Advertisement

ಉಸಿರಿರುವವರೆಗೂ ಕ್ಷೇತ್ರದ ಜನರ ಸೇವೆ ಮಾಡುವೆ: ಬೆಳ್ಳಿ ಪ್ರಕಾಶ್‌

05:53 PM Aug 07, 2021 | Team Udayavani |

ಕಡೂರು: ನನ್ನ ಉಸಿರು ಇರುವವರೆಗೂ ಈ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ ಎಂದು ಶಾಸಕ ಹಾಗೂ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿಪ್ರಕಾಶ್‌ ಹೇಳಿದರು.

Advertisement

ತಾಲೂಕಿನ ಜೀವನಾಡಿ ಕೆರೆಯಾದ ಮದಗದಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ವಿವಿಧ ಮಠಾಧೀಶರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ರೈತರನ್ನು ಒಳಗೊಂಡಂತೆ ಭಾರೀ ಜನಸ್ತೋಮದ ಸಮ್ಮುಖದಲ್ಲಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಅಧಿಕಾರ ಇರಲಿ, ಇಲ್ಲದಿರಲಿ ಈ ಕ್ಷೇತ್ರದ ಜನರ ಅಭಿವೃದ್ಧಿಗೆ ಉಸಿರು ಇರುವ ತನಕ ಕೆಲಸ ಮಾಡುತ್ತೇನೆ. ಇದು ನನ್ನ ಸಂಕಲ್ಪ. ಎಲ್ಲಾ ದೇವರ, ಮಠಾಧಿಧೀಶರ ಆಶೀರ್ವಾದ ಈ ಕ್ಷೇತ್ರದ ಮೇಲಿದೆ. ಜನರು ಎದೆಗುಂದುವುದು ಬೇಡ. ಮುಂದಿನ ದಿನಗಳಲ್ಲಿ ಅಭೂತಪೂರ್ವ ಅಭಿವೃದ್ಧಿ ಕ್ಷೇತ್ರದಲ್ಲಿ ನಡೆಯಲಿದೆ. ಇದಕ್ಕೆ ತಮ್ಮ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕೃಪಾಕಟಾಕ್ಷವೂ ಇದೆ ಎಂದು ಹೇಳಿದರು.

ಮದಗದಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ಈಗಾಗಲೇ 5 ಕೋಟಿ ರೂ. ವೆಚ್ಚದ ಜಾಕ್‌ವೆಲ್‌, ತೂಬು ನಿರ್ಮಾಣದ ಕಾರ್ಯ ಶೇ. 90 ಭಾಗ ಮುಗಿದಿದೆ. ಸರಕಾರದ ಅನುದಾನ ಇನ್ನೂ ಬರಬೇಕಾಗಿದೆ. ಕೆರೆ ಏರಿ ಬಲವರ್ಧನೆ ಮತ್ತು ಕೆರೆಯ ಅಂಗಳದಲ್ಲಿ ಕಾಂಕ್ರೀಟ್‌ ನೆಲಹಾಸು ಕೆಲಸವಾಗಬೇಕಾಗಿದೆ. ಕಡೂರಿನಿಂದ ಮದಗದಕೆರೆ ಸಂಪರ್ಕಿಸುವ 15 ಕಿ.ಮೀ ರಸ್ತೆಯಲ್ಲಿ 2 ಕಿ.ಮೀ ಕಚ್ಚಾ ರಸ್ತೆ ಮಾತ್ರ ಇದ್ದು ಅದಕ್ಕಾಗಿ 7.75 ಕೋಟಿ ರೂ. ಮಂಜೂರಾಗಿದೆ. ಉಳಿದ ಹಣದಲ್ಲಿ ಕೆರೆಯಿಂದ ಮುಂದುವರಿದು ಸಿದ್ರಹಳ್ಳಿ ಮೂಲಕ ಸಖರಾಯಪಟ್ಟಣ ರಸ್ತೆ ಸಂಪರ್ಕಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:ನನ್ನ ತಾಯಿಗೊಂದು ಕಾಗದ ಬರೆಯಬಹುದೇ?

Advertisement

ಕೆರೆಗೆ ಬಾಗಿನ ಅರ್ಪಿಸುವುದು ಭಾರತೀಯ ಸಂಸ್ಕೃತಿಯ ಲಕ್ಷಣ. ಪ್ರಕೃತಿ ಮುನಿದರೆ ಮನುಷ್ಯನ ಬದುಕು ಬರ್ಬರವಾಗುತ್ತದೆ. ತೂಬು ನಿರ್ಮಾಣದ ವಿಷಯದಲ್ಲಿ 2 ಬಾರಿ ಕೆರೆಯ ನೀರನ್ನು ಖಾಲಿ ಮಾಡಿದರೂ ದೈವಾನುಗ್ರಹ ಮತ್ತು ಪ್ರಕೃತಿಯ ಆಶೀರ್ವಾದದಿಂದ ತುಂಬಿ ಕೋಡಿ ಬಿದ್ದಿದೆ. ಜನರು ಪ್ರಕೃತಿಯ ವಿರುದ್ಧ ಸವಾರಿ ಮಾಡಬಾರದು. ಉಳುಮೆ ಭೂಮಿಗಾಗಿ ಬೆಟ್ಟಗುಡ್ಡಗಳನ್ನು ಸಾಗುವಳಿ ಮಾಡಬಾರದು. ಹಾಗೆ ಮಾಡಿದರೆ ಪ್ರಕೃತಿ ಮುನಿದು ಸರ್ವನಾಶ ಖಂಡಿತ ಎಂದು ಎಚ್ಚರಿಸಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಯಳನಾಡು ಮಠದ ಡಾ| ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಗಂಗೆಯನ್ನು ಪೂಜೆ ಮಾಡುವುದರಿಂದ ಮನುಕುಲದ ಅಭಿವೃದ್ಧಿಯಾಗುತ್ತದೆ. ಶಾಸಕ ಬೆಳ್ಳಿಪ್ರಕಾಶ್‌ ಅವರು ಉಸಿರು ಇರುವವರೆಗೆ ಕ್ಷೇತ್ರದ ಸೇವೆ ಮಾಡುತ್ತೇನೆ ಎಂದಿದ್ದಾರೆ. ಅದು ಅವರ ಅಂತರಾಳದ ಭಾವನೆಯನ್ನು ತೋರಿಸುತ್ತದೆ. ಕ್ಷೇತ್ರದ ಮಟ್ಟಿಗೆ ಇಂತಹ ಕ್ರಿಯಾಶೀಲ ಶಾಸಕರ ಅಗತ್ಯವಿದೆ ಎಂದರು.

ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿ, ಕೆ. ಬಿದರೆ ದೊಡ್ಡಮಠದ ಪ್ರಭುಕುಮಾರಸ್ವಾಮಿ,ಬಾಳೆಹೊನ್ನೂರು ಶಾಖಾ ಮಠ ಬೀರೂರಿನ ರುದ್ರಮುನಿಶಿವಾಚಾರ್ಯ ಸ್ವಾಮೀಜಿ ಮತ್ತು ತರೀಕೆರೆ ನಂದಿ ಮಠದ ಶ್ರೀ ವೃಷಭೇಂದ್ರ ಶಿವಾಚಾರ್ಯ ಸ್ವಾಮೀಜಿ ಬಾಗಿನ ಅರ್ಪಿಸಿ ಸಾನ್ನಿಧ್ಯ ವಹಿಸಿ ಶುಭ ಕೋರಿದರು.

ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌, ಬೀರೂರು ಪುರಸಭೆ ಅಧ್ಯಕ್ಷ ಎಂ.ಪಿ. ಸುದರ್ಶನ್‌, ಬೀರೂರು ಅಡಕೆ ಬೆಳೆಗಾರ ಸಂಘದ ಅಧ್ಯಕ್ಷ ಸೋಮಶೇಖರ್‌, ಕಡೂರು ಅಡಕೆ ಬೆಳೆಗಾರ ಸಂಘದ ಅಧ್ಯಕ್ಷ ಕೆ.ಎಚ್‌. ಶಂಕರ್‌, ಜಿಪಂ ಮಾಜಿ ಸದಸ್ಯ ಕೆ.ಆರ್‌. ಮಹೇಶ್‌ ಒಡೆಯರ್‌, ಮಾಲಿನಿಬಾಯಿ ರಾಜನಾಯ್ಕ, ಕಾವೇರಿ ಲಕ್ಕಪ್ಪ, ಪುರಸಭೆ ಉಪಾಧ್ಯಕ್ಷೆ ವಿಜಯ ಚಿನ್ನರಾಜ್‌, ಸದಸ್ಯರಾದ ಮಂಜುಳಾಚಂದ್ರು, ಸಂದೇಶ್‌ಕುಮಾರ್‌ (ಸುಬ್ಬಣ್ಣ), ಗೋವಿಂದ, ಯತಿರಾಜ್‌, ಬಿಜೆಪಿ ಮುಖಂಡರಾದ ಅಡಕೆ ಚಂದ್ರು, ದಾನಿ ಉಮೇಶ್‌, ಖಾನಾವಳಿ ಶಿವಣ್ಣ, ಬೀರೂರು ಮಾರ್ಗದ ಮಧು, ಶಾಮಿಯಾನ ಚಂದ್ರು, ಮಲ್ಲಿಕಾರ್ಜುನ್‌(ಮಲ್ಲು), ಡಾ| ದಿನೇಶ್‌, ಗುತ್ತಿಗೆದಾರ ಸಿದ್ದಪ್ಪ, ಲಕ್ಕಪ್ಪ ಮುಂತಾದವರು ಇದ್ದರು. ತಹಶೀಲ್ದಾರ್‌ ಉಮೇಶ್‌ ಜೆ. ನೇತೃತ್ವದಲ್ಲಿ ಇಒ ಡಾ|ದೇವರಾಜನಾಯ್ಕ, ವೃತ್ತ ನಿರೀಕ್ಷಕ ಮಂಜುನಾಥ್‌, ಶಿವಕುಮಾರ್‌, ಪುರಸಭೆ ಸಿಒ ಮಂಜುನಾಥ್‌, ಆರಕ್ಷಕ ಇಲಾಖೆ, ಕೃಷಿ, ಅರಣ್ಯ, ತೋಟಗಾರಿಕೆ, ಮಹಿಳಾ ಮಕ್ಕಳ ಕಲ್ಯಾಣ, ಕಾರ್ಮಿಕ, ಸಮಾಜ ಕಲ್ಯಾಣ, ಸಣ್ಣ ನೀರಾವರಿ, ಬಿಸಿಎಂ ಸೇರಿದಂತೆ ಮತ್ತಿತರ ಇಲಾಖೆಗಳ ಅಧಿ ಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು. ಬಾಗಿನ ಅರ್ಪಣೆಗೆ ಮುನ್ನ ಶಾಸಕರು, ಅಧಿಕಾರಿಗಳು ಶ್ರೀ ಕೆಂಚಮ್ಮ ದೇವಿಗೆ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next