Advertisement

Russia: ಮುಂದಿನ ವರ್ಷ ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆ- ಪಟ್ಟ ಉಳಿಸಿಕೊಳ್ಳುವರೇ ಪುತಿನ್‌?

12:53 AM Dec 17, 2023 | Team Udayavani |

ಪ್ರಪಂಚದ ಅತೀದೊಡ್ಡ ಅಣುಶಕ್ತಿ ರಾಷ್ಟ್ರವಾಗಿರುವ ರಷ್ಯಾದಲ್ಲಿ ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಕಳೆದ ಎರಡೂವರೆ ದಶಕಗಳಿಂದ ರಷ್ಯಾದ ಆಡಳಿತವನ್ನು ತಮ್ಮ ಬಿಗಿ ಹಿಡಿತದಲ್ಲಿರಿಸಿಕೊಂಡಿರುವ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಆದರೆ ಈ ಬಾರಿಯ ಚುನಾವಣೆ ಪುತಿನ್‌ಗೆ ಈ ಹಿಂದಿನ ಚುನಾವಣೆಗಳಂತೆ ಸುಲಭದ ತುತ್ತೇನಲ್ಲ. ಪುತಿನ್‌ ತಮ್ಮದೇ ಆದ ನೀತಿ, ಧೋರಣೆಗಳೊಂದಿಗೆ ರಷ್ಯಾವನ್ನು ವಿಶ್ವದ ಪ್ರಬಲ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿರು ವರಾದರೂ ಕಳೆದ ಕೆಲವು ವರ್ಷಗಳಿಂದೀಚೆಗೆ ಜಾಗತಿಕವಾಗಿ ರಷ್ಯಾ ಒಂದಿಷ್ಟು ಕಳೆಗುಂದಿದೆ. 2022ರ ಫೆಬ್ರವರಿಯಲ್ಲಿ ಉಕ್ರೇನ್‌ ಮೇಲೆ ಆಕ್ರಮಣ ನಡೆಸಿದ ಬಳಿಕ ಪಾಶ್ಚಾತ್ಯ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಪುತಿನ್‌ ಅವರು ಸಹಜವಾಗಿಯೇ ದೇಶದಲ್ಲಿ ಈ ಹಿಂದಿಗಿಂತ ಹೆಚ್ಚು ವಿರೋಧದ ಜತೆಗೆ ಹತ್ತು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.

Advertisement

ಇದರ ನಡುವೆ ದೇಶದ ಆರ್ಥಿಕತೆ, ಸೇನಾ ಸಾಮರ್ಥ್ಯದ ಬಗೆಗೆ ಹತ್ತು ಹಲವು ಗುಮಾನಿಗಳು ಎದ್ದಿವೆ. ಅಷ್ಟು ಮಾತ್ರವಲ್ಲದೆ ಸ್ವತಃ ಪುತಿನ್‌ ಅವರ ಆರೋಗ್ಯದ ಬಗೆಗೂ ಪದೇಪದೆ ನಾನಾ ತೆರನಾದ ವದಂತಿಗಳು ಹರಿದಾಡುತ್ತಿವೆ. ಈ ಎಲ್ಲ ಸಂಕಷ್ಟ, ಸವಾಲು, ಗೊಂದಲಗಳ ಹೊರತಾಗಿಯೂ ವ್ಲಾದಿಮಿರ್‌ ಪುತಿನ್‌ 2024ರ ಮಾರ್ಚ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದಕ್ಕಾಗಿ ಈಗಾಗಲೇ ದೇಶದ ಸಂವಿಧಾನಕ್ಕೆ ತಿದ್ದುಪಡಿ ತಂದು ದೇಶದ ಅಧ್ಯಕ್ಷೀಯ ಚುನಾವಣೆಗೆ ಮತ್ತೆರಡು ಬಾರಿ ಸ್ಪರ್ಧಿಸಲು ಹಾದಿ ಸುಗಮಗೊಳಿಸಿಕೊಂಡಿದ್ದಾರೆ.

