Advertisement

ಇಂದಿನಿಂದ ವಿಂಬಲ್ಡನ್‌ ಪ್ರಶಸ್ತಿ ನಿರೀಕ್ಷೆಯಲ್ಲಿ ಜೊಕೋ, ಫೆಡರರ್‌

10:17 AM Jul 01, 2019 | keerthan |

ಲಂಡನ್‌: ವಿಶ್ವಕಪ್‌ ಕ್ರಿಕೆಟ್‌ ಕೂಟದ ನಡುವೆ ಲಂಡನ್‌ನಲ್ಲಿಯೇ ವರ್ಷದ ಮೂರನೇ ಗ್ರ್ಯಾನ್‌ ಸ್ಲಾಮ್‌ ಕೂಟವಾದ ವಿಂಬಲ್ಡನ್‌ ಸೋಮವಾರ ಆರಂಭವಾಗುತ್ತಿದೆ.

Advertisement

ವಿಶ್ವ ಖ್ಯಾತಿಯ ನೊವಾಕ್‌ ಜೊಕೋವಿಕ್‌, ರೋಜರ್‌ ಫೆಡರರ್‌ ಮತ್ತು ನಡಾಲ್‌ ಅವರು ವಿಂಬಲ್ಡನ್‌ನಲ್ಲಿ ತಮ್ಮ ಸಾಧನೆ ಉತ್ತಮಪಡಿಸಲು ಪ್ರಯತ್ನಿಸಲಿದ್ದಾರೆ. ಇದೇ ವೇಳೆ ಈ ಮೂವರು ತಾರೆಯರನ್ನು ಸದೆಬಡಿದು ಪ್ರಶಸ್ತಿ ಎತ್ತಲು ಇತರ ಆಟಗಾರರು ಹಾತೊರೆಯುತ್ತಿದ್ದಾರೆ.

ಹಾಲಿ ಚಾಂಪಿಯನ್‌ ಆಗಿರುವ ವಿಶ್ವದ ನಂಬರ್‌ ವನ್‌ ಜೊಕೋವಿಕ್‌ ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಐದನೇ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಹೋರಾಡಲಿದ್ದಾರೆ. ಕಳೆದ ವರ್ಷ ಇಲ್ಲಿ ಪ್ರಶಸ್ತಿ ಗೆದ್ದ ಬಳಿಕ ಜೊಕೋ ಪ್ರಚಂಡ ಫಾರ್ಮ್ ತೋರ್ಪಡಿಸಿದ್ದಾರೆ. ಯುಎಸ್‌ ಮತ್ತು ಆಸ್ಟ್ರೇಲಿಯನ್‌ ಓಪನ್‌ ಗೆದ್ದಿರುವ ಅವರು ಮಳೆಯಿಂದ ತೊಂದರೆಗೊಳಗಾದ ಫ್ರೆಂಚ್‌ ಓಪನ್‌ನ ಸೆಮಿಫೈನಲ್‌ನಲ್ಲಿ ಡೊಮಿನಿಕ್‌ ಥೀಮ್‌ ಅವರಿಗೆ ಶರಣಾಗಿದ್ದರು. ಇಲ್ಲದಿದ್ದರೆ ಎರಡನೇ ಬಾರಿ ಎಲ್ಲ ನಾಲ್ಕು ಗ್ರ್ಯಾನ್‌ ಸ್ಲಾಮ್‌ ಕೂಟದ ಪ್ರಶಸ್ತಿ ಗೆದ್ದ ಎರಡನೇ ಆಟಗಾರ ಎನಿಸಿಕೊಳ್ಳುತ್ತಿದ್ದರು.

ಜೊಕೋವಿಕ್‌ ಸೋಮವಾರ ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ ಫಿಲಿಪ್‌ ಕೊಹ್ಲಶ್ರೀಬರ್‌ ಅವರನ್ನು ಎದುರಿಸಲಿದ್ದಾರೆ. ಇವರಿಬ್ಬರು ಪರಸ್ಪರ 12 ಬಾರಿ ಮುಖಾಮುಖೀಯಾಗಿದ್ದು, 10 ಬಾರಿ ಜೊಕೋವಿಕ್‌ ಗೆಲುವು ಸಾಧಿಸಿದ್ದಾರೆ.

