ಕಾನ್ಪುರ: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟದ ಗೌರವವನ್ನು ಕೇನ್ ವಿಲಿಯಮ್ಸನ್ ಪಡೆ ಸಂಪಾದಿಸಿತು. ಮೊದಲು ಭಾರತೀಯ ಬ್ಯಾಟರ್ ಗಳನ್ನು ಕಟ್ಟಿಹಾಕಿದರೆ, ನಂತರ ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ ಕಿವೀಸ್ ದ್ವಿತೀಯ ದಿನದಾಟದಲ್ಲಿ ಮೇಲುಗೈ ಸಾಧಿಸಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 345 ರನ್ ಗಳಿಸಿದರೆ, ನ್ಯೂಜಿಲ್ಯಾಂಡ್ ವಿಕೆಟ್ ನಷ್ಟವಿಲ್ಲದೆ 129 ರನ್ ಗಳಿಸಿದೆ. ಸದ್ಯ 216 ರನ್ ಹಿನ್ನಡೆಯಲ್ಲಿದೆ.
ಶ್ರೇಯಸ್ ಶತಕ: ನಾಲ್ಕು ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿದ್ದಲ್ಲಿಂದ ದ್ವಿತೀಯ ದಿನದಾಟ ಆರಂಭಿಸಿದ ಭಾರತ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಗುರುವಾರ 50 ರನ್ ಗಳಿಸಿದ್ದ ಜಡೇಜಾ ಇಂದು ಅದೇ ಮೊತ್ತಕ್ಕೆ ಔಟಾದರು. ನಂತರ ಬಿರುಸಾಗಿ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದರು. 171 ಎಸೆತ ಎದುರಿಸಿದ ಅಯ್ಯರ್ 105 ರನ್ ಗಳಿಸಿ ಔಟಾದರು.
ಇದನ್ನೂ ಓದಿ:ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಪಂದ್ಯ ಆರಂಭಕ್ಕೂ ಮುನ್ನವೇ ಭಾರತೀಯರು ಹೆದರಿದ್ದರು: ಇಂಝಮಾಮ್
ನಂತರ ಅಶ್ವಿನ್ 38 ರನ್ ಗಳ ಉಪಯುಕ್ತ ಕಾಣಿಕೆ ನೀಡಿದರು. ಭಾರತ ತಂಡ 345 ರನ್ ಗೆ ಆಲೌಟಾಯಿತು, ಕಿವೀಸ್ ಪರ ಬಿಗು ದಾಳಿ ಸಂಘಟಿಸಿದ ಟಿಮ್ ಸೌಥಿ ಐದು ವಿಕೆಟ್ ಪಡೆದರ, ಜೇಮಿಸನ್ ಮೂರು ಮತ್ತು ಅಜಾಜ್ ಪಟೇಲ್ ಎರಡು ವಿಕೆಟ್ ಕಿತ್ತರು.
ಗೋಡೆಯಾದ ಆರಂಭಿಕರು: ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟಾಮ್ ಲ್ಯಾಥಂ ಮತ್ತು ವಿಲ್ ಯಂಗ್ ಭಾರತೀಯ ಬೌಲರ್ ಗಳನ್ನು ಸರಾಗವಾಗಿ ಎದುರಿಸಿದರು. ಇವರಿಬ್ಬರೂ ಅಜೇಯ 129 ರನ್ ಜೊತೆಯಾಟವಾಡಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ವಿಲ್ ಯಂಗ್ 75 ರನ್ ಗಳಿಸಿದ್ದರೆ, ಲ್ಯಾಥಂ 50 ರನ್ ಗಳಿಸಿದ್ದಾರೆ.