ಲಂಡನ್: ಸಾನಿಯಾ ಮಿರ್ಜಾ ಗೆಲುವಿನೊಂದಿಗೆ ವಿಂಬಲ್ಡನ್ ಪುನರಾಗಮನವನ್ನು ಸಾರಿದ್ದಾರೆ. ಗುರುವಾರ “ಕೋರ್ಟ್ ನಂ. 8’ರಲ್ಲಿ ಸಾಗಿದ ವನಿತಾ ಡಬಲ್ಸ್ ಪ್ರಥಮ ಸುತ್ತಿನ ಸ್ಪರ್ಧೆಯಲ್ಲಿ ಸಾನಿಯಾ ಮತ್ತು ಅಮೆರಿಕದ ಬೆಥನಿ ಮಾಟೆಕ್ ಸ್ಯಾಂಡ್ಸ್ ಸೇರಿಕೊಂಡು 6ನೇ ಶ್ರೇಯಾಂಕದ ಅಲೆಕ್ಸಾ ಗೌರಾಚಿ-ಡಿಸೈರೆ ಕ್ರಾವ್‌ಜಿಕ್ ಅವರನ್ನು 7-5, 6-3 ಅಂತರದಿಂದ ಪರಾಭವಗೊಳಿಸಿದರು. ಒಂದು ಗಂಟೆ, 28 ನಿಮಿಷಗಳ ಕಾಲ ಇವರ ಸೆಣಸಾಟ ಸಾಗಿತು.
ಈ ಪಂದ್ಯದಲ್ಲಿ ದಾಖಲಿಸಿದ ತಮ್ಮ ಏಕೈಕ ಏಸ್ ಮೂಲಕ ಸಾನಿಯಾ ಗೆಲು ವನ್ನು ಸಾರಿದರು. ಇದು ಸಾನಿಯಾ ಅವರ ಟೆನಿಸ್ ಬಾಳ್ವೆಯ 121ನೇ ಗೆಲುವು.
2017ರ ಬಳಿಕ ಸಾನಿಯಾ ಮಿರ್ಜಾ ಪಾಲ್ಗೊಳ್ಳುತ್ತಿರುವ ಮೊದಲ ವಿಂಬಲ್ಡನ್ ಪಂದ್ಯಾವಳಿ ಇದಾಗಿದೆ. ಮುಂದಿನ ಟೋಕಿಯೊ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಸಾನಿಯಾ ಗೆಲುವು ಹಾಗೂ ಮುನ್ನಡೆ ಭಾರತಕ್ಕೆ ಮಹತ್ವದ್ದಾಗಿದೆ. ಅಲ್ಲಿ ಅಂಕಿತಾ ರೈನಾ ಜತೆ ಸಾನಿಯಾ ಡಬಲ್ಸ್‌ನಲ್ಲಿ ಸೆಣ ಸಲಿದ್ದಾರೆ. ಅಂಕಿತಾಗೂ ವಿಂಬಲ್ಡನ್ ಅರ್ಹತೆ ಲಭಿಸಿದ್ದು, ಅಮೆರಿಕದ ಲಾರೆನ್ ಡೇವಿಸ್ ಜತೆ ಕಣಕ್ಕಿಳಿಯಲಿದ್ದಾರೆ.
ಜ್ವೆರೇವ್ 3ನೇ ಸುತ್ತಿಗೆ:
ಪುರುಷರ ಸಿಂಗಲ್ಸ್‌ನಲ್ಲಿ ಜರ್ಮನಿಯ 3ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೇವ್ 3ನೇ ಸುತ್ತು ತಲುಪಿದ್ದಾರೆ. ಗುರುವಾರದ ಮುಖಾಮುಖೀಯಲ್ಲಿ ಅವರು ಅಮೆರಿಕದ ಟೆನ್ನಿಸ್ ಸ್ಯಾಂಡ್‌ಗ್ರೆನ್ ವಿರುದ್ಧ 7-5, 6-2, 6-3 ಅಂತರದ ಗೆಲುವು ಸಾಧಿಸಿದರು.
ಸ್ಲೊವೇನಿಯಾದ ಅಲ್ಜಾಜ್ ಬೆಡೆನೆ ಜಪಾನಿನ ಯೊಶಿಹಿಟೊ ನಿಶಿಯೋಕ ವಿರುದ್ಧ 6-1, 6-0, 6-2 ಜಯ ಸಾಧಿಸಿದರು. ಸ್ಪೇನಿನ ರಾಬರ್ಟೊ ಬೌಟಿಸ್ಟ ಅಗುಟ್ ಕೂಡ 3ನೇ ಸುತ್ತಿಗೆ ಏರಿದರು.
ಸಕ್ಕರಿ ಪರಾಭವ : ಫ್ರೆಂಚ್ ಓಪನ್ ಸೆಮಿಫೈನಲಿಸ್ಟ್ ಮರಿಯಾ ಸಕ್ಕರಿ ವಿಂಬಲ್ಡನ್‌ನಲ್ಲಿ ದ್ವಿತೀಯ ಸುತ್ತಿನಲ್ಲೇ ಎಡವಿದರು. ಗ್ರೀಸ್‌ನ ಆಟಗಾರ್ತಿಯನ್ನು ಅಮೆರಿಕದ ಶೆಲ್ಬಿ ರೋಜರ್ 7-5, 6-4 ಅಂತರದಿಂದ ಪರಾಭವಗೊಳಿಸಿದರು.
ರೊಲ್ಯಾಂಡ್ ಗ್ಯಾರಸ್ ರನ್ನರ್ ಅಪ್ ಅನಾಸ್ತಾಸಿಯಾ ಪಾವ್ಲುಚೆಂಕೋವಾ 3ನೇ ಸುತ್ತಿಗೆ ಓಟ ಬೆಳೆಸಿದ್ದಾರೆ. ಅವರು ಜೆಕ್ ಆಟಗಾರ್ತಿ ಕ್ರಿಸ್ಟಿನಾ ಪ್ಲಿಸ್ಕೋವಾಗೆ 6-3, 6-3 ನೇರ ಸೆಟ್ ಸೋಲುಣಿಸಿದರು.ಲಾತ್ವಿಯಾದ ಅನಾಸ್ತಾಸಿಯಾ ಸೆವಸ್ತೋವಾ, ಸ್ಪೇನಿನ ಪೌಲಾ ಬಡೋಸಾ ಕೂಡ ದ್ವಿತೀಯ ಸುತ್ತು ದಾಟಿದ್ದಾರೆ.