ಗೆದ್ದರೆ ಹಿರಿಯ ಚಾಂಪಿಯನ್‌
ದ್ವಿತೀಯ ಶ್ರೇಯಾಂಕದ ರೋಜರ್‌ ಫೆಡರರ್‌ 9ನೇ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 38ರ ಹರೆಯದ ಅವರು ಒಂದು ವೇಳೆ ಪ್ರಶಸ್ತಿ ಗೆದ್ದರೆ ಅತೀ ಹಿರಿಯ ಗ್ರ್ಯಾನ್‌ ಸ್ಲಾಮ್‌ ಚಾಂಪಿಯನ್‌ ಎನಿಸಿಕೊಳ್ಳಲಿದ್ದಾರೆ. 1999ರಲ್ಲಿ ಮೊದಲ ಬಾರಿ ವಿಂಬಲ್ಡನ್‌ನಲ್ಲಿ ಆಡಿದ್ದ ಫೆಡರರ್‌ 21ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

Advertisement

ಒಂದೇ ಗ್ರ್ಯಾನ್‌ಸ್ಲಾಮ್‌ನಲ್ಲಿ 100ನೇ ಗೆಲುವು ದಾಖಲಿಸಲು ಫೆಡರರ್‌ಗೆ ಇನ್ನು ಐದು ಗೆಲುವು ಬೇಕಾಗಿದೆ. ಅವರು ಈ ಕೂಟದಲ್ಲಿ ಈ ಸಾಧನೆ ಮಾಡುವ ಸಾಧ್ಯತೆಯಿದೆ. ಫೆಡರರ್‌ ಮೊದಲ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾದ ಲಾಯ್ಡ ಹ್ಯಾರಿಸ್‌ ಅವರನ್ನು ಎದುರಿಸಲಿದ್ದಾರೆ. ಹ್ಯಾರಿಸ್‌ ಈ ಕೂಟದ ಮೂಲಕ ವಿಂಬಲ್ಡನ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಪ್ರಶಸ್ತಿ ನಿರೀಕ್ಷೆಯಲ್ಲಿ ನಡಾಲ್‌
12ನೇ ಬಾರಿ ಫ್ರೆಂಚ್‌ ಓಪನ್‌ ಗೆದ್ದಿರುವ ನಡಾಲ್‌ ಈ ಬಾರಿ ಇಲ್ಲಿಯೂ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 2008 ಮತ್ತು 2010ರಲ್ಲಿ ವಿಂಬಲ್ಡನ್‌ ಚಾಂಪಿಯನ್‌ ಆಗಿರುವ ನಡಾಲ್‌ ಕಳೆದ ವರ್ಷ ಸೆಮಿಫೈನಲ್‌ನಲ್ಲಿ ಕಠಿನ ಹೋರಾಟ ನಡೆಸಿ ಜೊಕೋವಿಕ್‌ಗೆ ಶರಣಾಗಿದ್ದರು. ಫೈನಲ್‌ ಸೆಟ್‌ 10 8ರ ವರೆಗೆ ಸಾಗಿತ್ತು. ನಡಾಲ್‌ ಮೊದಲ ಸುತ್ತಿನಲ್ಲಿ ಜಪಾನ್‌ನ ಯೂಚಿ ಸುಗಿಟ ಅವರನ್ನು ಎದುರಿಸಲಿದ್ದಾರೆ.

ತ್ರಿವಳಿ ವಿಶ್ವ ಖ್ಯಾತರು
ಜೊಕೋವಿಕ್‌, ಫೆಡರರ್‌ ಮತ್ತು ನಡಾಲ್‌ ವಿಶ್ವ ಟೆನಿಸ್‌ನ ಪ್ರಚಂಡ ತಾರೆಯರಾಗಿದ್ದಾರೆ. ಕಳೆದ 64 ಗ್ರ್ಯಾನ್‌ಸ್ಲಾಮ್‌ ಕೂಟಗಳಲ್ಲಿ ಈ ಮೂವರು 53ರಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂವರನ್ನು ಬಿಟ್ಟರೆ ವಿಶ್ವ ರ್‍ಯಾಂಕಿಂಗ್‌ನ ಅನಂತರದ ಮೂರು ಸ್ಥಾನಗಳಲ್ಲಿ ಥೀಮ್‌, ಅಲೆಕ್ಸಾಂಡರ್‌ ಜ್ವರೇವ್‌ ಮತ್ತು ಸ್ಟಿಫಾನೋಸ್‌ ಸಿಸಿಪಸ್‌ ಇದ್ದಾರೆ. ಆದರೆ ಈ ಮೂವರು ಇನ್ನೂ ವಿಂಬಲ್ಡನ್‌ನಲ್ಲಿ 16ರ ಸುತ್ತು ದಾಟಿಲ್ಲ!

