Advertisement

ಪುನಾರಂಭವಾಗಲಿವೆ 5 ತ್ಯಾಜ್ಯ ಘಟಕ

12:38 PM Jun 09, 2017 | |

ಬೆಂಗಳೂರು: ಪ್ರತಿಭಟನೆ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಕೆಲ ದಿನಗಳಿಂದ ಸ್ಥಗಿತಗೊಂಡಿದ್ದ ಪಾಲಿಕೆಯ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ತಿಂಗಳೊಳಗೆ ಆರಂಭಿಸಲು ಪಾಲಿಕೆ ನಿರ್ಧರಿಸಿದೆ. 

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಏಳು ತ್ಯಾಜ್ಯ ಸಂಸ್ಕರಣೆ ಘಟಕಗಳ ಪೈಕಿ ಕೆಲವೊಂದು ಘಟಕಗಳು ಕೆಲ ದಿನಗಳಿಂದ ಸ್ಥಗಿತಗೊಂಡಿದ್ದವು. ಸ್ಥಳೀಯರ ಪ್ರತಿಭಟನೆ ಹಾಗೂ ಘಟಕಗಳಲ್ಲಿ ಉಂಟಾದ ತಾಂತ್ರಿಕ ದೋಷ ಇದಕ್ಕೆ ಕಾರಣವಾಗಿತ್ತು . ಇದೀಗ ಘಟಕಗಳಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ಸಂಪೂರ್ಣವಾಗಿ ವಿಲೇವಾರಿ ಮಾಡಲಾಗಿದ್ದು, ತಾಂತ್ರಿಕ ದೋಷಗಳನ್ನು ಪರಿಹರಿಸಲಾಗಿದೆ.

“ಘಟಕದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಭಾಗಗಳಲ್ಲಿ ದುರ್ವಾಸನೆ ಹರಡಿದೆ. ಸುತ್ತಮುತ್ತಲಿನ ಕೊಳವೆ ಬಾವಿಗಳು ಕಲುಷಿತಗೊಂಡಿವೆ. ಜನರು ಉಸಿರಾಟದ ತೊಂದರೆ ಹಾಗೂ ಚರ್ಮ ರೋಗಗಳಿಗೆ ತುತ್ತಾಗುತ್ತಿದ್ದಾರೆ,’ ಎಂದು ಆರೋಪಿಸಿ ಸ್ಥಳೀಯರು ಘಟಕ ಮುಚ್ಚುವಂತೆ ಪ್ರತಿಭಟನೆ ನಡೆಸಿದ್ದರು. 

ಹೀಗಾಗಿ ಕೆಲ ಘಟಕಗಳನ್ನು ಸ್ಥಗಿತಗೊಳಿಸಿದ್ದ ಅಧಿಕಾರಿಗಳು ಇದೀಗ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಆ ಮೂಲಕ ಸ್ಥಗಿತಗೊಂಡಿದ್ದ ಕನ್ನಹಳ್ಳಿ, ಸೀಗೇಹಳ್ಳಿ, ಮಾವಳ್ಳಿಪುರ, ಚಿಕ್ಕನಾಗಮಂಗಲ, ದೊಡ್ಡಬಿದರ ಕಲ್ಲು ಘಟಕಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ತಿಂಗಳೊಳಗೆ ಎಲ್ಲ ಘಟಕಗಳನ್ನು ಆರಂಭಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ತ್ಯಾಜ್ಯ ಘಟಕಗಳಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ ಕೆಲವೊಂದು ಘಟಕಗಳನ್ನು ಮುಚ್ಚಲಾಗಿತ್ತು. ಕೆಲವೊಂದು ಘಟಕಗಳಲ್ಲಿ ತಾಂತ್ರಿಕ ದೋಷ ಉಂಟಾಗಿದ್ದ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿತ್ತು. ಸದ್ಯ ಘಟಕಗಳ ಸಮಸ್ಯೆಗಳನ್ನು ಸರಿಪಡಿಸಲಾಗಿದೆ.ತಿಂಗಳೊಳಗೆ ಐದು ಘಟಕಗಳು ಆರಂಭವಾಗಲಿವೆ. 
– ಸಫ‌ರಾಜ್‌ ಖಾನ್‌, ಪಾಲಿಕೆ ಘನತ್ಯಾಜ್ಯ ಮತ್ತು ಆರೋಗ್ಯ ವಿಭಾಗದ ಜಂಟಿ ಆಯುಕ್ತ

Advertisement

ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ವಿದ್ಯುತ್‌ ತಯಾರಿಕಾ ಘಟಕವನ್ನಾಗಿ ಪರಿವರ್ತಿಸಲು ಗುತ್ತಿಗೆದಾರರು ನಿರಾಸಕ್ತಿ ತೋರಿಸಿದ್ದಾರೆ. ಬಿಬಿಎಂಪಿ ಕಾಮಗಾರಿ ನಡೆಸಿದರೆ ಸರಿಯಾದ ಸಮಯಕ್ಕೆ ಬಿಲ್‌ ಆಗುವುದಿಲ್ಲ ಎಂಬ ಭಾವನೆ ಅವರಲ್ಲಿದ್ದು, ಸರ್ಕಾರದಿಂದಲೇ ಯೋಜನೆ ಜಾರಿಗೊಳಿಸುವ ಚಿಂತನೆಯಿದೆ. 
– ಜಿ.ಪದ್ಮಾವತಿ, ಮೇಯರ್‌

ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಯೋಜನೆಗೆ ಗುತ್ತಿಗೆದಾರರ ನಿರಾಸಕ್ತಿ
ಬೆಂಗಳೂರು:
ಬಿಬಿಎಂಪಿಯ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಗೊಬ್ಬರ ಉತ್ಪಾದನಾ ಘಟಕಗಳ ಬದಲಾಗಿ ವಿದ್ಯುತ್‌ ಉತ್ಪಾದನಾ ಘಟಕನ್ನಾಗಿ ಪರಿವರ್ತಿಸುವ ಯೋಜನೆಗೆ ಹಿನ್ನಡೆಯಾಗಿದೆ. ಈ ಕುರಿತು ಪಾಲಿಕೆಯಿಂದ ಕರೆಯಲಾದ ಎರಡು ಟೆಂಡರ್‌ಗಳಲ್ಲಿ ಗುತ್ತಿಗೆದಾರರು ಪಾಲ್ಗೊಂಡೇ ಇಲ್ಲ.

ನಗರದಲ್ಲಿ ತ್ಯಾಜ್ಯವನ್ನು ವೈಜ್ಞಾನಿವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಬಿಬಿಎಂಪಿ ಹೊಸದಾಗಿ 7 ತ್ಯಾಜ್ಯ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿತ್ತು. ಆದರೆ, ಘಟಕಗಳಲ್ಲಿ ತ್ಯಾಜ್ಯ ಸಂಸ್ಕರಣೆ ವಿಳಂಬವಾಗಿ ವಿವಿಧ ಸಮಸ್ಯೆಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಘಟಕಗಳನ್ನು ಮುಚ್ಚುವಂತೆ ಪ್ರತಿಭಟನೆಗಳು ಹೆಚ್ಚಾಗಿವೆ. ಅದರ ಹಿನ್ನೆಲೆಯಲ್ಲಿ ಬಿಬಿಎಂಪಿ ಗೊಬ್ಬರದ ಬದಲಿಗೆ ವಿದ್ಯುತ್‌ ಉತ್ಪಾದಿಸಲು ಮುಂದಾಗಿತ್ತು. 

ಗೊಬ್ಬರ ಬದಲಿಗೆ ವಿದ್ಯುತ್‌ ಉತ್ಪಾದಿಸುವ ಯೋಜನೆಗೆ ಪಾಲಿಕೆಯಿಂದ ಎರಡು ಬಾರಿ ಟೆಂಡರ್‌ ಆಹ್ವಾನಿಸಿದರೂ ಗುತ್ತಿಗೆದಾರರು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಯೋಜನೆ ಜಾರಿಗೊಳಿಸುವ ಕುರಿತು ಚರ್ಚೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಮುಖ್ಯಮಂತ್ರಿಗಳಿಗೆ ವರದಿಯನ್ನು ನೀಡಲಾಗಿದ್ದು, ಮೂರನೇ ಬಾರಿಗೆ ಮತ್ತೂಮ್ಮೆ ಟೆಂಡರ್‌ ಆಹ್ವಾನಿಸಲಾಗಿದೆ.

ಬಿಬಿಎಂಪಿ ವತಿಯಿಂದ ಕೈಗೊಳ್ಳುವ ಕಾಮಗಾರಿಗೆ ಕೆಲಸ ಮುಗಿದ ನಂತರ ಗುತ್ತಿಗೆದಾರರಿಗೆ ನೀಡಬೇಕಾದ ಬಿಲ್‌ ಪಾವತಿಯಲ್ಲಿ ವಿಳಂಬವಾಗುತ್ತಿದೆ ಎಂಬ ಅಭಿಪ್ರಾಯವಿದೆ. ಕಳೆದೆರಡು ವರ್ಷಗಳಿಂದ ಮಾಡಲಾದ ಕಾಮಗಾರಿಗಳಿಗೆ ಸಮರ್ಪಕವಾಗಿ ಬಿಲ್‌ ಪಾವತಿಯಾಗುತ್ತಿದ್ದು, ಘಟಕಗಳನ್ನು ಮುಚ್ಚುವಂತೆ ಸ್ಥಳೀಯರಿಂದ ಪ್ರತಿಭಟನೆ ನಡೆಯುತ್ತಿರುವುದರಿಂದ ಗುತ್ತಿಗೆದಾರರು ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುವಂತಾಗಿದೆ.

ಹಳೆಯ ಘಟಕಗಳೊಂದಿಗೆ ಹೊಸದಾಗಿ ನಾಲ್ಕು ಕಡೆಗಳಲ್ಲಿ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗಿತ್ತು. ಆದರೆ, ಘಟಕ ಸ್ಥಾಪನೆಗೆ ಗುರುತಿಸಲಾಗಿದ್ದ ಭಾಗಗಳಲ್ಲಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಸದ್ಯ ಘಟಕ ಸ್ಥಾಪನೆಯನ್ನು ಮುಂದೂಡಲಾಗಿದೆ. ಗುತ್ತಿಗೆದಾರರ ನಿರಾಸಕ್ತಿಯಿಂದ ಮಹತ್ವದ ಯೋಜನೆ ನೆನೆಗುದಿಗೆ ಬೀಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳು ಸರ್ಕಾರದಿಂದ ಯೋಜನೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next