ಬಾಗಲಕೋಟೆ: ಬರೋಬ್ಬರಿ 105 ವರ್ಷಗಳ ಹಿಂದೆ ಬಂದಿದ್ದ ಪ್ರವಾಹ ಕಳೆದ ತಿಂಗಳು ಮತ್ತೂಮ್ಮೆ ಬಂದಿದ್ದು, ಉತ್ತರ ಕರ್ನಾಟಕದ ಸಾವಿರಾರು ಹಳ್ಳಿಗರ ಬದುಕು ಹಿಂಡಿ ಹಿಪ್ಪಿ ಮಾಡಿದೆ. ಸಂತ್ರಸ್ತರು, ‘ನಮಗೆ ವಾಸ್ತವದ ಪರಿಹಾರ ಕೊಡಿ’ ಎಂದು ಒಂದಾಗಿ ಬಹಿರಂಗ ಅಧಿವೇಶನ ಮೊರೆ ಹೋಗಿದ್ದಾರೆ. ರಾಜ್ಯ ವಿಧಾನಸಭೆ ಅಧಿವೇಶನ ಮಾದರಿಯಲ್ಲೇ ನೆರೆ ಸಂತ್ರಸ್ತರ ಅಧಿವೇಶನ ನಡೆಸಿ, ಸರ್ಕಾರದ ಗಮನ ಸೆಳೆಯುವ ಪ್ರಯತ್ನವೊಂದು ರವಿವಾರ ಬಾಗಲಕೋಟೆಯಲ್ಲಿ ನಡೆಯಲಿದೆ.
ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಕೊಪ್ಪಳ, ರಾಯಚೂರು ಸೇರಿದಂತೆ ಈ ಭಾಗದ ಒಟ್ಟು 8 ಜಿಲ್ಲೆಗಳ ನೆರೆ ಸಂತ್ರಸ್ತರು, ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಒಟ್ಟಾಗಿ ಧ್ವನಿ ಎತ್ತಲಿದ್ದು, ಈ ಧ್ವನಿ ರಾಜ್ಯ ಸರ್ಕಾರಕ್ಕೆ ಕೇಳುತ್ತಾ? ಎಂಬುದು ಈಗಿರುವ ಪ್ರಶ್ನೆ.
ಉದ್ದೇಶವೇನು: ರೈತ ಸಂಘ, ಕರವೇ, ಭಾರತೀಯ ಕಿಸಾನ್ ಸಂಘ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಸಂಘಟನೆಗಳ ನೇತೃತ್ವದಲ್ಲಿ ನೆರೆ ಸಂತ್ರಸ್ತರ ಬಹಿರಂಗ ಅಧಿವೇಶನ, ಸೆ.15ರಂದು ಬೆಳಗ್ಗೆ 10.30ಕ್ಕೆ ನವನಗರದ ಕಾಳಿದಾಸ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಪಕ್ಷಾತೀತ ಸಂಘಟನೆಗಳಿಂದ ಹಮ್ಮಿಕೊಂಡ ಈ ಅಧಿವೇಶನದ ಮುಖ್ಯ ಗುರಿ ಕೇಂದ್ರದ ಎನ್‌ಡಿಆರ್‌ಎಫ್ ಮತ್ತು ರಾಜ್ಯದ ಎಸ್‌ಡಿಆರ್‌ಎಫ್ ನಿಯಮ ತಿದ್ದುಪಡಿ ಮಾಡಬೇಕು ಎಂಬುದಾಗಿದೆ. ಈ ತಿದ್ದುಪಡಿ ಮಾಡಿದಾಗಲೇ ನೆರೆ ಸಂತ್ರಸ್ತರಿಗೆ ವಾಸ್ತವದ ಪರಿಹಾರ ಸಿಗಲು ಸಾಧ್ಯ ಎಂಬುದು ಹೋರಾಟಗಾರರ ನಿಲುವು.
ಹಲವು ಮಠಾಧೀಶರು ಭಾಗಿ: ಬಹಿರಂಗ ಅಧಿವೇಶನದಲ್ಲಿ ಚರಂತಿಮಠದ ಪ್ರಭು ಸ್ವಾಮೀಜಿ, ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹುಲ್ಯಾಳ ಸಿದ್ದೇಶ್ವರ ಆಶ್ರಮದ ಶ್ರೀ ಹರ್ಷಾನಂದ ಸ್ವಾಮೀಜಿ, ರಾಮಾರೂಢ ಮಠದ ಶ್ರೀ ಪರಮರಾಮಾರೂಢ ಸ್ವಾಮೀಜಿ ಭಾಗವಹಿಸಲಿದ್ದಾರೆ. ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಜಿಪಂ ಉಪಾಧ್ಯಕ್ಷರೂ ಆಗಿರುವ ರೈತ ಮುಖಂಡ ಮುತ್ತಪ್ಪ ಕೋಮಾರ, ಪ್ರವಾಹದಿಂದ ಉಂಟಾದ ಸಮಸ್ಯೆ ಹಾಗೂ ಅನಾಹುತಗಳ ಕುರಿತು ಮಾತನಾಡಲಿದ್ದಾರೆ. ಸ್ವರಾಜ್ ಇಂಡಿಯಾ ಪಕ್ಷದ ಚಾಮರಸ ಮಾಲಿಪಾಟೀಲ, ಬರ ಮುಕ್ತ ಸಂಘಟನೆಯ ಉಪಾಧ್ಯಕ್ಷ- ವಕೀಲ ರವಿವರ್ಮ ಕುಮಾರ, ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಐ.ಎನ್. ಬಸವೇಗೌಡ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ವಿವಿಧ ಸಂಘಟನೆಗಳ ನಾಯಕರು ಭಾಗವಹಿಸಲಿದ್ದಾರೆ.
