ಅವನ ಪರಿಚಯವಾದದ್ದು ಸ್ನಾತಕೋತ್ತರ ಪದವಿಗೆ ಸೇರಿಕೊಂಡ ಪ್ರಾರಂಭದ ದಿನಗಳಲ್ಲಿ. ಅದೊಂದು ದಿನ ಸಂಜೆ ಏಕಾಂತದಲ್ಲಿರುವಾಗ ಒಂದು ಮೆಸೇಜ್ ಬಂತು. “ನಾನು ನಿಮ್ಮ ಜೊತೆ ಮಾತನಾಡಬಹುದಾ? ಕಾಲ್ ಮಾಡ್ಲಾ?’ ಅಂತ. ನಾನು ಒಪ್ಪಿಗೆ ಸೂಚಿಸಿದ್ದೇ ತಡ, ಕೂಡಲೆ ಇನ್ನೊಂದು ನಂಬರ್‌ನಿಂದ ಕಾಲ್ ಬಂತು: ಏನಪ್ಪಾ ಮಾತಾಡೋದು ಎಂಬ ಆತಂಕದಿಂದಲೇ ಫೋನ್ ಎತ್ತಿಕೊಂಡೆ. ಆ ಕಡೆಯಿಂದ ಅವನು “ಮೇಡಂ’ ಅಂತ ಗೌರವದಿಂದಲೇ ತನ್ನ ಮತ್ತು ತನ್ನ ಕುಟುಂಬದ ಪರಿಚಯ ಮಾಡಿಕೊಂಡ. ಮೊದಲ ಪರಿಚಯದಲ್ಲಿಯೇ ಅವನಿಗೆ ಮರುಳಾದೆ. ಅಪರಿಚಿತರಲ್ಲಿ ವೈಯಕ್ತಿಕ ವಿವರಗಳನ್ನು ನಾನು ಹಂಚಿಕೊಂಡಿದ್ದೇ ಇಲ್ಲ. ಆದರೆ ಆ ದಿನ ನನ್ನ ಸಂಪೂರ್ಣ ವಿವರವನ್ನು ಅವನ ಹತ್ತಿರ ಹೇಳಿಬಿಟ್ಟೆ. ಅವನಾಗ ಎಂ.ಎ ಜರ್ನಲಿಸಂ ಕಡೆಯ ವರ್ಷದಲ್ಲಿದ್ದ.
ದಿನಗಳುರುಳುತ್ತಾ ನಮ್ಮಿಬ್ಬರ ಸ್ನೇಹ ಗಟ್ಟಿಯಾಗತೊಡಗಿತು. ಪ್ರತಿ ದಿನವೂ ಫೋನ್ ಮಾಡುವುದು ನಮ್ಮ ಅಭ್ಯಾಸವೇ ಆಗಿಹೋಯ್ತು. ದಿನನಿತ್ಯ ಗಂಟೆಗಟ್ಟಲೆ ಟಾಕಿಂಗ್, ಚಾಟಿಂಗ್, ವಿಡಿಯೋ ಕಾಲ್ ತಪ್ಪಿದ್ದಲ್ಲ. ಕೋಳಿ ಜಗಳ ಆಡುತ್ತಿದ್ದೆವು, ಫೋನ್‌ನಲ್ಲೇ ರಾಜಿಯಾಗುತ್ತಿದ್ದೆವು. ಕೆಲವೊಮ್ಮೆ ಅವನ ಮಧುರತೆಯ ಮಾತು ನನ್ನನ್ನು ಮೂಕಳನ್ನಾಗಿಸುತ್ತಿತ್ತು. ನಾನು ಸಹ ನನ್ನ ಸಡಗರ ಸಂಕಟವನ್ನೆಲ್ಲ ಹೇಳಿಕೊಳ್ಳುತ್ತಿದ್ದೆ. ಅವನು ಪ್ರತಿಯೊಂದು ವಿಷಯದಲ್ಲಿಯೂ ನನ್ನನ್ನು ಹೊಗಳುತ್ತಿದ್ದ. ನನ್ನಲ್ಲಿ ಆತ್ಮಸ್ಥೈರ್ಯ, ಉತ್ಸಾಹ ತುಂಬುತ್ತಿದ್ದ. ಯು ಕ್ಯಾನ್ ಡು ಇಟ್ ಅಂತಾ ಪ್ರೇರೇಪಿಸುತ್ತಿದ್ದ. ಅತ್ತಾಗ ನನ್ನನ್ನು ಸಮಾಧಾನಿಸುತ್ತಿದ್ದ. ಕಣ್ಣೀರು ಒರೆಸುತ್ತಿದ್ದ.