ಪ್ರಬಲ ಪ್ರತಿಸ್ಪರ್ಧಿಯ ಸವಾಲು

ರಷ್ಯಾವನ್ನು ಇಷ್ಟೊಂದು ಪ್ರಬಲವಾಗಿ ಆವರಿಸಿಕೊಂಡಿರುವ ಪುತಿನ್‌ನನ್ನು ಚುನಾವಣೆಯಲ್ಲಿ ಸೋಲಿಸುವುದು ಅಸಾಧ್ಯದ ಮಾತೇ. ಜತೆಗೆ ಈ ಬಾರಿಯ ಚುನಾವಣೆಯಲ್ಲಿ ಪುತಿನ್‌ರ ವಿರುದ್ಧ ಯಾರು ಸ್ಫರ್ಧಿಸಲಿದ್ದಾರೆ ಎನ್ನುವ ಪ್ರಶ್ನೆ ಕೂಡ ಏಳುವುದು ಸಹಜ. ಪುತಿನ್‌ ಸಾಮರ್ಥ್ಯಕ್ಕೆ ಸರಿಸಮಾನಾಗಿರುವವರು ಯಾರು ಎಂಬುದೇ ಸದ್ಯದ ಕುತೂಹಲ. ರಷ್ಯಾದ ವಿಪಕ್ಷ ನಾಯಕರಾಗಿರುವ ಅಲೆಕ್ಸಿ ನಾವೆಲಿ° ಸದ್ಯ ಜೈಲಿನಲ್ಲಿದ್ದಾರೆ. ಆದರೆ ಜೈಲಿನಿಂದಲೇ ಪುತಿನ್‌ ವಿರುದ್ಧ ಸ್ಪರ್ಧಿಸಿ, ಆನ್‌ಲೈನ್‌ ಮೂಲಕ ಪ್ರಚಾರಗಳನ್ನು ಕೈಗೊಂಡು ಪುತಿನ್‌ ಸರ್ವಾಧಿಕಾರಕ್ಕೆ ಅಂತ್ಯ ಹಾಡಬೇಕು ಎಂದು ಪುತಿನ್‌ ವಿರೋಧಿಗಳು ಕೇಳಿಕೊಳ್ಳುತ್ತಿದ್ದಾರೆ. ಇದಲ್ಲದೆ ಕಾನೂನು ತಜ್ಞರಾಗಿರುವ ಬೋರಿಸ್‌ ನಾಡೆಝ್ದಿನ್‌ ಹಾಗೂ ಪತ್ರಕರ್ತ, ವಕೀಲನಾಗಿರುವ ಯೆಕಟೆರಿನಾ ಡಂಟ್ಸೋವಾ ಚುನಾವಣ ಕಣಕ್ಕಿಳಿಯಲು ಆಸಕ್ತಿ ತೋರಿದ್ದಾರೆ. ಆದರೆ ಪುತಿನ್‌ರ ಸಾಮರ್ಥ್ಯ ಮತ್ತು ಖ್ಯಾತಿಗೆ ಇವರು ಎಷ್ಟು ಸರಿದೂಗುತ್ತಾರೆ ಎಂಬುದೇ ಸದ್ಯದ ಪ್ರಶ್ನೆ.

