬೆ 13.0, ಶಿವಮೊಗ್ಗ 13.4, ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣ ಪ್ರದೇಶದಲ್ಲಿ 13.5, ಗದಗ 13.6, ಬೆಂಗಳೂರು ನಗರದಲ್ಲಿ 14.2ರಷ್ಟು ತಾಪಮಾನ ಕಂಡುಬಂದಿದೆ.

ಶಿಮ್ಲಾವನ್ನೇ ಮೀರಿಸಿದ ದಿಲ್ಲಿ!
ದೇಶಾದ್ಯಂತ ಚಳಿ ತೀವ್ರಗೊಳ್ಳುತ್ತಿದ್ದು ದಿಲ್ಲಿ ಅಕ್ಷರಶಃ ನಡುಗತೊಡಗಿದೆ. ಬುಧವಾರ 4.4 ಡಿ.ಸೆ. ತಾಪಮಾನ ದಾಖ ಲಾಗಿದ್ದು, ಚಳಿಯಲ್ಲಿ ಶಿಮ್ಲಾವನ್ನೇ ಮೀರಿಸಿದೆ. ಶಿಮ್ಲಾದಲ್ಲಿ ತಾಪ ಮಾನ 5.4 ಡಿ.ಸೆ. ಆಗಿತ್ತು. ಉತ್ತರಾಖಂಡ, ಉತ್ತರ ಪ್ರದೇಶ, ಒಡಿಶಾ, ಛತ್ತೀಸ್‌ಗಢ, ಪಂಜಾಬ್‌, ಹರ್ಯಾಣದಲ್ಲೂ ತೀವ್ರ ಚಳಿ ಮುಂದುವರಿದಿದೆ. ಹೈದರಾಬಾದ್‌ನಲ್ಲಿ ಶೀತಗಾಳಿ ಹೆಚ್ಚು ತ್ತಿರುವ ಕಾರಣ ಮುಂದಿನ 4 ದಿನ ಗಳ ಕಾಲ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next