ಹುನಗುಂದ: ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಕೊಡಲಿಲ್ಲ. ಆದ್ದರಿಂದ ಮೈತ್ರಿ ಸರ್ಕಾರ ಮಾಡಲಾಯಿತು. ಈ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರನ್ನು ಕಣಕ್ಕೀಳಿಸಲಾಗಿದೆ. ನಿಮ್ಮ ಮನೆ ಮಗಳು ವೀಣಾ ಅವರನ್ನು ಆಯ್ಕೆ ಮಾಡುವ ಹೊಣೆ ನಿಮ್ಮ ಮೇಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ರವಿವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಇರುವದರಿಂದ ಕಾಂಗ್ರೆಸ್ 21, ಜೆಡಿಎಸ್ 7 ಅಭ್ಯರ್ಥಿ ಕಣಕ್ಕೆ ಇಳಿಸಲಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ಒಬ್ಬರಿಗೆ ಮಹಿಳಾ
ಅಭ್ಯರ್ಥಿಗೆ ಅವಕಾಶ ನೀಡಲಾಗಿದೆ. ಜೆಡಿಎಸ್‌ನಲ್ಲೂ ನೀಡಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಮಹಿಳೆಗೆ ತಮ್ಮ ಮತ ನೀಡಿ ಸಂಸತ್‌ನಲ್ಲಿ ಬಾಗಲಕೋಟೆ ಜಿಲ್ಲೆಯ ಧ್ವನಿಯಾಗುವ ಅವಕಾಶ ಕಲ್ಪಿಸಬೇಕು ಎಂದರು.
ಯಾರ ಕೈಗೆ ಅಧಿಕಾರ ಕೊಡಬೇಕು ಎಂಬುದನ್ನು ಜನರು ತೀರ್ಮಾನ ಮಾಡಬೇಕು. ದೀನ ದಲಿತ, ಹಿಂದುಳಿದ ವರ್ಗಗಳ ಹಿತ ಯಾರು ಕಾಪಾಡುತ್ತಾರೆ ಅವರಿಗೆ ಮತ ನೀಡಿ ಅವಕಾಶ ನೀಡಬೇಕು. ಕಾಂಗ್ರೆಸ್ ಪಕ್ಷ ಎಲ್ಲರ ಹಿತವನ್ನು ಕಾಪಾಡಿಕೊಂಡು ಬಂದಿದೆ. ಕಾಂಗ್ರೆಸ್ ನೀಡಿದ್ದ 165 ಭರವಸೆಗಳನ್ನು ಐದು ವರ್ಷದ ಆಡಳಿತದಲ್ಲಿ ಈಡೇರಿಸಿದೆ. ಪ್ರಧಾನಿ ಮೋದಿ, ಚುನಾವಣೆಗೂ ಮುನ್ನ ಏನು ಭರವಸೆ ನೀಡಿದ್ದರು, ಯಾವ ಭರವಸೆ ಈಡೇರಿಸಿದ್ದಾರೆ ಎಂದು ಹೇಳಲಿ ಎಂದು ಒತ್ತಾಯಿಸಿದರು.
ಐದು ವರ್ಷ, ಜನರು ಮೋದಿ ಆಡಳಿತ ನೋಡಿದ್ದಾರೆ. ಹೀಗಾಗಿ ಬಣ್ಣದ ಮೋಡಿನ ಮಾತಿಗೆ ಜನ ಬೆಂಬಲಿಸಲ್ಲ. ನಮ್ಮ ದೇಶದ
ಸ್ವಾತಂತ್ರ್ಯ ಸಮಯದಲ್ಲಿ ಮೋದಿ ಹುಟ್ಟಿದ್ದರೇ. ಮೋದಿಗಿಂತ ನಾನು ನಾಲ್ಕು ವರ್ಷ ದೊಡ್ಡವ. ದೇಶಭಕ್ತಿ ಬಗ್ಗೆ ಮಾತಾಡ್ತಿರಾ. ಬಿಜೆಪಿಯಲ್ಲಿ ದೇಶಕ್ಕಾಗಿ ಒಬ್ಬರಾದರೂ ಸತ್ತಿದ್ದಾರಾ? ಮತ್ತೇನು ದೇಶದ ಬಗ್ಗೆ ಬೊಗಳೆ ಬೀಡುತ್ತಿರಾ ಎಂದು ಪ್ರಶ್ನಿಸಿದರು.
ದೇಶದಲ್ಲಿ ಈ ಹಿಂದೆ 15 ಸರ್ಜಿಕಲ್ ಸ್ಟ್ರೈಕ್ ಆಗಿವೆ. ಒಂದು ಸರ್ಜಿಕಲ್ ಸ್ಟ್ರೈಕ್ ಮಾಡಿ ಸೈನಿಕರ ಹೆಸರನ್ನು ರಾಜಕೀಯಕ್ಕೆ ಬಳಸುತ್ತಿರುವುದು ನಾಚಿಕೆಯಾಗಬೇಕು ಎಂದರು.
