ಬಾಗಲಕೋಟೆ: ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಅಲ್ಲಲ್ಲಿ ತಗಡಿನ ಶೆಡ್, ಮರಗಳು ಬಿದ್ದಿವೆ. ಮಳೆಯ ವೇಳೆ ಬಿದ್ದ ಸಿಡಿಲಿಗೆ ಓರ್ವ ವ್ಯಕ್ತಿ ಕೂಡ ಮೃತಪಟ್ಟಿದ್ದಾನೆ. ಸಂಜೆ 4ರ ಹೊತ್ತಿಗೆ ಬಿರುಗಾಳಿ ಆರಂಭಗೊಂಡಿದ್ದು, ಅರ್ಧ ಗಂಟೆ ಬಳಿಕ ಜೋರಾಗಿ ಮಳೆ ಸುರಿಯಲಾರಂಭಿಸಿತು. ಇದರಿಂದ ಜಿಲ್ಲೆಯಾದ್ಯಂತ ವಿದ್ಯುತ್ ಕಡಿತಗೊಳಿಸಲಾಯಿತು. ಬಿರುಗಾಳಿಗೆ ಜಿಲ್ಲಾ ಕ್ರೀಡಾಂಗಣದ ವೇದಿಕೆಗೆ ಅಳವಡಿಸಿದ್ದ ಮೇಲ್ಚಾವಣಿ ತಗಡು ಹಾರಿ ಹೋಗಿವೆ.
ಬನಹಟ್ಟಿ: ಗುರುವಾರ ರಾತ್ರಿ ಬೀಸಿದ ಬಿರುಗಾಳಿಗೆ ರಬಕವಿ ಬನಹಟ್ಟಿ ನಗರದ ಕೆಲವು ಪ್ರದೇಶಗಳ ಮನೆಗಳ ಪತ್ರಾಸ, ಶೆಡ್‌ಗಳು ಹಾರಿ ಹೋಗಿವೆ.
ಗುರುವಾರ ರಾತ್ರಿ ಇಡೀ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಅದರಲ್ಲೂ ಜೋರಾಗಿ ಬೀಸಿದ ಬಿರುಗಾಳಿಗೆ ಕೆಲವು ತೋಟಗಳಲ್ಲಿ ಬೆಳೆದು ನಿಂತ ಕುಳೆ ಕಬ್ಬು ಹಾಗೂ ಬೇಸಿಗೆ ಜೋಳದ ಬೆಳೆ ನೆಲಕ್ಕಚ್ಚಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಬನಹಟ್ಟಿ ನಗರದ ರವಿ ಹಾಸಿಲಕರ, ವಿಜಯ ಹಾಸಿಲಕರ, ರಾಜು ಹಾಸಿಕಲರ ಸೇರಿದಂತೆ ಅನೇಕ ಕುಟುಂಬಗಳ ವಾಸವಿರುವ ತೋಟದ ಮನೆಗಳು ಹಾನಿಗೊಂಡಿವೆ. ಸಂಬಂಧಿಸಿದ ಅಧಿಕಾರಿಗಳು ಹಾನಿಗೊಳಗಾದ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕೆರೂರ: ಪಟ್ಟಣದಲ್ಲಿ ಶುಕ್ರವಾರ ಗುಡುಗು ಮಿಶ್ರಿತ ಬಿರುಸಿನಿಂದ ಮಳೆ ಸುರಿದಿದೆ. ಬಿಸಿಲ ಸೆಕೆಯಿಂದ ಬಸವಳಿದಿದ್ದ ಜನತೆಗೆ ತಂಪಿನ ವಾತಾವರಣ ನಿರ್ಮಾಣವಾಯಿತು. ಮಳೆಯಲ್ಲೆ ದ್ಯಾಮಮ್ಮ, ದುರ್ಗಮ್ಮರ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಬಿರುಗಾಳಿ ಸಮೇತ ಮಳೆಯಾದ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿತ್ತು. ಇದರಿಂದ ರಾತ್ರಿ ಕತ್ತಲೆಯಲ್ಲಿಯೇ ನಾಗರಿಕರು ಪರದಾಡಿದರು.