Advertisement

ಮಸೂದೆ ವಾಪಸ್‌ ಸಾಧ್ಯತೆ?

09:01 AM Jan 31, 2018 | Team Udayavani |

ಬೆಂಗಳೂರು: ಬಡ್ತಿ ಮೀಸಲಾತಿ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದು, ವಿಧಾನಸಭೆ ಚುನಾವಣೆವರೆಗೂ “ಯಥಾಸ್ಥಿತಿ’ ಕಾಯ್ದುಕೊಳ್ಳುವ ಪ್ರಯತ್ನ ಕೈಗೂಡುತ್ತಿಲ್ಲ. ನಲವತ್ತೈದು ದಿನಗಳಲ್ಲಿ ಬಡ್ತಿ ಕುರಿತ ಜೇಷ್ಠತಾ ಪಟ್ಟಿ ಸಿದ್ಧಪಡಿಸಿ ಆದೇಶ ಪಾಲಿಸುವಂತೆ ಸುಪ್ರೀಂಕೋರ್ಟ್‌ ಗಡುವು ನೀಡಿರುವುದರಿಂದ ಪಾಲನೆ ಮಾಡಬೇಕಾದ ಅನಿವಾರ್ಯತೆಗೆ
ಸಿಲುಕಿದೆ.

Advertisement

ಒಂದೊಮ್ಮೆ ಮಾರ್ಚ್‌ 15ರೊಳಗೆ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ರಾಜ್ಯ ಸರ್ಕಾರ ಬಚಾವ್‌ ಆಗಬಹುದು. ಆದರೂ ಮುಖ್ಯ ಕಾರ್ಯದರ್ಶಿ ಮೇಲೆ ಈ ಹೊಣೆಗಾರಿಕೆ ಇರುವುದರಿಂದ ಜೇಷ್ಠತಾ ಪಟ್ಟಿ ಸಿದ್ಧಪಡಿಸಿ ಮೀಸಲು ಆಧಾರದಲ್ಲಿ ಬಡ್ತಿ ಪಡೆದವರಿಗೆ ಹಿಂಬಡ್ತಿ ನೀಡಲೇಬೇಕು ಎಂದು ಹೇಳಲಾಗಿದೆ. ಜೊತೆಗೆ ಮಸೂದೆ, ಕಾನೂನು ನೆಪ ಹೇಳುವಂತಿಲ್ಲ ಎಂದು
ಸುಪ್ರೀಂಕೋರ್ಟ್‌ ಹೇಳಿರುವುದರಿಂದ ಸರ್ಕಾರಕ್ಕೆ ಇರುವ ಎಲ್ಲ ಮಾರ್ಗಗಳೂ ಬಂದ್‌ ಆದಂತಾಗಿದೆ. ಈ ಮಧ್ಯೆ, ಕೇಂದ್ರ ಗೃಹ ಸಚಿವಾಲಯದಲ್ಲಿರುವ ಬಡ್ತಿ ಮೀಸಲಾತಿ ಸಂಬಂಧ ವಿಧಾನ ಮಂಡಲ ಅಂಗೀಕರಿಸಿರುವ ಮಸೂದೆ ರಾಷ್ಟ್ರಪತಿಯವರಿಂದ ವಾಪಸ್‌ ಬರುವ ಸಾಧ್ಯತೆಯಿದೆ ಎಂದೂ ಹೇಳಲಾಗುತ್ತಿದೆ.

ಮಸೂದೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಕೆಲವೊಂದು ಸ್ಪಷ್ಟನೆ ಕೇಳಿದ್ದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಹಾಗೂ ನ್ಯಾಯಾಲಯ ಆದೇಶ, ಸೂಚನೆ, ಗಡುವು ಸಹ ರಾಷ್ಟ್ರಪತಿಯವರ ಗಮನಕ್ಕೆ ಹೋಗಿದ್ದು, ಬಹುತೇಕ ಅವರು ಒಪ್ಪುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಸುಪ್ರೀಂಕೋರ್ಟ್‌ ಗಡುವು ಹಿನ್ನೆಲೆಯಲ್ಲಿ ಸೋಮವಾರ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ
ಅನಿಲ್‌ಕುಮಾರ್‌ ಝಾ ಅವರೊಂದಿಗೆ ಚರ್ಚಿಸಿದ್ದು, ಜೇಷ್ಠತಾ ಪಟ್ಟಿ ಸಿದ್ಧಪಡಿಸಲು ಹೇಳಿದ್ದಾರೆ. ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿ ಶೇ.92 ಜೇಷ್ಠತಾ ಪಟ್ಟಿ ಸಿದ್ಧವಾಗಿದ್ದು, ಉಳಿದದ್ದು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಆಯಾ ಇಲಾಖೆ ಮುಖ್ಯಸ್ಥರಿಗೆ ನಿರ್ದೇಶನ ನೀಡಲು ತಿಳಿಸಲಾಯಿತು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next