ಪುತಿನ್‌ ಆಡಳಿತ ಪ್ರಾಬಲ್ಯ
2024ರ ಮಾರ್ಚ್‌ನಲ್ಲಿ ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಹಾಲಿ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಈ ಬಾರಿಯೂ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. 71ರ ಹರೆಯದ ಪುತಿನ್‌ ಈ ಬಾರಿ ಚುನಾವಣೆಯನ್ನು ಗೆದ್ದರೆ, 6ನೇ ಬಾರಿ ರಷ್ಯಾದ ಅತ್ಯುನ್ನತ ಹುದ್ದೆಯ ಚುಕ್ಕಾಣಿ ಹಿಡಿಯಲಿದ್ದಾರೆ. ಜತೆಗೆ ಅತೀ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿದ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. 2036ರ ವರೆಗೂ ಚುನಾವಣೆಗೆ ನಿಲ್ಲುವ ಅವಕಾಶವನ್ನು ಪುತಿನ್‌ ಹೊಂದಿದ್ದಾರೆ. 2036ರ ವರೆಗೂ ಪುತಿನ್‌ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂಬುದು ಕೆಲವು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿಯೂ ಪುತಿನ್‌ ಗೆಲವು ಶತಃಸಿದ್ಧ ಎಂಬುದು ಅವರ ಖಚಿತ ಅಭಿಮತ. ಪುತಿನ್‌ 1999ರಿಂದ ನಿರಂತರವಾಗಿ ರಷ್ಯಾದ ಆಡಳಿತದ ಮೇಲೆ ಹಿಡಿತ ಸಾಧಿಸಿಕೊಂಡು ಬಂದಿದ್ದಾರೆ. 1999ರಿಂದ 2000ರ ಹಾಗೂ 2008ರಿಂದ 2012ರ ವರೆಗೆ ರಷ್ಯಾದ ಪ್ರಧಾನ ಮಂತ್ರಿಯ ಹುದ್ದೆಯಲ್ಲಿ ಹಾಗೂ 2000ದಿಂದ 2008 ಮತ್ತು 2012ರಿಂದ ಅಧ್ಯಕ್ಷರಾಗಿ ರಷ್ಯಾದ ಆಡಳಿತ ಮೇಲೆ ತನ್ನ ಪ್ರಾಬಲ್ಯವನ್ನು ಸಾಧಿಸಿದ್ದಾರೆ.

Advertisement

ಕಾನೂನು ತಿದ್ದುಪಡಿ
ರಷ್ಯಾದ ಅಧ್ಯಕ್ಷ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಳ್ಳುವ ಸಲುವಾಗಿ ಪುತಿನ್‌ ಅಲ್ಲಿನ ಕಾನೂನಿಗೂ ತಿದ್ದುಪಡಿ ತಂದಿದ್ದರು. ತಿದ್ದುಪಡಿಯಾದ ಈ ಕಾನೂನು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಅಲ್ಲಿನ ನಾಗರಿಕರು ಜೀವಿತಾವಧಿಯಲ್ಲಿ ಎರಡು ಬಾರಿ ಅಧಿಕಾರಕ್ಕೇರುವ ಅವಕಾಶವನ್ನು ಒದಗಿಸಿಕೊಡುತ್ತದೆ. ಇದರಿಂದ ಪುತಿನ್‌ ಮತ್ತೇ ಎರಡು ಬಾರಿ ಅಧ್ಯಕ್ಷೀಯ ಪಟ್ಟಕ್ಕೇರುವ ಅವಕಾಶವನ್ನು ತಮ್ಮದಾಗಿಸಿಕೊಂಡರು. ಅಲ್ಲದೇ ಪುತಿನ್‌ ಈ ಮೊದಲೇ ಇದ್ದ ಪ್ರಧಾನಮಂತ್ರಿ ಹಾಗೂ ಅಧ್ಯಕ್ಷ ಸ್ಥಾನದ ಅವಧಿಯನ್ನು ಇದು ಕಾನೂನುಬಾಹಿರ ಗೊಳಿಸಿತ್ತು. ಈ ಕಾನೂನು ಜಾರಿಗೆ ಬರುವವರೆಗೂ ಈಗಾಗಲೇ ಸೇವೆ ಸಲ್ಲಿಸಿದ ಅವಧಿಯನ್ನು ಇದು ಪರಿಗಣನೆಗೆ ಒಳಪಡಿಸದೇ ಇರುವ ಕಾರಣ ಪುತಿನ್‌ 2036ರ ವರೆಗೆ ಅಧಿಕಾರದಲ್ಲಿರಬಹುದಾಗಿದೆ.

