Advertisement

ಸರಕಾರದ ಸಾಧನೆ ಜನರಿಗೆ ತಿಳಿಸಿ ಬಿಜೆಪಿ ಗೆಲ್ಲಿಸಿ: ಬೊಮ್ಮಾಯಿ

06:28 PM Apr 16, 2022 | Team Udayavani |

ಗದಗ: ಬಡವರ ಶ್ರೇಯೋಭಿವೃದ್ಧಿಯೊಂದಿಗೆ ವಿರೋಧ ಪಕ್ಷಗಳ ಷಡ್ಯಂತ್ರ, ಹುನ್ನಾರಗಳನ್ನೂ ಮೆಟ್ಟಿ ನಿಲ್ಲಬೇಕು. ಆ ಮೂಲಕ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೂಮ್ಮೆ ಅಧಿಕಾರಕ್ಕೆ ತರಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

Advertisement

ಬಿಜೆಪಿ ಜಿಲ್ಲಾ ಘಟಕ ನಗರದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದ ಸಮಗ್ರ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ ಎಂದರು.

ಹಿಂದಿನ 5 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್‌ ಪರಿಶಿಷ್ಟ ವಿದ್ಯಾರ್ಥಿಗಳ ವಸತಿ ನಿಲಯಗಳ ಹಾಸಿಗೆ, ತಲೆದಿಂಬಿನಿಂದ ಹಿಡಿದು ಬೆಂಗಳೂರಿನ ಬಿಡಿಎ ನಿವೇಶನಗಳ ವರೆಗೆ ವ್ಯಾಪಕ ಲೂಟಿಯಾಗಿದೆ. ಎಲ್ಲ ರಂಗದಲ್ಲಿ ಭ್ರಷ್ಟಾಚಾರ ಹಬ್ಬಿಸಿರುವ ಖ್ಯಾತಿ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದರು.

ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ಸದ್ಯ ರಾಜ್ಯ ಸರಕಾರದಲ್ಲಿ ಆರ್ಥಿಕ ಕೊರತೆಯಿದೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಆರ್ಥಿಕ ಸ್ಥಿತಿ ಸರಿಯಿಲ್ಲದಿದ್ದರೆ, ಬೃಹತ್‌ ಗಾತ್ರದ ಆಯವ್ಯಯ ಮಂಡನೆ, ಗದಗನಂಥ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ನೀಡಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು.ಆರ್ಥಿಕ ಸ್ಥಿತಿ ಸುಧಾರಿಸಿದೆ. ಅದರ ಫಲವಾಗಿ ನಾವು ನಿರೀಕ್ಷೆ ಮಾಡಿದ್ದಕ್ಕಿಂತ 15 ಸಾವಿರ ಕೋಟಿ ರೂ. ಹೆಚ್ಚುವರಿಯಾಗಿ ತೆರಿಗೆ ಸಂಗ್ರಹವಾಗಿದೆ.

ಕೇಂದ್ರದಿಂದಲೂ ಹೆಚ್ಚಿನ ಅನುದಾನ ಹರಿದು ಬಂದಿದೆ. ಇದೆಲ್ಲದರ ಪರಿಣಾಮ ಮೊನ್ನೆ ನಡೆದ ಬಜೆಟ್‌ ಅ ಧಿವೇಶನದಲ್ಲಿ 25 ಸಾವಿರ ಕೋಟಿ ರೂ. ವೆಚ್ಚ ಮಾಡಲು ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದರು.

Advertisement

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ರೋಣ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಜಿಲ್ಲೆಯ ಬಹುವರ್ಷಗಳ ಬೇಡಿಕೆಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. 1,305 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದು ಅಭಿನಂದನೀಯ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮಿಂದಾದ ಸಣ್ಣ ತಪ್ಪಿನಿಂದಾಗಿ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿ ಸಿದೆ. ಆದರೆ, ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ಜನ ಬಿಜೆಪಿಗೆ ಅ ಧಿಕಾರ ನೀಡಿದ್ದಾರೆ. ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಜನರ ಆಶೋತ್ತರಗಳನ್ನು ಈಡೇರಿಸಿ, ಮುಂಬರುವ ಚುನಾವಣೆಯಲ್ಲಿ ಗದಗಿನಲ್ಲಿ ಬಿಜೆಪಿ ಜಯಭೇರಿ
ಬಾರಿಸಬೇಕು. ಬೊಮ್ಮಾಯಿ ಅವರ ಕೈ ಬಲಪಡಿಸಬೇಕೆಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೊಂಡ ತೆರಿಗೆ ಸುಧಾರಣೆ ನೀತಿಗಳಿಂದಾಗಿ ಸರಕಾರದ ಮೇಲಿನ ಸಾಲದ ಹೊರೆ ಕಡಿಮೆಯಾಗುತ್ತಿದೆ. ಹಿಂದಿನ ಕಾಂಗ್ರೆಸ್‌ ಸರಕಾರಗಳು ಮಾಡಿದ ಸಾಲವನ್ನೂ ಹಂತ ಹಂತವಾಗಿ ತೀರಿಸುತ್ತಿದೆ ಎಂದು ವಿವರಿಸಿದರು.

ವೇದಿಕೆ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಶಾಸಕ ರಾಮಣ್ಣ ಲಮಾಣಿ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ರಾಜ್ಯ ದ್ರಾಕ್ಷಾರಸ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ನಗರಸಭೆ ಅಧ್ಯಕ್ಷೆ ಉಷಾದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ನಾನು ಸಚಿವನಾಗಿದ್ದಾಗ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರ ಭಾಗವಾಗಿದ್ದ ಜಾಲವಾಡಿ ಯೋಜನೆ ಜಾರಿಗೂ ನಾವೇ ಅಧಿಕಾರಕ್ಕೆ ಬರಬೇಕಾಯಿತು. ಜಿಲ್ಲೆಯವರೇ ಹಿಂದೆ ನೀರಾವರಿ ಸಚಿವರಾಗಿದ್ದರು ಯೋಜನೆಗೆ ಯಾಕೆ ಗಮನ ಹರಿಸಿಲ್ಲ.

∙ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಯೋಜನೆ ಪೂರ್ಣಗೊಳ್ಳುವ ಮುನ್ನವೇ ಗದಗ-ಬೆಟಗೇರಿ ಅವಳಿ ನಗರದಲ್ಲಿ 24×7 ಕುಡಿಯುವ ನೀರಿನ ಯೋಜನೆಗೆ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟಿಸಲಾಗಿದೆ. ಇದೊಂದು ವಿಫಲ ಯೋಜನೆಯಾಗಿದ್ದು, ನಗರದಲ್ಲಿ 24×7 ಅಂದರೆ, 7 ತಿಂಗಳಲ್ಲಿ 24 ದಿನ ನೀರು ಬರುವ ಯೋಜನೆ ಎನ್ನುವಂತಾಗಿದೆ. ಅದನ್ನು ಸರಿಪಡಿಸಲು ಮುಖ್ಯಮಂತ್ರಿಗಳು ಅಗತ್ಯ ನೆರವು ನೀಡಬೇಕು.
∙ಅನಿಲ್‌ ಮೆಣಸಿನಕಾಯಿ, ಬಿಜೆಪಿ ಯುವ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next