ಹೊಸದಿಲ್ಲಿ: ಸೇನೆಗೆ ಸೂಕ್ತ ಆದೇಶ ಸಿಕ್ಕಿದ ಕೂಡಲೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ, ಅದರ ನಿಯಂತ್ರಣ ಸಾಧಿಸಲು ಸಾಧ್ಯವಿದೆ. ಭೂಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಜ.ಮನೋಜ್ ಮುಕುಂದ್ ನರವಾನೆ ಮೊದಲ ಬಾರಿಗೆ ಶನಿವಾರ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕೆಲವು ವರ್ಷಗಳ ಹಿಂದೆ ಸಂಸತ್‌ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೇರಿಕೊಂಡು ಸಂಪೂರ್ಣ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ನಿರ್ಣಯ ಅಂಗೀಕರಿಸಲಾ ಗಿತ್ತು. ಒಂದು ವೇಳೆ ಸಂಸತ್‌ನಲ್ಲಿ ಸೇನೆ ಆ ಸ್ಥಳಕ್ಕೆ ನುಗ್ಗಿ ವಶಪಡಿಸಿಕೊಂಡು, ಭಾರತದ ನಿಯಂತ್ರಣಕ್ಕೆ ತೆಗೆದುಕೊಳ್ಳ ಬೇಕು ಎಂದು ಬಯಸಿದರೆ ಅದನ್ನು ನಡೆಸಲು ಸೇನೆಗೆ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.
1994ರ ಫೆಬ್ರವರಿಯಲ್ಲಿ ಲ್ಲಿ ಸಂಸತ್‌ನಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯದ ಪ್ರಕಾರ ಪಿಒಕೆ ಸೇರಿದಂತೆ ಸಂಪೂರ್ಣ ಕಣಿವೆ ರಾಜ್ಯ ಭಾರತದ ಅವಿಭಾಜ್ಯ ಅಂಗ ಎಂದು ಒಪ್ಪಿಕೊಳ್ಳಲಾಗಿತ್ತು.
ಸೇನೆಯ ಇಬ್ಬರು ಪೋರ್ಟರ್‌ಗಳನ್ನು ಪಾಕ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಕೊಂದಿರುವುದನ್ನು ಸಹಿಸಲು ಸಾಧ್ಯವಿಲ್ಲ. ಅದೇ ರೀತಿ ನಮ್ಮ ಸೇನೆ ವರ್ತಿಸುವುದಿಲ್ಲ ಎಂದು ವಿವರಣೆ ನೀಡಿದ್ದಾರೆ. ನಮ್ಮ ಸೇನೆ ಅತ್ಯಂತ ನೈತಿಕತೆಯಲ್ಲಿ ವ್ಯವಹರಿಸುತ್ತಿದೆ ಎಂದರು.
ಸಿಯಾಚಿನ್ ನಿರ್ಗಲ್ಲು ಪ್ರದೇಶದಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಉಂಟಾಗುತ್ತದೆ ಎಂದು ಭಾವಿಸುವುದೇ ಬೇಡ. ಅಲ್ಲಿ ಕಟ್ಟೆಚ್ಚರದ ಸ್ಥಿತಿ ಮುಂದುವರಿ ಯುತ್ತದೆ. ಶಾಕ್ಸ್‌ಗಾಮ್ ವ್ಯಾಲಿ ಮತ್ತು ಸಿಯಾಚಿನ್‌ನಲ್ಲಿ ಎರಡೂ ದೇಶದ ಪಡೆಗಳು ಆಗಾಗ ಸಂಧಿಸುತ್ತವೆ ಎಂದರು.
ಸಂವಿಧಾನಕ್ಕೆ ಬದ್ಧ: 1.3 ಮಿಲಿಯ ಯೋಧರನ್ನು ಹೊಂದಿರುವ ಸೇನೆ ಯಾವತ್ತೂ ದೇಶದ ಸಂವಿಧಾನಕ್ಕೆ ಅನುಗುಣವಾಗಿಯೇ ನಡೆದುಕೊಳ್ಳುತ್ತದೆ. ಅಧಿಕಾರಿಗಳು ಅಥವಾ ಸೈನಿಕರು ಈ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಅದುವೇ ನಮ್ಮ ಎಲ್ಲಾ ಕೆಲಸಗಳಿಗೆ ಪ್ರೇರಣೆ ಎಂದು ಹೇಳಿ ದ್ದಾರೆ. ತಾವು ನಿಷ್ಠೆ, ನಂಬಿಕೆ, ಬಲವರ್ಧನೆ ಎಂಬ ಮೂರು ಸೂತ್ರಗಳನ್ನು ಅವಲಂಬಿಸಿ ಕೊಂಡು ಕಾರ್ಯವೆಸಗುವುದಾಗಿ ಹೇಳಿದ್ದಾರೆ ಜ.ನರವಾನೆ.
ಸವಾಲಿಗೆ ಸಿದ್ಧ: ಚೀನಾ ಜತೆಗೆ ಹೊಂದಿ ಕೊಂಡಿರುವ ಗಡಿಯಲ್ಲಿ ಸೇನೆ ಯಾವುದೇ ರೀತಿಯ ಸವಾಲು ಎದುರಿಸಲು ಸಿದ್ಧ ವಾಗಿದೆ. ಬದಲಾಗಿರುವ ಪರಿಸ್ಥಿತಿಯಲ್ಲಿ ಸೇನೆಯ ಮೂರು ವಿಭಾಗಗಳಿಗೆ ಅತ್ಯುನ್ನತ ದರ್ಜೆಯ ಮಿಲಿಟರಿ ತರಬೇತಿ ನೀಡಿ, ಸಂಭಾವ್ಯ ಸ್ಥಿತಿ ಎದುರಿಸಲು ತರಬೇತಿ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆ ರಚಿಸಿದ್ದರಿಂದ ಅನುಕೂಲವೇ ಆಗಲಿದೆ.
ಇದರ ಜತೆಗೆ ಏಕೀಕರಣ (ಇಂಟೆ ಗ್ರೇಷನ್), ತರಬೇತಿ (ಟ್ರೈನಿಂಗ್), ಸಿಬ್ಬಂದಿ (ಪರ್ಸೊನೆಲ್), ಗುಣಮಟ್ಟ (ಕ್ವಾಲಿಟಿ) ಎಂಬ ಸೂತ್ರಗಳನ್ನೂ ಅನುಸರಿಸಲಾಗುತ್ತದೆ ಎಂದಿದ್ದಾರೆ ನರವಾನೆ. ಸೇನೆಯಲ್ಲಿ ಗುಣ ಮಟ್ಟವೇ ಪ್ರಧಾನ ಆದ್ಯತೆಯಾಗುತ್ತದೆಯೇ ಹೊರತು ಎಷ್ಟು ಪ್ರಮಾಣ ಅಥವಾ ಗಾತ್ರ ಗಣನೆಗೆ ಬರುವುದಿಲ್ಲವೆಂದರು.