ಒತ್ತಡದಲ್ಲಿಲ್ಲ: ಆ್ಯಶ್ಲಿ ಬಾರ್ಟಿ
ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಈಗ ವಿಶ್ವದ ನಂಬರ್‌ ವನ್‌ ಆಟಗಾರ್ತಿಯಾಗಿದ್ದಾರೆ. ಆದರೆ ಅವರು ವಿಂಬಲ್ಡನ್‌ನಲ್ಲಿ ಇನ್ನೂ ಮೂರನೇ ಸುತ್ತು ದಾಟಿಲ್ಲ. 23ರ ಹರೆಯದ ಬಾರ್ಟಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕೂಟದ ಪ್ರಶಸ್ತಿ ಗೆಲ್ಲುವ ಮೂಲಕ ನಂಬರ್‌ ವನ್‌ ಸ್ಥಾನಕ್ಕೇರಿದ್ದರು. ಪ್ರಶಸ್ತಿ ಗೆದ್ದ ಬಾರ್ಟಿ ಹುಲ್ಲುಹಾಸಿನ ಅಂಗಣದಲ್ಲೂ ತನಗೆ ಶಕ್ತಿಯಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ತನಗೇನೂ ಒತ್ತಡವಿಲ್ಲ ಎಂದು ಹೇಳಿದ್ದಾರೆ.
ಫ್ರೆಂಚ್‌ ಓಪನ್‌ ಗೆದ್ದಿರುವ ಬಾರ್ಟಿ ಅವರಿಗೆ ಹಾಲಿ ಚಾಂಪಿಯನ್‌ ಆ್ಯಂಜೆಲಿಕ್‌ ಕೆರ್ಬರ್‌ ಬಲುದೊಡ್ಡ ಸ್ಪರ್ಧಿಯಾಗಿದ್ದಾರೆ. 37ರ ಹರೆಯದ ಸೆರೆನಾ ವಿಲಿಯಮ್ಸ್‌ ಅವರಿಗೆ ಪ್ರಾಯವಾಗಿದ್ದರೆ ನವೋಮಿ ಒಸಾಕಾ ಅವರು ಫಾರ್ಮ್ಗೆ ಮರಳಲು ಒದ್ದಾಡುತ್ತಿದ್ದಾರೆ. ಪೆಟ್ರಾ ಕ್ವಿಟೋವಾ ಕೈನೋವಿನಿಂದ ಬಳಲುತ್ತಿದ್ದಾರೆ.

ಪ್ರಜ್ಞೆಶ್ ಗೆ ರಾನಿಕ್‌ ಎದುರಾಳಿ
ವಿಂಬಲ್ಡನ್‌ ಟೆನಿಸ್‌ ಪಂದ್ಯಾವಳಿಯ ಮುಖ್ಯ ಸುತ್ತಿನಲ್ಲಿ ಆಡುವ ಅರ್ಹತೆ ಗಳಿಸಿರುವ ಭಾರತದ ಪ್ರಜ್ಞೆಶ್ ಗುಣೇಶ್ವರನ್‌ ತಮ್ಮ ಮೊದಲ ಪಂದ್ಯದಲ್ಲೇ ಕೆನಡಾದ ಖ್ಯಾತ ಆಟಗಾರ ಮಿಲೋಸ್‌ ರಾನಿಕ್‌ ಅವರನ್ನು ಎದುರಿಸಲಿದ್ದಾರೆ. ಇಲ್ಲಿ ಗೆಲ್ಲುವುದು ಗುಣೇಶ್ವರನ್‌ಗೆ ಭಾರೀ ಸವಾಲಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next