Advertisement

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

06:35 PM Nov 08, 2024 | ವಿಷ್ಣುದಾಸ್ ಪಾಟೀಲ್ |

ಚನ್ನಪಟ್ಟಣದ ಉಪಚುನಾವಣ ರಣಕಣ ಇಡೀ ದೇಶದ ಗಮನ ಸೆಳೆದಿದೆ. ರಾಜ್ಯದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದರೂ ಬೊಂಬೆ ನಾಡು ಮಾತ್ರ ಎಲ್ಲಕ್ಕಿಂತಲೂ ಹೈ ವೋಲ್ಟೇಜ್ ಕಣವಾಗಿ ಪರಿಣಮಿಸಿದೆ. ಇಲ್ಲಿ ನೀರಾವರಿ ವಿಚಾರದ ಜತೆಗೆ ಕಣ್ಣೀರಿನ ವಿಚಾರವೂ ಚರ್ಚೆಗೆ ಬರುತ್ತಿದೆ. ರೈತರ ವಿಚಾರದ ಜತೆ ರೌಡಿಸಂ ವಿಚಾರವೂ ಟೀಕೆಗೆ ಅಸ್ತ್ರವಾಗುತ್ತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಹಲವು ಪ್ರಬಲ ನಾಯಕರ ಭರ್ಜರಿ ಪ್ರಚಾರದ ನಡುವೆ ಮತದಾನದ ಕೊನೆಯ ಕ್ಷಣದಲ್ಲಿ ಈ ಬಾರಿ ಶತಾಯಗತಾಯ ಮೊಮ್ಮಗನನ್ನ ಗೆಲ್ಲಿಸಲೇಬೇಕೆಂದು ಪಣತೊಟ್ಟು ಪ್ರಚಾರಕ್ಕಿಳಿದಿರುವ ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ (H D Deve Gowda) ಅವರು ಇಳಿ ವಯಸ್ಸಿನಲ್ಲಿ ಉತ್ಸಾಹಿ ತರುಣನಂತೆ ಗೋಚರಿಸಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.

Advertisement

ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ತೆಗೆದುಹಾಕುವವರೆಗೂ ವಿರಮಿಸುವುದಿಲ್ಲ ಮತ್ತು ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ” ಎಂದು ದೊಡ್ಡ ಗೌಡರು ಶುಕ್ರವಾರ(ನ8)  ಪುನರುಚ್ಚರಿಸಿದ್ದಾರೆ.

ಚನ್ನಪಟ್ಟಣದಲ್ಲಿ ಚುನಾವಣ ಪ್ರಚಾರ ನಡೆಸುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ‘ ನರೇಂದ್ರ ಮೋದಿ ಅವರ ನಾಯಕತ್ವವನ್ನು ಹೊಗಳಿ, ಇಂಡಿ ಮೈತ್ರಿಕೂಟದ ನಾಯಕರು ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

”ಜೀವನದಲ್ಲಿ ಕೊನೆಯ ಉಸಿರು ಇರುವವರೆಗೂ, ನಾನು ರಾಜಕೀಯದಲ್ಲಿ ಹೋರಾಡುತ್ತೇನೆ. ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಯಾವತ್ತೂ ಹೇಳಿಲ್ಲ. ನನಗೀಗ ವಯಸ್ಸು 92. ಈ ಸರಕಾರವನ್ನು ತೆಗೆದುಹಾಕುವವರೆಗೆ ನಾನು ಹೋರಾಡುತ್ತೇನೆ. ನನ್ನ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಗೆದ್ದ ನಂತರ ನಾನು ಮನೆಯಲ್ಲಿ ಮಲಗುವುದಿಲ್ಲ.ನನ್ನ 62 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಸರಕಾರವನ್ನು ನಾನು ನೋಡಿಲ್ಲ.ನಾವು ಈ ರಾಜ್ಯವನ್ನು ಉಳಿಸಬೇಕಾಗಿದೆ. ಅದಕ್ಕಾಗಿ ನನ್ನ ಮಿತಿ ಮೀರಿ ಪ್ರಯತ್ನಿಸುತ್ತೇನೆ” ಎಂದರು.

Advertisement

”ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಿಂದ ಚುನಾವಣಾ ಕಣಕ್ಕಿಳಿದಿರುವ ಕಾಯಾನಕ್ಕಾಗಿ ಕೇವಲ ಪ್ರಚಾರ ಮತ್ತು ರಾಜಕೀಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ. ಮುಂದಿನ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಹೋರಾಡುತ್ತೇನೆ” ಎಂದರು.

ತಾನು, ತನ್ನ ಮಗ ಮತ್ತು ಮೊಮ್ಮಗ ಕಣ್ಣೀರು ಸುರಿಸಿರುವುದರ ಕುರಿತಾಗಿನ ಟೀಕೆಗಳಿಗೆ ಪ್ರತಿಕ್ರಿಯಿಸಿ “ ನಮ್ಮ ರೈತರು ನೋವು ಅನುಭವಿಸುತ್ತಿರುವಾಗ ನಮ್ಮ ಕುಟುಂಬ ಕಣ್ಣೀರು ಸುರಿಸುತ್ತಿದೆ, ಅದು ನನ್ನಿಂದ ಬಂದಿದೆ, ನನ್ನ ತಂದೆ ರೈತ, ನಾವು ಬಡತನವನ್ನು ಅನುಭವಿಸಿದ್ದೇವೆ, ನಮಗೆ ಬಡವರ ಪರ ಕಾಳಜಿ ಮತ್ತು ನೋವು ಇದೆ. ಕೊತ್ವಾಲ್ ರಾಮಚಂದ್ರ ಜತೆ ನೂರು ರೂಪಾಯಿಗೆ ಕೆಲಸ ಮಾಡಲು ಪ್ರಾರಂಭಿಸಿದ ಡಿ.ಕೆ. ಶಿವಕುಮಾರ್ ಕಣ್ಣೀರು ಹಾಕುವುದನ್ನು ಯಾರಾದರೂ ನೋಡಿದ್ದೀರಾ?” ಎಂದು ಪ್ರತಿಬಾಣ ಪ್ರಯೋಗಿಸಿದ್ದಾರೆ.

ನವೆಂಬರ್ 13 ರಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ನಿಖಿಲ್ ಪರ ನಿತ್ಯವೂ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರವೀಗ ಕದನ ಕೂತೂಹಲದ ಕಣವಾಗಿ ಮಾರ್ಪಾಡಾಗಿದ್ದು,ದೇವೇಗೌಡರ ಕುಟುಂಬ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಜಿದ್ದಾ ಜಿದ್ದಿನ ಕಣದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೈಕಾರ ಹಾಕುತ್ತಿದ್ದು, ಹಳೆಯ ದಿನಗಳನ್ನು ಮರೆತಿರುವ ಕೈ ಕಾರ್ಯಕರ್ತರು ಸಿ.ಪಿ.ಯೋಗೇಶ್ವರ್ ಪರವಾಗಿ ಹೋರಾಟ ಸಂಘಟಿಸುತ್ತಿದ್ದಾರೆ. ನಿಖಿಲ್ ಮತ್ತು ಯೋಗೇಶ್ವರ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ನ.23 ರಂದು ಫಲಿತಾಂಶ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next