Advertisement

ವಿಂಬಲ್ಡನ್‌ ಟೆನಿಸ್‌: ನವೋಮಿ ಒಸಾಕಾ, ಜ್ವರೇವ್‌ ಪತನ

10:00 AM Jul 04, 2019 | Team Udayavani |

ಲಂಡನ್‌: ವಿಂಬಲ್ಡನ್‌ ಟೆನಿಸ್‌ ಕೂಟದ ಮೊದಲ ಸುತ್ತಿನಲ್ಲಿ ಅಗ್ರ ಆಟಗಾರರಲ್ಲಿ ವೀನಸ್‌ ವಿಲಿಯಮ್ಸ್‌, ದ್ವಿತೀಯ ಶ್ರೇಯಾಂಕದ ನವೋಮಿ ಒಸಾಕಾ ಮತ್ತು ಪುರುಷರಲ್ಲಿ ಆರನೇ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವರೇವ್‌ ಸೋಲು ಕಂಡು ಕೂಟದಿಂದ ಹೊರ ನಡೆದಿದ್ದಾರೆ.

Advertisement

ಮೂರನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ಒಸಾಕಾ ಮೊದಲ ಸುತ್ತಿನಲ್ಲಿ ಕಜಾಕ್‌ಸ್ಥಾನದ ಯೂಲಿಯಾ ಪುತಿನ್‌ತ್ಸೇವಾ ಅವರ ಕೈಯಲ್ಲಿ 7-6 (7-4), 6-2 ಸೆಟ್‌ಗಳಿಂದ ಸೋತು ಹೊರಬಿದ್ದರು. ನಂಬರ್‌ ವನ್‌ ಕಳೆದುಕೊಂಡ ಬಳಿಕ ಭಾರ ಕಳೆದುಕೊಂಡ ಅನುಭವವಾಗಿತ್ತು. ಆದರೆ ಸೆಂಟರ್‌ ಕೋರ್ಟ್‌ನಲ್ಲಿ ಉತ್ತಮವಾಗಿ ಆಡಿದರೂ ಗೆಲುವು ಸಾಧಿಸಲು ಆಗಲಿಲ್ಲ ಎಂದು 21ರ ಹರೆಯದ ಜಪಾನಿಯ ಒಸಾಕಾ ಹೇಳಿದ್ದಾರೆ.

ಪ್ಲಿಸ್ಕೋವಾ ಮುನ್ನಡೆ

ಮೂರನೇ ಶ್ರೇಯಾಂಕದ ಕ್ಯಾರೋಲಿನಾ ಪ್ಲಿಸ್ಕೋವಾ ಕಠಿನ ಹೋರಾಟದಲ್ಲಿ ಚೀನದ ಝು ಲಿನ್‌ ಅವರನ್ನು 6-2, 7-6 (7-4), ಸೆಟ್‌ಗಳಿಂದ ಸೋಲಿಸಿ ದ್ವಿತೀಯ ಸುತ್ತಿಗೇರಿದ್ದಾರೆ.

ಕಳೆದ ಶನಿವಾರ ನಡೆದ ಈಸ್ಟ್‌ಬೋರ್ನ್ ಕೂಟದ ಪ್ರಶಸ್ತಿ ಗೆದ್ದಿರುವ ಪ್ಲಿಸ್ಕೋವಾ ದ್ವಿತೀಯ ಸೆಟ್‌ನಲ್ಲಿ ಎದುರಾಳಿಯಿಂದ ಬಹಳಷ್ಟು ಪ್ರತಿರೋಧ ಎದುರಿಸಿದ್ದರು. ದ್ವಿತೀಯ ಸುತ್ತಿನಲ್ಲಿ ಪ್ಲಿಸ್ಕೋವಾ ಅವರು ಮೊನಿಕಾ ಪ್ಯುಗ್‌ ಅವರನ್ನು ಎದುರಿಸಲಿದ್ದಾರೆ.

ಪ್ರಜ್ಞೇಶ್‌ಗೆ ಸೋಲು

ಭಾರತದ ಅಗ್ರ ಸಿಂಗಲ್ಸ್ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌ ಮೊದಲ ಸುತ್ತಿನಲ್ಲಿ ಸೋತಿದ್ದಾರೆ. ಕೆನಡದ 17ನೇ ರ್‍ಯಾಂಕಿನ ಮಿಲೋಸ್‌ ರೊನಿಕ್‌ ಅವರೆದುರು ಆಡಿದ ಪ್ರಜ್ಞೇಶ್‌ ಮೊದಲ ಸೆಟ್‌ನಲ್ಲಿ ಉತ್ತಮ ಹೋರಾಟ ಸಂಘಟಿಸಿದರು. ಆದರೆ ಅಂತಿಮವಾಗಿ 6-7 (1-7), 4-6, 2-6 ಸೆಟ್‌ಗಳಿಂದ ಶರಣಾದರು. ಪ್ರಜ್ಞೇಶ್‌ ಮೂರನೇ ಬಾರಿ ಮೊದಲ ಸುತ್ತಿನಲ್ಲಿ ಸೋತಿದ್ದಾರೆ. ಈ ಮೊದಲು ಆಸ್ಟ್ರೇಲಿಯನ್‌ ಮತ್ತು ಫ್ರೆಂಚ್ ಓಪನ್‌ನ ಮೊದಲ ಸುತ್ತಿನಲ್ಲಿ ಅವರು ಆಘಾತ ಅನುಭವಿಸಿದ್ದರು. ಪ್ರಜ್ಞೇಶ್‌ ಮಾತ್ರ ಮುಖ್ಯ ಡ್ರಾಕ್ಕೆ ಆಯ್ಕೆಯಾದ ಭಾರತದ ಏಕೈಕ ಆಟಗಾರರಾಗಿದ್ದಾರೆ.
ಜ್ವರೇವ್‌ಗೆ ಆಘಾತ

ಪುರುಷರ ವಿಭಾಗದಲ್ಲಿ ಜರ್ಮನಿಯ ಆರನೇ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವರೇವ್‌ ಮೊದಲ ಸುತ್ತಿನಲ್ಲಿ ಆಘಾತ ಅನುಭವಿಸಿದ್ದಾರೆ. ಭವಿಷ್ಯದಲ್ಲಿ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆಲ್ಲುವ ತಾರೆಯಲ್ಲಿ ಒಬ್ಬರಾಗಿರುವ ಜ್ವರೇವ್‌ ಜೆಕ್‌ ಗಣರಾಜ್ಯದ ಅರ್ಹತಾ ಆಟಗಾರ ಜಿರಿ ವಾಸೆಲಿ ಅವರೆದುರು 4-6, 6-3, 6-2, 7-5 ಸೆಟ್‌ಗಳಿಂದ ಸೋತು ಹೊರಬಿದ್ದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next