ಧರ್ಮಸ್ಥಳ: ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ನಾನು ಬಿಡುಗಡೆ ಮಾಡಿರುವ ಆಡಿಯೋದನ್ನಿನ ಧ್ವನಿ ನಕಲಿ, ಮಿಮಿಕ್ರಿ ಅಂತ ಬಿಜೆಪಿ ಮುಖಂಡರು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಈ ಮಾತನ್ನು ನಾನು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ನಿಂತು ಹೇಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳುವ ಮೂಲಕ ಮತ್ತೆ ಕಳೆದ 8 ವರ್ಷಗಳ ಹಿಂದಿನ ಆಣೆ ಪ್ರಮಾಣದ ಘಟನೆ ನೆನಪಿಸಿದ್ದಾರೆ.
ನಿನ್ನೆ ನಾನು ಬಿಡುಗಡೆ ಮಾಡಿರುವ ಆಡಿಯೋ ಯಡಿಯೂರಪ್ಪ ಧ್ವನಿ ಅಲ್ಲ, ಅದು ನಕಲಿ, ಪ್ರಹಸನ, ಮಿಮಿಕ್ರಿ ಅಂತ ಸಾಬೀತುಪಡಿಸಿದರೆ ಬಿಎಸ್ ಯಡಿಯೂರಪ್ಪ ಅಲ್ಲ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಬಿಎಸ್ ವೈ ಸವಾಲಿಗೆ ಪ್ರತಿ ಸವಾಲನ್ನು ಧರ್ಮಸ್ಥಳದಲ್ಲಿ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕೆರೆ ಸಂಜೀವಿನಿ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸುದ್ದಿಗಾರರು ಆಡಿಯೋ, ವಿಡಿಯೋ ಕುರಿತು ಪ್ರಶ್ನಿಸಿದಾಗ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ನಾನು ಈ ಹಿಂದೆ ರಾಜಕೀಯ ಆಟದಲ್ಲಿ ಈ ಕ್ಷೇತ್ರದ ಹೆಸರನ್ನು ಹೇಳಿ ಆಣೆ ಪ್ರಮಾಣಕ್ಕೆ ಮುಂದಾಗಿದ್ದಕ್ಕೆ ಪಶ್ಚಾತ್ತಾಪವಿದೆ. ಅಂದಿನ ಆಣೆ ಪ್ರಮಾಣ ತಪ್ಪು ಎಂದು ಹೇಳಿದ ಕುಮಾರಸ್ವಾಮಿಯವರು ಮತ್ತೆ ಮಂಜುನಾಥನ ಸನ್ನಿಧಿಯಲ್ಲಿ ನಿಂತು ಬಿಎಸ್ ಯಡಿಯೂರಪ್ಪನವರಿಗೆ ಸವಾಲು ಹಾಕಿದ್ದಾರೆ.
ಅಂದು ಧರ್ಮಸ್ಥಳದಲ್ಲಿ ನಡೆದಿತ್ತು ಆಣೆ ಪ್ರಮಾಣ!
ರಾಜ್ಯದ 16 ಜನ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ನಡುವೆ ಆಣೆ ಪ್ರಮಾಣದ ಜಟಾಪಟಿ ನಡೆದಿತ್ತು. 2011ರ ಜೂನ್ 18ರಂದು ಪತ್ರಿಕೆಯಲ್ಲಿ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡುವಂತೆ ಎಚ್ ಡಿ ಕುಮಾರಸ್ವಾಮಿಗೆ ಸವಾಲು ಹಾಕಿದ್ದರು. ತದನಂತರ 2011ರ ಜೂನ್ 27ರಂದು ಧರ್ಮಸ್ಥಳದಲ್ಲಿ ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಬಳಿಕ ಬಹು ಚರ್ಚಿತ ಆಣೆ ಪ್ರಮಾನ ಮತ್ತು ತಪ್ಪೊಪ್ಪಿಗೆ ಪ್ರಕರಣದ ನಂತರ ಯಡಿಯೂರಪ್ಪ ಧರ್ಮಸ್ಥಳಕ್ಕೆ ಆಗಮಿಸಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿದ್ದರು. ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ, ರುದ್ರಾಭಿಷೇಕ ಸೇವೆ ಸಲ್ಲಿಸಿದ್ದರು. ಕಾಕತಾಳೀಯ ಎಂಬಂತೆ ಒಂದು ತಿಂಗಳ ಬಳಿಕ ಯಡಿಯೂರಪ್ಪ ಅಧಿಕಾರದ ಗದ್ದುಗೆಯಿಂದ ಕೆಳಗಿಳಿದಿದ್ದರು.