ನರೇಂದ್ರ ಮೋದಿಯವರು ದೇಶದ ಇತಿಹಾಸ ಓದಿಕೊಳ್ಳಬೇಕು. ಗದ್ದಿಗೌಡರು, 15 ವರ್ಷಗಳಲ್ಲಿ ಬಾಗಲಕೋಟೆ ಜಿಲ್ಲೆಗೆ, ಹುನಗುಂದ ಕ್ಕೆ ಏನು ಮಾಡಿದ್ದಾರೆ. ಅದಕ್ಕೆ ನನ್ನ ಮುಖ ನೋಡದೇ ಮೋದಿ ನೋಡಿ ವೋಟ್ ಹಾಕಿ ಅಂತಿದ್ದಾರೆ ? ಎಂದು ಟೀಕಿಸಿದರು.
ನಾನು ಸಿಎಂ ಆಗಿದ್ದಾಗ ಹುನಗುಂದಕ್ಕೆ ನಾಲ್ಕು ಸಾವಿರ ಕೋಟಿ ಅನುದಾನವನ್ನು ನೀಡಿದ್ದೇ. ಅರವತ್ತು ಸಾವಿರ ಎಕರೆಗೆ ಹನಿ ನೀರಾವರಿ ಅನುಕೂಲ ಮಾಡಲಾಗಿದೆ. ಬಿಜೆಪಿಯವರಂತೆ ಅವರನ್ನೂ ನೋಡಿ ವೋಟ್ ಹಾಕಿ ಎಂದು ಹೇಳುತ್ತಿಲ್ಲ. ನಮ್ಮ ಅಭಿವೃದ್ಧಿ ಕಾರ್ಯ ನೋಡಿ ಮತ ಕೊಡಿ ಎನ್ನುತ್ತಿದ್ದೇವೆ. ರಾಹುಲ್ ಗಾಂಧಿ, ನನ್ನ ಹಾಗೂ ಅಭ್ಯರ್ಥಿ ವೀಣಾ ಅವರ ಮುಖ ನೋಡಿ ವೋಟ್ ಕೊಡಿ. ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹೆಣ್ಣುಮಗಳಿಗೆ ಅವಕಾಶ ಕೊಡಿ ಎಂದು ಕೇಳಿಕೊಂಡರು.
ಈಶ್ವರಪ್ಪ ಯೋಗ್ಯತೆ ಎಲ್ಲರಿಗೂ ಗೊತ್ತು: ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಈಶ್ವರಪ್ಪ, ಬಿಜೆಪಿಯಿಂದ ಒಬ್ಬ ಕುರುಬರಿಗೂ ಟಿಕೆಟ್ ಕೊಡಿಸಲು ಆಗಿಲ್ಲ. ಕಾಂಗ್ರೆಸ್‌ನಿಂದ ಪಂಚಮಸಾಲಿ, ಬೆಸ್ತರ, ರೆಡ್ಡಿ, ಮುಸ್ಲಿಂ ಹೀಗೆ ಹಿಂದುಳಿದ ವರ್ಗಕ್ಕೆ ಟಿಕೆಟ್ ಕಲ್ಪಿಸಿದ್ದೇವೆ. ಸ್ವಾಭಿಮಾನ ಇದ್ದ ರೆ, ಅನ್ಯಾಯ ಮಾಡಿದ ಬಿಜೆಪಿಗೆ ಒಂದೇ ಒಂದು ವೋಟ್ ಕೊಡಬಾರದು. ಕೊಟ್ಟರೆ ಅತ್ಮವಂಚನೆ ಮಾಡಿಕೊಂಡಂತೆ. ಲೋಕಸಭೆಗೆ ಈ ತಾಲೂಕಿನ ಮಹಿಳೆಗೆ ಅವಕಾಶ ಕೊಡಲಾಗಿದೆ. ಈ ಕ್ಷೇತ್ರದಲ್ಲಿ 50 ಸಾವಿರ ಲೀಡ್ ಕೊಡಬೇಕು. ಯಾವುದೇ ಜಾತಿ ಎಂದು ನೋಡಬೇಡಿ. ಸಂವಿಧಾನ ಉಳಿಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಸುಧಾರಣೆಗಾಗಿ ಹೆಣ್ಣು ಮಗಳಿಗೆ ಮತ ನೀಡಿ, ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ವಿಧಾನಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ಮಾಜಿ ಸಚಿವ ಎಚ್.ವೈ. ಮೇಟಿ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಡಾಣ ಎಂ.ಪಿ.ನಾಡಗೌಡ್ರ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಆರ್. ನವಲಿಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡ್ಡಮನಿ, ರವೀಂದ್ರ ಕಲಬುರ್ಗಿ, ತಾಪಂ ಅಧ್ಯಕ್ಷ ಮಹಾಂತೇಶ ಕಡಿವಾಲ, ಮುಖಂಡರಾದ ರಾಜಕುಮಾರ ಬಾದವಾಡಗಿ,ಯಮನಪ್ಪ ಬೆಣ್ಣಿ, ನೀಲಪ್ಪ ತಪೇಲಿ, ಶಂಕ್ರಪ್ಪ ನೇಗಲಿ, ದೇವು ಡಂಬಾಳ ಉಪಸ್ಥಿತರಿದ್ದರು.