Advertisement

ಪಯಸ್ವಿನಿ ನದಿಗೆ ಕಿಂಡಿ ಅಣೆಕಟ್ಟು;ಗುತ್ತಿಗೆದಾರರ ನಿರ್ಲಕ್ಷ್ಯ

10:35 PM Jun 13, 2019 | Sriram |

ಬದಿಯಡ್ಕ: ಕುಂಟಾರು ದೇಗುಲ ಸಮೀಪ ಪಯಸ್ವಿನಿ ನದಿಗೆ ನಿರ್ಮಿಸಿದ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದರೂ ಅಸಮರ್ಪಕತೆಯ ಬಗ್ಗೆ ಇನ್ನೂ ದೂರುಗಳು ಕೇಳುತ್ತಲೇ ಇವೆ.

Advertisement

ಬೆಳ್ಳೂರು ಜಲ ವಿತರಣ ಯೋಜನೆಯ ಸ್ಥಳಕ್ಕಿಂತ ಕೆಳ ಭಾಗದಲ್ಲಿ, ಅಂದರೆ ಕುಂಟಾರು ತೂಗು ಸೇತುವೆಗಿಂತ 75 ಮೀಟರ್‌ನಷ್ಟು ದೂರದಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು (ಚೆಕ್‌ ಡ್ಯಾಂ) ನಿರ್ಮಿಸಲಾಗಿದೆ. ಪಯಸ್ವಿನಿ ನದಿಯ ನೀರನ್ನು ತಡೆಹಿಡಿಯಲು ಎರಡು ಮೀಟರ್‌ ಎತ್ತರದ, ಸುಮಾರು 93 ಮೀ. ಉದ್ದದ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಲಾಗಿದೆ. ನಿರ್ಮಾಣ ಕಾಮಗಾರಿ ಆರಂಭಗೊಂಡಂದಿನಿಂದ ಸ್ಥಳೀಯರನ್ನು ಕೆಲವು ಸಮಸ್ಯೆಗಳು ಕಾಡುತ್ತಲೇ ಇವೆ. ತೀವ್ರ ನೀರಿನ ಕೊರತೆ ಎದುರಿಸುತ್ತಿರುವಾಗಲೇ ಚೆಕ್‌ ಡ್ಯಾಮ್‌ ನಿರ್ಮಾಣ ಭಾರೀ ನೀರಿನ ಕೊರತೆಗೂ ಮತ್ತಷ್ಟು ಕಾರಣವಾಯಿತು.

ನದಿಗೆ ಅಡ್ಡವಾಗಿ ಅಣೆಕಟ್ಟನ್ನು ನಿರ್ಮಿಸಲು ಆರಂಭಗೊಂಡಾಗ ನೀರಿನ ಹರಿವು ಸಾಕಷ್ಟಿತ್ತು. ಈ ನೀರನ್ನು ತಡೆಗಟ್ಟಿ ಅಣೆಕಟ್ಟಿನ ಅಡಿಪಾಯ ನಿರ್ಮಿಸಲು ಕುಂಟಾರು ದೇಗುಲ ಪರಿಸರದ ದೊಡ್ಡ ಗುಡ್ಡದ ಮಣ್ಣನ್ನೆಲ್ಲÉ ನದಿಯಲ್ಲಿ ರಾಶಿ ಹಾಕಲಾಯಿತು. ಪರಿಣಾಮವಾಗಿ ನದಿಯಲ್ಲಿ ಸಾವಿರಾರು ಲೋಡ್‌ ಮಣ್ಣು ತುಂಬಿ ಈ ಬಯಲು ಪ್ರದೇಶವಾಗಿಸಿತು. ಈಗ ನದಿಯಲ್ಲಿ ನೀರಿನ ಸುಳಿವೇ ಇಲ್ಲದಾಗಿದೆ. ಅಡಿಪಾಯ ನಿರ್ಮಾಣ ಸಲೀಸಾಗಿ ಮುಗಿದಿದೆ. ರಾಶಿ ಹಾಕಿದ ಈ ಮಣ್ಣನ್ನು ಹಾಗೆಯೇ ಬಿಡು ವಂತೆಯೂ ಇಲ್ಲ. ಈ ಸಂದರ್ಭದಲ್ಲಿ ನದಿಯ ಮಣ್ಣಿನ ರಾಶಿಗೆ ಗತಿ ಕಾಣಿಸಲು ಕಡು ಬೇಸಗೆಯಲ್ಲಿ ನದಿಯ ಉಸಿರಾಗಿರುವ ನೀರಿನ ಕಯಗಳನ್ನು ಮುಚ್ಚಿ ಬಯಲಾಯಿತು. ಪರಿಣಾಮವಾಗಿ ನೀರಿನ ಒಸರು ಸಮಾಧಿ ಯಾಯಿತು. ಇಲ್ಲಿನ ಕೃಷಿಕರು ಸದಾ ಉಪಯೋಗಿಸುತ್ತಿದ್ದ ನೀರಿನ ಮೂಲ ಇಲ್ಲದಾಗಿದೆ. ಸಾರ್ವಜನಿಕರಿಗೆ ನೀರು ವಿತರಿಸುವ ಓಟೆ ಪ್ರಮಾಣ ಜಲ ವಿತರಣೆ ಯೋಜನೆಗೆ ನೀರಿಲ್ಲದ ಸ್ಥಿತಿ ಉಂಟಾಗಿದೆ.

