Advertisement

ಸರ್ಕಾರ ಬೀಳಿಸೋವರುಗೂ ಗೆಣಸು ತಿಂತಿರ್ತೀವಾ? 

06:00 AM Oct 28, 2018 | Team Udayavani |

ಪಾಂಡವಪುರ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರಕ್ಕೆ ಭವಿಷ್ಯವಿಲ್ಲ, ಆದಷ್ಟು ಬೇಗ ಬಿದ್ದು ಹೋಗುತ್ತೆ ಅಂತ ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದಾರೆ. ಅವರು ಸರ್ಕಾರ ಬೀಳಿಸೋವರೆಗೂ ನಾವೇನು ಗೆಣಸು ತಿಂತಿರ್ತೀವಾ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟಾಂಗ್‌ ನೀಡಿದ್ದಾರೆ.

Advertisement

ಪಟ್ಟಣದಲ್ಲಿ ಶನಿವಾರ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡಿದ ಅವರು, ಬಿಜೆಪಿ ವಿರುದ್ದ ಟೀಕಾಪ್ರಹಾರ ನಡೆಸಿದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ 125 ಮಂದಿ ಶಾಸಕರಿದ್ದಾರೆ. ಸರ್ಕಾರ ಎಲ್ಲಿ ಬಿದ್ದು ಹೋಗುತ್ತೆ. 104 ಶಾಸಕರನ್ನು ಹೊಂದಿರುವವರಿಂದ ಸರ್ಕಾರ ಕೆಡವಲು ಸಾಧ್ಯನಾ?. 125 ಸ್ಥಾನ ಇಟ್ಕೊಂಡು ಇರೋದು ಕಡುಬು ತಿನ್ನೋಕಾ ಎಂದು ವ್ಯಂಗ್ಯವಾಡಿದರು. “ಮುಖ್ಯಮಂತ್ರಿ ಸ್ಥಾನ ನನ್ನ ಆಸ್ತಿಯಲ್ಲ. ಅದು ಬರುತ್ತೆ, ಹೋಗುತ್ತೆ. ನಾನು ಜನರ ವಿರುದ್ದ ಯಾವತ್ತೂ ಹೋಗಲ್ಲ. ಜನರಿಗೆ ಇಷ್ಟವಿಲ್ಲದ ಸ್ಥಾನದಲ್ಲಿ ನಾನು ಕೂರೋಲ್ಲ. ನಾನಾಗಲೇ ಒಂದು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಿಮ್ಮ ತಾತಾ ಅಂತೀರೋ, ತಂದೆ ಅಂತೀರೋ ದೇವೇಗೌಡರು ಈಗಾಗಲೇ ದೇಶದ ಕೆಂಪುಕೋಟೆ ಮೇಲೆ ಬಾವುಟ ಹಾರಿಸಿ ಬಂದಿದ್ದಾರೆ. ಹಾಗಾಗಿ, ನಮಗೆ ಅಧಿಕಾರದ ಮೇಲೆ ಯಾವ ವ್ಯಾಮೋಹವೂ ಇಲ್ಲ’ ಎಂದರು. 

ಜೆಡಿಎಸ್‌ನಲ್ಲಿ ಯಂಕ-ನಾಣಿ-ಸೀನ ಬಿಟ್ಟರೆ ಬೇರೆ ಯಾರಿಲ್ಲವೆಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಯಂಕ -ನಾಣಿಯೇ ಅಲ್ಲವೇ ಈಗ ಆಡಳಿತ ನಡೆಸುತ್ತಿರುವುದು? ಯಾವ ಪಕ್ಷದಲ್ಲಿ ಅಪ್ಪ-ಮಕ್ಕಳು, ಅಣ್ಣ-ತಮ್ಮ ರಾಜಕಾರಣ ಮಾಡುತ್ತಿಲ್ಲ ಹೇಳಿ ಎಂದು ಪ್ರಶ್ನಿಸಿದರು. ನಾವೇನು ಹಿಂಬಾಗಿಲಿನಿಂದ ವಿಧಾನ ಪರಿಷತ್‌, ರಾಜ್ಯಸಭೆಗೆ ಹೋಗುತ್ತಿಲ್ಲ. ಜನರ ಆಶೀರ್ವಾದ ಪಡೆದು ಬರುತ್ತಿದ್ದೇವೆ. ಅವರು ಆಶೀರ್ವಾದ ಮಾಡದಿದ್ದರೆ ಮನೆಗೆ ಹೋಗುತ್ತೇವೆ ಎಂದು ತಿರುಗೇಟು ನೀಡಿದರು.