ಎಲ್ಲರೂ ಬಿಡುವಿನ ವೇಳೆಯಲ್ಲಿ ಮಾತ್ರ ಕಾಲ್ ಮಾಡಿದರೆ ಇವನು ಮಾತ್ರ ಎಷ್ಟೇ ಒತ್ತಡದ ಕೆಲಸವಿದ್ದರೂ ಸಹ ಪ್ರತಿದಿನ ಕಾಲ್ ಮೆಸೇಜ್ ಮಾಡಿ ನನ್ನ ಬಗ್ಗೆ ವಿಚಾರಿಸುವುದನ್ನು ಮರೆಯುತ್ತಿರಲಿಲ್ಲ. ನಾನು ಅವನ ಫೋನ್‌ಗಾಗಿ ಬಕ ಪಕ್ಷಿಯಂತೆ ಕಾಯುತ್ತಿದ್ದೆ. ಕಾಲ್ ಮಾಡಿದಾಗ ನಾನೇ ಅವನ ಜೊತೆಗೆ ಜಗಳ ಕಾಯುತ್ತಿದ್ದೆ, ಹಠ ಮಾಡುತ್ತಿದ್ದೆ. ಅವನು ಪ್ರತಿ ಸಾರಿ ನನಗೊಸ್ಕರ ಸೋಲುತ್ತಿದ್ದ. ನಾನು ಎಷೋr ಬಾರಿ ಕೇಳುತ್ತಿದ್ದೆ: “ಯಾಕೋ ಅಷ್ಟು ಸುಲಭವಾಗಿ ಸೋಲುತ್ತೀಯಾ?’ ಎಂದು. ಅವನು ಪ್ರತಿ ಬಾರಿಯೂ ಉತ್ತರ ಹೇಳದೆ ಮಾತು ಮರೆಸುತ್ತಿದ್ದ.
ದಿನ ಕಳೆದಂತೆ ಅವನ ಫೋನ್ ಕಾಲ್ ಬರುವುದು ತಡವಾದರೆ ರೂಂನಲ್ಲಿ ಒಬ್ಬಳೇ ಅಳುತ್ತಿದ್ದೆ. ಅವನು ಕಾಲ್ ಮಾಡಿದಾಗ ಯಾಕೋ ಇಷ್ಟು ಲೇಟಾಗಿ ಕಾಲ್ ಮಾಡಿದ್ದು ಅಂತಾ ರೇಗುತ್ತಿದ್ದೆ. ಅವನು ಜಗಳಕ್ಕೆ ಬರಲೆಂದೇ ಅವನನ್ನು ಕೆಣಕುತ್ತಿದ್ದೆ. “ನಿನ್ನನ್ನು ಎಷ್ಟು ಆಟ ಆಡಿಸ್ತೀನಲ್ವಾ, ನನಗೆ ಬೈಬೇಕು ಅನ್ಸಲ್ವಾ?’ ಅಂತ ಕೇಳಿದರೆ, ಅವನು “ನೀನು ಹಠಮಾಡುವುದು, ಜಗಳ ಮಾಡುವುದು ಇಷ್ಟ ಕಣೇ’ ಎಂದು ನನ್ನನ್ನು ಮೂಕಳನ್ನಾಗಿಸುತ್ತಿದ್ದ.
ದೇಹ ಎರಡು ಪ್ರಾಣವೊಂದು ಎಂಬಂತಿದ್ದ ನಮ್ಮ ಸ್ನೇಹ ಯಾರಿಂದಲೂ ಮುರಿಯಲು ಆಗದಂತಿದ್ದುದೇನೋ ನಿಜ. ಆದರೆ ಇತ್ತೀಚಿಗೆ ನಮ್ಮಿಬ್ಬರ ಮಧ್ಯೆ ಮನಸ್ತಾಪಗಳು ತಲೆ ಎತ್ತುತ್ತಿವೆ. ಅದು ನನ್ನಿಂದಲೇ ಅಗುತ್ತಿವೆ ಎಂದು ನನಗೆ ಗೊತ್ತು. ಈ ವಿಷಯವಾಗಿ ಅಪರಾಧಿ ಮನೋಭಾವ ಕಾಡುತ್ತಿದೆ.
ಗೆಳೆಯ, ಓದ್ತಾ ಇದೀಯೇನೋ? ಕೆಲವೊಂದು ತಪ್ಪುಗಳಿಂದ ನಿನ್ನ ಬಳಿ ನಿಂತು ಮಾತನಾಡಲು ಆಗದಂಥ ಪರಿಸ್ಥಿತಿ ತಂದುಕೊಂಡಿದ್ದೇನೆ. ನಿಸ್ಸಹಾಯಕಳಾಗಿದ್ದೇನೆ. ಅರ್ಥ ಮಾಡಿಕೊಳ್ಳುತ್ತೀ ಎಂದು ಭಾವಿಸಿದ್ದೇನೆ. ಪ್ಲೀಸ್ ಕಣೋ, ನನ್ನಿಂದ ದೂರ ಉಳಿದು ಬಿಡುವೆಯಾ…?
– ರೇಷ್ಮಾ ಪಿ. ಬೆಳಗುತ್ತಿ, ಶಿವಮೊಗ್ಗ