ನೀವೇ ನಮ್ಮ ನಾಯಕ
ಕಳೆದ ಎರಡೂವರೆ ದಶಕಗಳಿಂದ ರಷ್ಯಾದಲ್ಲಿ ಅಧಿಕಾರ ನಡೆಸಿಕೊಂಡು ಬರುತ್ತಿರುವ ಪುತಿನ್‌ ದೇಶದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿ, ಇಡೀ ದೇಶದ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ನಿಯಂತ್ರಿಸು ತ್ತಿದ್ದಾರೆ. ಪುತಿನ್‌ನ ಅಧಿಕಾರ ಕಾರ್ಯತಂತ್ರಕ್ಕೆ ಇಡೀ ಜಗತ್ತೇ ಸಾಕ್ಷಿಯಾಗಿದೆ. ಪುತಿನ್‌ನ ಆಡಳಿತ, ಕಾರ್ಯ ವೈಖರಿ, ನಿರ್ಧಾರಗಳನ್ನು ಟೀಕಿಸುವ ಟೀಕಾಕಾರರು, ಮಾಧ್ಯಮಗಳು ಒಂದೋ ಶಿಕ್ಷೆಗೆ ಗುರಿಯಾಗಿವೆ ಇಲ್ಲವೇ ನಿಷೇಧಕ್ಕೊಳಗಾಗಿವೆ. ಉಕ್ರೇನ್‌ ಮೇಲೆ ರಷ್ಯಾ ಯುದ್ಧವನ್ನು ಸಾರಿದಾಗ ಅಮೆರಿಕ ಸೇರಿದಂತೆ ಇಡೀ ವಿಶ್ವವೇ ಪುತಿನ್‌ನ ನಡೆಗೆ ವಿರೋಧವನ್ನು ವ್ಯಕ್ತಪಡಿಸಿತ್ತು. ಆದರೆ ಪುತಿನ್‌ ಇದುವರೆಗೂ ತನ್ನ ನಿರ್ಧಾರವನ್ನು ಸರಿಯೆಂದೇ ಪ್ರತಿಪಾದಿಸುತ್ತ ಬಂದಿದ್ದಾರೆ.

ಪುತಿನ್‌ ಆರೋಗ್ಯದ ಬಗೆಗಿನ ವದಂತಿಗಳು ಹಲವಾರು ಗುಮಾನಿಗಳಿಗೆ ದಾರಿ ಮಾಡಿಕೊಟ್ಟಿವೆ. ಪುತಿನ್‌ ಸರಕಾರಕ್ಕೆ ದೊಡ್ಡದಾಗಿ ಹೊಡೆತ ನೀಡಿದ್ದು ವ್ಯಾಗ್ನರ್‌ ಪಡೆಯ ಪ್ರಿಗೊಝಿನ್‌, ಪುತಿನ್‌ ಸರಕಾರದ ವಿರುದ್ಧ ದಂಗೆಯೆದ್ದದ್ದು. ಒಂದು ಕಾಲದಲ್ಲಿ ಪುತಿನ್‌ನ ಆಪ್ತನಾಗಿದ್ದ ಪ್ರಿಗೊಝಿನ್‌ ಏಕಾಏಕಿ ಪುತಿನ್‌ ವಿರುದ್ಧ ತಿರುಗಿ ಬಿದ್ದಿದ್ದರು. ಇನ್ನು ಪುತಿನ್‌ಗೆ ಉಳಿಗಾಲವೇ ಇಲ್ಲ ಎಂಬಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿತ್ತು. ಇಷ್ಟಾ ದರೂ ಪುತಿನ್‌ ಕಿಂಚಿತ್‌ ಮಿಸುಕಾಡದೆ ವ್ಯಾಗ್ನರ್‌ ಪಡೆಗಳನ್ನು ಹಿಮ್ಮೆಟ್ಟಿಸಲು ಮುನ್ನುಗ್ಗಿದ್ದರು. ಕೆಲವು ದಿನಗಳ ಬಳಿಕ ಪರಿಸ್ಥಿತಿಯೂ ತಿಳಿಯಾಯಿತು. ಆದರೆ ಕೆಲವು ತಿಂಗಳುಗಳ ಬಳಿಕ ಪ್ರಿಗೊಝಿನ್‌ನ ಸಾವಿನ ಸುದ್ದಿ ದಿಢೀರ್‌ ಎಂಬಂತೆ ವಿಶ್ವಾದ್ಯಂತ ಹಲವು ಅನುಮಾನಗಳನ್ನು ಸೃಷ್ಟಿಸಿತು.