ನಾಳೆ ಬೆಳಗ್ಗೆಯೇ ಸಾಯೋಲ್ಲ, 84 ವರ್ಷ ಬದುಕುತ್ತೇನೆ 
“ನಾನು ನಾಳೆ ಬೆಳಗ್ಗೆಯೇ ಸಾಯೋಲ್ಲ. 84 ವರ್ಷ ಬದುಕುತ್ತೇನೆ. ನಾನು ಮಳವಳ್ಳಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದೇನೆ ಅಷ್ಟೇ. ನಾಳೆನೇ ಸಾಯ್ತಿನಿ ಅಂತ ಹೇಳಿಲ್ಲ. ಟೀವಿಗಳಲ್ಲಿ ಬರುವ ಸುದ್ದಿಯನ್ನು ನೋಡಿ ನನ್ನ ಮೇಲೆ ಅಪಾರ್ಥ ಮಾಡಿಕೊಳ್ಳಬೇಡಿ. ಮಾಧ್ಯಮದವರ ಹಕ್ಕನ್ನು ನಾನು ಕಿತ್ತುಕೊಳ್ಳುವುದಿಲ್ಲ. ಸತ್ಯ ಬರೆಯಿರಿ ಎನ್ನುವುದಷ್ಟೇ ನನ್ನ ಮನವಿ. ನನ್ನ ಜೀವದ ಬಗ್ಗೆ ನನಗೆ ಆತ್ಮವಿಶ್ವಾಸವಿದೆ. ಜನರ ಪ್ರೀತಿ-ವಿಶ್ವಾಸ ನನಗೆ ಶಕ್ತಿ ನೀಡಿದೆ. ಜನರು ಎಲ್ಲಿಯವರೆಗೆ ನಂಬಿಕೆ ಇಟ್ಟಿರುವರೋ ಅಲ್ಲಿಯವರೆಗೂ ನಾನು ಯಾರಿಗೂ ಹೆದರುವುದಿಲ್ಲ. ನಾನು ಅಧಿಕಾರದಲ್ಲಿದ್ದುಕೊಂಡು ಜನರ ಹಣ ಲೂಟಿ ಮಾಡಬೇಕಾಗಿಲ್ಲ. ಆ ದರಿದ್ರ ದುಡ್ಡಲ್ಲಿ ಜೀವನ ನಡೆಸಬೇಕಾಗೂ ಇಲ್ಲ. ರಾಜ್ಯದಲ್ಲಿರುವ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಕೋಟಿ, ಕೋಟಿ ಹಣ, ಕೇಜಿಗಟ್ಟಲೆ ಚಿನ್ನ ಸಿಗ್ತಿದೆ. ಇಂಥ ಅಧಿಕಾರಿಗಳನ್ನು ಮಟ್ಟ ಹಾಕಿ, ಜನರ ತೆರಿಗೆ ದುಡ್ಡು ಉಳಿಸುವ ಕೆಲಸ ಮಾಡ್ತೀನಿ’ ಎಂದು ಭರವಸೆ ನೀಡಿದರು.

ಲೋಡ್‌ಶೆಡ್ಡಿಂಗ್‌ಗೆ ಆದೇಶ ನೀಡಿಲ್ಲ: ಸಿಎಂ ಸ್ಪಷ್ಟನೆ
ಮೈಸೂರು: ಕಲ್ಲಿದ್ದಲು ಕೊರತೆಯಾದರೂ ವಿದ್ಯುತ್‌ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಲು ಸೂಚಿಸಲಾಗಿದ್ದು, ಲೋಡ್‌ ಶೆಡ್ಡಿಂಗ್‌ ಮಾಡಲು ಆದೇಶವನ್ನೇ ನೀಡಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕವನ್ನು ಕತ್ತಲೆಕೂಪಕ್ಕೆ ತಳ್ಳಿದ ಕುಮಾರ ಎನ್ನುವ ಮಾಧ್ಯಮಗಳ ವರದಿ ಕೇಳಿ ನನಗೆ ಬೇಸರವಾಯಿತು. ಲೋಡ್‌ ಶೆಡ್ಡಿಂಗ್‌ ಮಾಡಲು ಆದೇಶವನ್ನೇ ನೀಡಿಲ್ಲ. ಅಧಿಕಾರಿಗಳೂ ಲೋಡ್‌ ಶೆಡ್ಡಿಂಗ್‌ ಮಾಡಿಲ್ಲವೆಂದು ಮಾಹಿತಿ ನೀಡಿದ್ದಾರೆ. ಆದರೂ, ಸುಳ್ಳು ಮಾಹಿತಿ ನೀಡಿ ಜನರಲ್ಲಿ ಅಪನಂಬಿಕೆ ಬರುವಂತೆ ಮಾಡಲು ಯತ್ನಿಸಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ನಿಯಮಿತವಾಗಿ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಏನೇ ತೊಂದರೆಯಾದರೂ ಸರಬರಾಜಿನಲ್ಲಿ ವ್ಯತ್ಯಾಸ ಮಾಡುವುದಿಲ್ಲ ಎಂದರು.

Advertisement

ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲವೆಂದು ಕಾಂಗ್ರೆಸ್‌ ಶಾಸಕರೊಬ್ಬರು ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ನಗರೋತ್ಥಾನ ಯೋಜನೆಗೆ ಹಣ ಬಿಡುಗಡೆ ಮಾಡಿಲ್ಲದ್ದಕ್ಕೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಅನ್ನಬಾರದು. ನನ್ನ ಖಜಾನೆ ಬರಿದಾಗಿಲ್ಲ. ನನ್ನ ಕಾಲದಲ್ಲಿ
ಚೆಕ್‌ಬೌನ್ಸ್‌ಗೆ ಅವಕಾಶವನ್ನೇ ನೀಡಿಲ್ಲ. 

● ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next