ಮಳೆಗಾಲದಲ್ಲಿ ನೀರಿನ ಹೊಡೆತಕ್ಕೆ ನದಿಯ ದಡವು ನೀರು ಪಾಲಾಗುವ ಸಾಧ್ಯತೆ ಇರುವ ಕಾರಣ ಈ ಅಣೆಕಟ್ಟು ಕಟ್ಟಿದ ಸ್ಥಳದ ಇಕ್ಕಡೆಗಳಲ್ಲಿ ಎರಡು ಮೀಟರ್‌ನಷ್ಟು ಎತ್ತರಕ್ಕೆ ಕಾಂಕ್ರೀಟ್‌ ಭಿತ್ತಿಗಳನ್ನು ಕಟ್ಟಲಾಗಿತ್ತು. ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಅದನ್ನು ಏರಿಸಲಾಗಿದೆ. ಆದರೆ ಈಗ ಕಟ್ಟಿದ ಭಿತ್ತಿಗಳ ಗಟ್ಟಿತನ ಸಂಶಯಕ್ಕೆ ಎಡೆ ಮಾಡುವಂತಿದೆ.

ಬೆಳ್ಳೂರು ಗ್ರಾ. ಪಂ.ನ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ವಿಶ್ವ ಬ್ಯಾಂಕಿನ ನೆರವಿನೊಂದಿಗೆ ರಾಜ್ಯ ಸರಕಾರ, ಗ್ರಾಮ ಪಂ.ನ ಆರ್ಥಿಕ ಸಹಾಯದೊಂದಿಗೆ ಪಂಚಾಯತ್‌ನ 1,126 ಕುಟುಂಬಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ನಿರ್ಮಿಸಿದ ಯೋಜನೆಗೆ ಚೆಕ್‌ಡ್ಯಾಮ್‌ ನಿರ್ಮಾಣ ಕಾಮಗಾರಿ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಜಲ ವಿತರಣೆ ಆರಂಭ ಗೊಂಡೀತೇ? ಈಗಿನ ಸ್ಥಿತಿಯನ್ನು ನೋಡಿದರೆ ಅಣೆಕಟ್ಟು ಕಟ್ಟಿದರೂ ನೀರು ಪೂರೈಕೆಗೆ ಅಗತ್ಯವಾದ ನೀರು ಲಭಿಸುವುದು ಕಷ್ಟ ಸಾಧ್ಯ!

Advertisement

ಕಯಗಳು ಮುಚ್ಚುವ ಆತಂಕ
ಇಲ್ಲಿ ಕೆಲವು ಕುಟುಂಬಗಳ ಪಾಲಿಗೆ ಆಧಾರ ವಾಗಿರುವುದು ಡ್ಯಾಮ್‌ನ ಹತ್ತಿರದಲ್ಲಿರುವ ಬೃಹತ್‌ ಕಯ. ಇದರಲ್ಲಿ ಈಗಲೂ ಒಂದಡಿ ಯಷ್ಟು ನೀರಿದೆ. ಈ ಕಯವೂ ಮಳೆಗಾಲದಲ್ಲಿ ಮುಚ್ಚಿಹೋಗುವ ಸಾಧ್ಯತೆ ಇದೆ. ಇದು ನೀರಿನ ಸಂಗ್ರಹಕ್ಕೆ ಧಕ್ಕೆ ತರಬಹುದು.

ಮಣ್ಣನ್ನು ತೆರವುಗೊಳಿಸಬೇಕು ಎಂಬ ಸೂಚನೆ ಕರಾರಿನಲ್ಲಿದ್ದರೂ ನದಿಯಲ್ಲಿಯೇ ಚೆಕ್‌ ಡ್ಯಾಮ್‌ನ ಕೆಳಭಾಗದಲ್ಲಿ ನೂರಾರು ಲೋಡ್‌ ಮಣ್ಣನ್ನು ರಾಶಿ ಹಾಕಲಾಗಿದೆ. ಇದು ಮಳೆ ಬಂದರೆ ಇದು ನೀರಿನಲ್ಲಿ ಕೊಚ್ಚಿ ಹೋಗಲಿ ಎಂಬ ಉದ್ದೇಶದಿಂದಲೇ ರಾಶಿ ಹಾಕಲಾಗಿದ್ದು ಪರಿಣಾಮವಾಗಿ ನೀರು ಕಲಕು ವುದು ಮಾತ್ರವಲ್ಲ, ಇಷ್ಟೊಂದು ಮಣ್ಣೂ ಸಮುದ್ರ ಪಾಲಾಗಲಿದೆ. ಈ ಬಗ್ಗೆ ಅಧಿಕೃತರು ಗಮನಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next