ಈ ಸಾವಿಗೂ, ಪುತಿನ್‌ಗೂ ಸಂಬಂಧವಿದೆಯಾ ಎಂಬ ಪ್ರಶ್ನೆ ಹರಿದಾಡಿತು. ಆದರೆ ಇವು ಯಾವುವೂ ಪುತಿನ್‌ ಅವರನ್ನು ಧೃತಿಗೆಡಿಸಲಿಲ್ಲ. ಈ ಬೆಳವಣಿಗೆಗಳು ರಷ್ಯಾದ ಸೇನಾ ಪಡೆಗಳಿಗೆ ಪುತಿನ್‌ರ ಮೇಲಿದ್ದ ವಿಶ್ವಾಸ ವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದವು. ಈಗ ಪುತಿನ್‌ “ಯುದ್ಧಗ್ರಸ್ತ ದೇಶದ ಸೇನಾನಾಯಕನಾಗಿ, ನನ್ನ ನಿಲುವುಗಳು, ನಿರ್ಧಾರಗಳು ವಿಭಿನ್ನ ಎನ್ನುವ ವಿಚಾರವನ್ನು ಒಪ್ಪುತ್ತೇನೆ. ಆದರೆ ಇದು ನಿರ್ಧಾರವನ್ನು ತೆಗೆದುಕೊಳ್ಳುವ ಸಮಯ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ’ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಲ್ಲಿನ ಸೈನಿಕರು “ನೀವೇ ನಮ್ಮ ನಾಯಕ. ನಮಗೆ, ದೇಶಕ್ಕೆ ನಿಮ್ಮ ಅಗತ್ಯವಿದೆ’ ಎಂದು ಹೇಳುವ ಮೂಲಕ ಪುತಿನ್‌ರಿಗೆ ಬೆಂಬಲ ಸಾರಿದ್ದಾರೆ. ಸರ್ವಾಧಿಕಾರವನ್ನು ಪುತಿನ್‌ ನಡೆಸುತ್ತಿದ್ದರು, ಅಲ್ಲಿನ ನಾಗರಿಕರು ಪುತಿನ್‌ ಪರವಾಗಿಯೇ ತಮ್ಮ ಒಲವನ್ನು ತೋರಿಸಿದ್ದಾರೆ.

ಸವಾಲುಗಳೇನು ?
ಉಕ್ರೇನ್‌ ಮೇಲಿನ ಯುದ್ಧ ಘೋಷಣೆ ರಷ್ಯಾ ಪಾಲಿಗೆ ಸವಾಲುಗಳನ್ನು ತಂದೊಡ್ಡಿದೆ. ಯುದ್ಧ ಘೋಷಣೆಯಾಗುತ್ತಿದ್ದಂತೆ ರಷ್ಯಾ ಆರ್ಥಿಕವಾಗಿ ಹಿನ್ನಡೆಯನ್ನು ಕಂಡಿತ್ತು. ಹಲವು ದೇಶಗಳು ರಷ್ಯಾ ಮೇಲಿನ ತನ್ನ ಹೂಡಿಕೆಯನ್ನು ಹಿಂದೆ ಪಡೆದಿದ್ದವು. ತಜ್ಞರ ಪ್ರಕಾರ ಈಗ ರಷ್ಯಾದ ಆರ್ಥಿಕ ಪರಿಸ್ಥಿತಿ ಸುಧಾರಣೆಯ ಹಾದಿಯನ್ನು ಕಂಡಿದೆ. ಮುಂದಿನ ವರ್ಷಕ್ಕೆ ಆರ್ಥಿಕತೆ ಪುನಶ್ಚೇತನಗೊಳ್ಳಲಿದೆ ಎಂಬುದು ಭರವಸೆ. ಆದರೆ ಇದನ್ನು ಮತ್ತಷ್ಟು ಬಲಗೊಳಿಸುವ ಜವಾಬ್ದಾರಿಯೂ ಇದೆ. ಜತೆಗೆ ಕಾರ್ಮಿಕರ ಕೊರತೆ, ಹಣದುಬ್ಬರದಂತ ಸಮಸ್ಯೆಗಳು ರಷ್ಯಾ ಎದುರಿಸುತ್ತಿದ್ದು, ಇವೆಲ್ಲವನ್ನು ಸಂಭಾಳಿಸುವ, ನೀಗಿಸುವ ಸವಾಲು ಪುತಿನ್‌ ಎದುರಿಗಿದೆ.

