Advertisement

ವಿಧಾನ ಕದನ 2023: ಕುಂದಾಪುರಕ್ಕೆ ಆರನೇ ಬಾರಿಗೂ ಹಾಲಾಡಿಯವರಾ?

10:49 PM Mar 16, 2023 | Team Udayavani |

ಕುಂದಾಪುರ: ನಾಲ್ಕು ಬಾರಿ ಬಿಜೆಪಿಯಿಂದ, ಒಮ್ಮೆ ಪಕ್ಷೇತರನಾಗಿ ಸ್ಪರ್ಧಿಸಿ ವಿಜಯದ ಸರಪಳಿ ಕಡಿಯದ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಈ ಬಾರಿಯೂ ಅವಕಾಶ ಸಿಕ್ಕರೆ ಕಣಕ್ಕಿಳಿಯುವ ಹುರಿಯಾಳು. ಕಾಂಗ್ರೆಸ್‌ನಿಂದ ಹಲವರು ಟಿಕೆಟ್‌ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಯಾರಿಗೆ ಅವಕಾಶ ಸಿಗುತ್ತದೆಂಬ ಲೆಕ್ಕಾಚಾರ ನಡೆದಿದೆ.

Advertisement

ಬಿಜೆಪಿ ವರಿಷ್ಠರು ಆಗಾಗ ಹೇಳುತ್ತಿರುವ ಅಭ್ಯರ್ಥಿ ಬದಲಾವಣೆ ಕುಂದಾಪುರ ಕ್ಷೇತ್ರದಲ್ಲಿ ನಡೆಯಲಿದೆಯೇ, 70 ವಯೋಮಾನ ದಾಟಿದವರಿಗೆ ಟಿಕೆಟ್‌ ನಿರಾಕರಿಸಲಾಗುತ್ತದೆಯೇ, 72 ವಯಸ್ಸಿನ ಹಾಲಾಡಿ ಅವರನ್ನು ಬದಲಿಸಿದರೆ ಬಿಜೆಪಿ ಈ ಕ್ಷೇತ್ರವನ್ನು ತನ್ನ ಹಿಡಿತದಲ್ಲಿ ಕಾಪಿಟ್ಟುಕೊಳ್ಳಲು ಯಾವ ತಂತ್ರಗಾರಿಕೆ ಮಾಡುತ್ತದೆ ಎಂಬುದು ರಹಸ್ಯವಾಗಿಯೇ ಇದೆ. ಈ ಮಧ್ಯೆ ಹಾಲಾಡಿ ಅವರು ಕ್ಷೇತ್ರಾದ್ಯಂತ ಓಡಾಟ ನಡೆಸುತ್ತಿದ್ದಾರೆ.

ಬಿಜೆಪಿಯಲ್ಲೂ ಆಕಾಂಕ್ಷಿಗಳು
ಒಂದು ವೇಳೆ ಹಾಲಾಡಿ ಅವರ ಬದಲಿಗೆ ಎಂಬ ಪ್ರಶ್ನೆ ಉದ್ಭವಿಸಿದರೆ ಎಂಬುದಕ್ಕೆ ಸದ್ಯ ಕ್ಷೇತ್ರದಲ್ಲಿ ಓಡಾಡುತ್ತಿರುವ ಹೆಸರುಗಳೆಂದರೆ ರಾಜ್ಯ ಆಹಾರ ನಿಗಮ ಉಪಾಧ್ಯಕ್ಷ ಕಿರಣ್‌ ಕೊಡ್ಗಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರದು. ಕೋಟ ಶ್ರೀನಿವಾಸ ಪೂಜಾರಿ ಅಥವಾ ಅಚ್ಚರಿಯ ಆಯ್ಕೆಯಾಗಿ ಸಾಮಾನ್ಯ ಕಾರ್ಯಕರ್ತನೂ ಸ್ಪರ್ಧಿಸಲೂಬಹುದು ಎಂಬ ಅಭಿಪ್ರಾಯವೂ ಇದೆ.

