ಬೆಂಗಳೂರು: ಇಂದು ಜಲಜೀವನ್ ಮಿಷನ್ ಸಭೆಯಿದೆ. ದಕ್ಷಿಣ ಭಾರತ ರಾಜ್ಯಗಳ ಸಿಎಂ ಗಳ ಜತೆಗಿನ ಸಭೆಯಲ್ಲಿ ನಾನು ಭಾಗಹಿಸುತ್ತೇನೆ. ಆ ನಂತರ ಶಿಕಾರಿಪುರ ಹಾಗೂ ರಾಣಿಬೆನ್ನೂರಿನ ನವೀನ್ ಮನೆಗೆ ಭೇಟಿ ಕೊಡುತ್ತೇನೆ. ಭೇಟಿ ವೇಳೆ ಪರಿಹಾರ ಕೂಡ ಕೊಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೀನ್ ಮೃತದೇಹದ ಪತ್ತೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ಇನ್ನೂ ಅಲ್ಲಿ ಯುದ್ದ ನಡೆಯುತ್ತಿದೆ. ಹೀಗಾಗಿ ವಿವರ ಪಡೆದು ಮಾತಾಡ್ತೇನೆ ಎಂದರು.
ಈಗಾಗಲೇ ಉಕ್ರೇನ್ ನಿಂದ ಹಲವು ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಯಾರು ಸ್ಥಳಾಂತರವಾಗಿದ್ದಾರೊ ಅವರನ್ನು ಕರೆತರಲಾಗಿದೆ. ಆದರೆ ಕೆಲವು ಕಡೆ ಬೇರೆ ಕಡೆ ಹೋಗಲಾಗದಂತಹ ಪರಿಸ್ಥಿತಿಯಿದೆ. ಅಲ್ಲಿರುವವರನ್ನು ಸಂಪರ್ಕ ಸಾಧಿಸಿ ಕರೆತರಲು ಭಾರತ ರಾಯಭಾರಿ ಪ್ರಯತ್ನ ಮಾಡುತ್ತಿದ್ದಾರೆ. ನಾವು ಕೂಡ ಭಾರತದ ರಾಯಭಾರಿ ಹಾಗೂ ಬಾರ್ಡರ್ ನಲ್ಲಿರುವ ನಮ್ಮ ಮಂತ್ರಿಗಳ ಜೊತೆ ಮಾತನಾಡಿದ್ದೇವೆ ಎಂದರು.
ಇದನ್ನೂ ಓದಿ:ವೈದ್ಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಶೀಘ್ರ ಕೇಂದ್ರ ನಿರ್ಧಾರ
ಪಾದಯಾತ್ರೆ ಮಾಡಿದ್ದಕ್ಕೆ ಮೇಕೆದಾಟು ಯೋಜನೆಗೆ 1000 ಕೋಟಿ ಅನುದಾನ ಕೊಟ್ಟರೆಂಬ ಕಾಂಗ್ರೆಸ್ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಈ ಬಗ್ಗೆ ವಿಧಾನಸಭೆಯಲ್ಲೇ ಅವರಿಗೆ ತಕ್ಕ ಉತ್ತರ ಕೊಡುತ್ತೇನೆ ಎಂದರು.