ಶೇ. 2.9ರಷ್ಟು ನಿರುದ್ಯೋಗ ಸಮಸ್ಯೆ ರಷ್ಯಾದಲ್ಲಿದೆ. ಅಲ್ಲದೆ ಮಾಸ್ಕೋ ರಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಂಪನ್ಮೂಲವನ್ನು ವ್ಯಯಿಸುತ್ತಿದೆ. ಆದರೆ ಐಟಿ ಹಾಗೂ ಉತ್ಪಾದನ ಕ್ಷೇತ್ರಗಳು ಸಿಬಂದಿ ಕೊರತೆಯಿಂದ ಬಳಲುತ್ತಿವೆ. ತಾಂತ್ರಿಕವಾಗಿಯೂ ಮೊದಲಿರಬೇಕು, ಸ್ವಾವಲಂಬಿಗಳಾಗಬೇಕು ಎನ್ನುವ ರಷ್ಯಾದ ಗುರಿಗೆ ಇನ್ನಷ್ಟು ಪಳಗಿದ, ನಿಖರ ಸಿಬಂದಿಯ ಆವಶ್ಯಕತೆ ಇದೆ. ಅದಕ್ಕಾಗಿ ಸಿಬಂದಿ ಕೇಳುವಷ್ಟು ಸಂಬಳವನ್ನು ಕೊಡಬೇಕು, ಆದರೆ ಇದು ರಷ್ಯಾಕ್ಕೆ ಸಮಸ್ಯೆಯಾಗಿದೆ. ರಷ್ಯಾವನ್ನು ತಾಂತ್ರಿಕ ಕೌಶಲದ ದೇಶವಾಗಿ ಮಾರ್ಪಾಡು ಮಾಡಬೇಕಾದರೆ ಹೆಚ್ಚಿನ ಸಂಪನ್ಮೂಲವನ್ನು ವ್ಯಯಿಸಬೇಕಾಗುತ್ತದೆ. ಇಲ್ಲದಿದ್ದರೆ ದೇಶದ ಜಿಡಿಪಿಯಲ್ಲಿಯೂ ಶೇ. 3ರಷ್ಟು ಇಳಿಕೆ ಕಾಣಬಹುದು ಎನ್ನಲಾಗಿದೆ.

ಇನ್ನು ಹಣದುಬ್ಬರ ಕಾಡುತ್ತಿರುವ ಇನ್ನೊಂದು ಸಮಸ್ಯೆ. ಕಳೆದ ವರ್ಷ ಶೇ. 16ರಷ್ಟಿದ್ದ ಹಣದುಬ್ಬರ ಈ ಬಾರಿ ಶೇ. 7.5ರಷ್ಟಿದೆ. ಆರ್ಥಿಕತೆಯು ಬೆಳೆಯುತ್ತಿರುವ ಕಾರಣ ಮುಂದಿನ ವರ್ಷದಲ್ಲಿ ಇದು ಇನ್ನಷ್ಟು ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಾರೆ. ರಷ್ಯಾದ ಆರ್ಥಿಕತೆಯ ಮೂಲ ಆಧಾರ ತೈಲ. ಸದ್ಯ ಇರುವ ತೈಲ ಬೆಲೆಯು ರಷ್ಯಾದ ಆರ್ಥಿಕತೆಯ ