ಸುಬ್ರಹ್ಮಣ್ಯ/ಬೆಳ್ಳಾರೆ : ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಎಡಮಂಗಲ ಪರಿಸರದಲ್ಲಿ ಅಪಾರ ಹಾನಿಯಾಗಿದೆ. ಮರ ಬಿದ್ದು ಮನೆಗಳಿಗೆ ಹಾನಿಯಾದರೆ, ಭಾರೀ ಗಾಳಿಗೆ ಎಡಮಂಗಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ಬೃಹತ್ ಗಾತ್ರದ ಆಲದ ಮರ ಬುಡ ಸಮೇತ ಉರುಳಿದೆ. ದೇವಸ್ಥಾನದ ಗೋಪುರ ಮತ್ತು ಛಾವಣಿಯ ಹೆಂಚುಗಳು ಹಾರಿ ಹೋಗಿ ಹಾನಿ ಸಂಭವಿಸಿದೆ.
ಎಡಮಂಗಲ ಪರಿಸರದ ನಾರಾಯಣ ನಾಯ್ಕ, ರಾಮಣ್ಣ ಗೌಡ ಖಂಡಿಗ, ಚಂದ್ರಾವತಿ ಯಶವಂತ ಗೌಡ, ಗಿರೀಶ್
ನಡುಬೈಲು, ಜಗದೀಶ್, ಕುಂಞಿ, ಹುಕ್ರ, ವಾರಿಜಾ ಸುಶೀಲಾ, ಭವ್ಯಾ, ನಡುಬೈಲು ಸುದರ್ಶನ್, ದಡ್ಡು ಗೋಪಿನಾಥ್
ಮೊದಲಾದವರ ಮನೆಯ ಹೆಂಚುಗಳ ಹಾರಿ ಹೋಗಿವೆ.
ಗಾಳಿ ಸಮೇತ ಭಾರೀ ಮಳೆ ಸುರಿದಿದ್ದು, ವಿದ್ಯುತ್ ಕಂಬಗಳು ಬಿದ್ದು ಹಾನಿಯಾಗಿದೆ. ರೈತರ ತೋಟಗಳಲ್ಲಿ ಅಡಿಕೆ ಮರಗಳು ನೆಲಕ್ಕುರುಳಿವೆ. ವಿದ್ಯುತ್ ಕಂಬಗಳು ಬಿದ್ದಿರುವುದರಿಂದ ಈ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಎಡಮಂಗಲ ಗ್ರಾಮದ ಲೆಕ್ಕಾಧಿಕಾರಿ ಬಸವರಾಜ್ ಬಿ. ಹಾಗೂ ಗ್ರಾಮ ಸಹಾಯಕರಾದ ನಾರಾಯಣ ಎಂಜೀರ್,
ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಂದರ ಗೌಡ ದೋಳ್ತಿಲ, ಉಪಾಧ್ಯಕ್ಷೆ ಮೋಹಿನಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗಿರಿ ಮುಂತಾದವರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.