ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರ ಜಿಮಖಾನ ಮೈದಾನ ಹಾಗೂ ಗದಗ ರಸ್ತೆಯ ರೈಲ್ವೆ ಮೈದಾನದಲ್ಲಿ ನಡೆಯುತ್ತಿರುವ ಲೀಲಾವತಿ ಪ್ಯಾಲೇಸ್ ಕಪ್ ಸೀಸನ್ 2 ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್ 14 ವರ್ಷದೊಳಗಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಮವಾರ ಎನ್ ಸಿಸಿಸಿ, ಎಚ್‌ಸಿಎ, ಡಿಸಿಎ ಹಾಗೂ ಎಫ್‌ಸಿಎ ತಂಡಗಳು ಜಯ ಸಾಧಿಸಿವೆ.
ಜಿಮಖಾನ್ ಮೈದಾನದಲ್ಲಿ ನಡೆದ ಧಾರವಾಡ ಕ್ರಿಕೆಟ್ ಅಕಾಡೆಮಿ ಜತೆ ಚೈತನ್ಯ ಸ್ಫೋರ್ಟ್ಸ್ ಫೌಂಡೇಶನ್ ಮಧ್ಯ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಪಡೆದ ಧಾರವಾಡ ಕ್ರಿಕೆಟ್ ಅಕಾಡೆಮಿ ತಂಡ 30 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 150 ರನ್ ಪೇರಿಸಿತು. ನಂತರ ಬ್ಯಾಟಿಂಗ್ ಮಾಡಿದ ಚೈತನ್ಯ ನ್ಪೋರ್ಟ್ಸ್ ಫೌಂಡೇಶನ್ ತಂಡ 28.2 ಓವರ್‌ಗಳಲ್ಲಿ 131 ರನ್ ಗಳಿಸಿ ಸರ್ವಪತನ ಕಾಣುವ ಮೂಲಕ ಸೋಲೊಪ್ಪಿಕೊಂಡಿತು.
ಧಾರವಾಡ ಕ್ರಿಕೆಟ್ ಅಕಾಡೆಮಿ ತಂಡ 19 ರನ್ ಗಳ ಅಂತರದಿಂದ ಜಯ ತನ್ನದಾಗಿಸಿಕೊಂಡಿತು. ಪ್ರಣವ್ ಭಟ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಎರಡನೇ ಪಂದ್ಯದಲ್ಲಿ ಚಾಂಪಿಯನ್ಸ್ ನೆಟ್ ಹುಬ್ಬಳ್ಳಿ ಜತೆ ಸ್ಫೋರ್ಟ್ಸ್ ಅಕಾಡೆಮಿ ಆಫ್ ಗದಗ ತಂಡದ ಮಧ್ಯ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹುಬ್ಬಳ್ಳಿ ಚಾಂಪಿಯನ್ಸ್ ನೆಟ್ ತಂಡ 30 ಓವರ್‌ಗಳಲ್ಲಿ 6 ವಿಕೆಟ್‌ಗೆ 116 ಕಲೆ ಹಾಕಿತು.
ನಂತರ ಬ್ಯಾಟಿಂಗ್ ನಡೆಸಿದ ಗದಗ ಸ್ಫೋರ್ಟ್ಸ್ ಅಕಾಡೆಮಿ 30 ಓವರ್‌ಗಳಲ್ಲಿ 6 ವಿಕೆಟ್‌ಗೆ 88 ರನ್ ಗಳಿಸಿ ಪರಾಜಯಗೊಂಡಿತು. ಚಾಂಪಿಯನ್ಸ್ ನೆಟ್ ಹುಬ್ಬಳ್ಳಿ ತಂಡ 28 ರನ್‌ಗಳಿಂದ ವಿಜಯದ ಪತಾಕೆ ಹಾರಿಸಿತು. ಹೆತ್ ಪಟೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ರೈಲ್ವೆ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಅಕಾಡೆಮಿ ಧಾರವಾಡ ಜತೆ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ ತಂಡದ ಮಧ್ಯೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಫಸ್ಟ್ ಕ್ರಿಕೆಟ್ ಅಕಾಡೆಮಿ ಧಾರವಾಡ ತಂಡ 30 ಓವರ್‌ಗಳಲ್ಲಿ 7 ವಿಕೆಟ್ ಗೆ 234 ರನ್ ಕಲೆ ಹಾಕಿತು. ನಂತರ ಬ್ಯಾಟಿಂಗ್ ಮಾಡಿದ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ ತಂಡ 30 ಓವರ್‌ಗಳಲ್ಲಿ 7 ವಿಕೆಟ್‌ಗೆ 89 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಪರಾಭವಗೊಂಡಿತು.
ಮೊದಲ ಕ್ರಿಕೆಟ್ ಅಕಾಡೆಮಿ ಧಾರವಾಡ 145 ರನ್‌ಗಳಿಂದ ವಿಜಯದ ನಗೆ ಬೀರಿತು. ಸುಜಯ್ ಕೊರವಾರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮಧ್ಯಾಹ್ನ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಜತೆ ಕ್ರಿಕೆಟ್ ಕೋಚಿಂಗ್ ಇನ್‌ಸ್ಟಿಟ್ಯೂಟ್, ಬೆಳಗಾವಿ ತಂಡದ ಮಧ್ಯೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕ್ರಿಕೆಟ್ ಕೋಚಿಂಗ್ ಸಂಸ್ಥೆ ಬೆಳಗಾವಿ ತಂಡ 28.1 ಓವರ್‌ಗಳಲ್ಲಿ 10 ವಿಕೆಟ್‌ಗೆ 107 ರನ್ ಗಳಿಸಿತು. ನಂತರ ಬ್ಯಾಟಿಂಗ್ ನಡೆಸಿದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ತಂಡ 23.4 ಓವರ್ ಗಳಲ್ಲಿ 6 ವಿಕೆಟ್‌ಗೆ 108 ರನ್ ಗಳಿಸಿ 4 ವಿಕೆಟ್ ಗಳಿಂದ ಜಯ ಸಾಧಿಸಿತು. ಆದಿತ್ಯ ಖೀಲಾರೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.