ಕಾಂಗ್ರೆಸ್‌ನಲ್ಲಿ ಹೇಗಿದೆ
1999ರಿಂದ ಕಳೆದುಕೊಂಡ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಹವಣಿಸುತ್ತಿದೆ. ಕಾಂಗ್ರೆಸ್‌ನಿಂದ ಈ ಹಿಂದೆ ಸ್ಪರ್ಧಿಸಿದ ಮಲ್ಯಾಡಿ ಶಿವರಾಮ ಶೆಟ್ಟರು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ. ಪ್ರತಾಪಚಂದ್ರ ಶೆಟ್ಟರ ಹೆಸರಿಗೆ ಕಾರ್ಯಕರ್ತರ ಅಭಯಮುದ್ರೆ ಇದ್ದರೂ ಸುಲಭದಲ್ಲಿ ದೊರೆತ ವಿಧಾನಪರಿಷತ್‌ ಅನ್ನೇ ತೊರೆದವರು ಇಲ್ಲಿ ಸ್ಪರ್ಧೆಗೆ ಇಳಿಯುತ್ತಾರೆಯೇ ಎಂಬ ಪ್ರಶ್ನೆ ಇದೆ. ಕಳೆದ ಬಾರಿ ಸ್ಪರ್ಧಿಸಿದ್ದ ರಾಕೇಶ್‌ ಮಲ್ಲಿಯವರೂ ಬಂಟ್ವಾಳದತ್ತ ಕಣ್ಣು ನೆಟ್ಟಿದ್ದಾರೆ. ಉಳಿದಂತೆೆ ಮೊಳಹಳ್ಳಿ ದಿನೇಶ ಹೆಗ್ಡೆ, ಶ್ಯಾಮಲಾ ಭಂಡಾರಿ, ಅಶೋಕ್‌ ಪೂಜಾರಿ ಬೀಜಾಡಿ ಮತ್ತಿತರರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು ಆಕಾಂಕ್ಷಿಗಳು ಕ್ಷೇತ್ರಾದ್ಯಂತ ಓಡಾಟ ನಡೆಸುತ್ತಿದ್ದಾರೆ.

ಬಂಟರ ಹಿಡಿತ
ವಿನ್ನಿಫ್ರೆಡ್‌ ಫೆರ್ನಾಂಡಿಸ್‌ ಹೊರತುಪಡಿಸಿ 1952ರಿಂದ ಈವರೆಗೆ ಈ ಕ್ಷೇತ್ರದಲ್ಲಿ ಗೆದ್ದವರು ಬಂಟರು ಎನ್ನುವುದು ಗಮನಾರ್ಹ. ಈ ಸೂಕ್ಷ$ಗಮನಿ ಸಿಯೇ ಬಿಜೆಪಿ ಮತ್ತು ಕಾಂಗ್ರೆಸ್‌ ಆಖಾಡಕ್ಕೆ ಇಳಿಯುತ್ತದೆ. ಈ ಬಾರಿ ಆ ಸಂಪ್ರದಾಯ ಮುರಿಯುವುದೇ ಎಂಬುದು ಬಿಜೆಪಿಯ ಹೊಸ ಪ್ರಯೋಗದ ಮೇಲೆ ಅವಲಂಬಿಸಿದ್ದು, ಬದಲಾವಣೆಯ ಪರಿಣಾಮಗಳನ್ನೂ ಲೆಕ್ಕ ಹಾಕಲಾಗುತ್ತಿದೆ. ಗುಜರಾತ್‌ ಮಾದರಿ ಇಲ್ಲಿಗೆ ಅನ್ವಯವಾಗುವುದೇ ಇಲ್ಲವೇ ಎಂಬುದು ಕಾದು ನೋಡಬೇಕಿದೆ.

Advertisement

~ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next