ಒಟ್ಟಾರೆ, ನೆರೆಯಿಂದ ತೀವ್ರ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ವಾಸ್ತವ ಹಾನಿಯ ಪರಿಹಾರ ನೀಡುವಂತೆ ಒತ್ತಾಯಿಸಿ ಇದೇ ಮೊದಲ ಬಾರಿಗೆ ಬಹಿರಂಗ ಅಧಿವೇಶನ ನಡೆಯಲಿದೆ. ಈ ಅಧಿವೇಶನಕ್ಕೆ 8 ಜಿಲ್ಲೆಗಳ ಸಂಸದರು, ಶಾಸಕರನ್ನೂ ಆಹ್ವಾನಿಸಿದ್ದು, ಭಾಗವಹಿಸುತ್ತಾರೋ ಇಲ್ಲವೋ. ಮುಖ್ಯವಾಗಿ ಸರ್ಕಾರದ ಪ್ರತಿನಿಧಿಗಳಾಗಿ ಈ ಭಾಗದ ಇಬ್ಬರು ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಹಾಗೂ ಲಕ್ಷ್ಮಣ ಸವದಿ ಭಾಗವಹಿಸಬೇಕು ಎಂದು ಸಂಘಟಕರು ಒತ್ತಾಯಿಸಿದ್ದಾರೆ. ಕಾರಜೋಳರು ಜಿಲ್ಲೆಗೆ ಆಗಮಿಸಿದ್ದು, ಅವರು ಈ ಅಧಿವೇಶನಕ್ಕೆ ಬಂದು ನೆರೆ ಸಂತ್ರಸ್ತರ ಗೋಳು ಆಲಿಸುತ್ತಾರಾ? ಕಾದು ನೋಡಬೇಕು.
•ಹಲವು ಮಠಾಧೀಶರು-ರೈತ ಮುಖಂಡರು- ನಾಯಕರು ಭಾಗಿ
•ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ವಾಸ್ತವ ಹಾನಿಯ ಪರಿಹಾರಕ್ಕೆ ಒತ್ತಾಯ
ಸರ್ಕಾರದ ವಿರುದ್ಧ ಈ ನೆರೆ ಸಂತ್ರಸ್ತರ ಅಧಿವೇಶನ ನಡೆಸುತ್ತಿಲ್ಲ. ನಮ್ಮ ಸಮಸ್ಯೆ ಅವರ ಗಮನಕ್ಕೆ ತರಲು, ನೆರೆ ಸಂತ್ರಸ್ತರು ತಮ್ಮ ಗೋಳನ್ನು ನೇರವಾಗಿ ಹೇಳಲು ಈ ಅಧಿವೇಶನ ಕರೆಯಲಾಗಿದೆ. ಸಂತ್ರಸ್ತರ ವಿಷಯದಲ್ಲಿ ಎಲ್ಲಾ ನಿಯಮ ದೂರವಿಟ್ಟು, ಮನೆ, ಬೆಳೆ, ಮನೆಯ ಧವಸ-ಧಾನ್ಯ, ಬಟ್ಟೆ ಎಲ್ಲವೂ ಹಾನಿಯಾದ ಸಂತ್ರಸ್ತರಿಗೆ ಒಟ್ಟಾರೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಅದು ಹಾನಿಯ ವಾಸ್ತವದಲ್ಲಿರಬೇಕು.
•ಮುತ್ತಪ್ಪ ಕೋಮಾರ, ಜಿಪಂ ಉಪಾಧ್ಯಕ್ಷ, ರೈತ ಮುಖಂಡ
ಭೂಮಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರ ಪಾಲಿಗೆ ನೆರೆ ಮತ್ತು ಬರ ದಂಪತಿ ಇದ್ದಂತಾಗಿವೆ. ಒಮ್ಮೆ ಬರ ಬಂದರೆ, ಮತ್ತೂಮ್ಮೆ ನೆರೆ ಬರುತ್ತಿದೆ. ಹೀಗಾಗಿ ರೈತರು ಪ್ರತಿಬಾರಿ ಸಂಕಷ್ಟ ಎದುರಿಸುತ್ತಿದ್ದಾರೆ. ಇಡೀ ದೇಶಕ್ಕೆ ಅನ್ನ ಕೊಡುವ ರೈತರನ್ನು ನಿರ್ಲಕ್ಷ್ಯ ಮಾಡಬಾರದು. ಈ ಬಾರಿಯ ನೆರೆಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದು,ಸರ್ಕಾರಗಳು ನೆರವಿಗೆ ಬರಬೇಕು. ಅದಕ್ಕಾಗಿಯೇ ಈ ಅಧಿವೇಶನ ಮೂಲಕ ಒತ್ತಾಯಿಸುತ್ತಿದ್ದೇವೆ.•
ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ರೈತ ಸಂಘ ಮತ್ತು ಹಸಿರು ಸೇನೆ
•ಶ್ರೀಶೈಲ ಕೆ. ಬಿರಾದಾರ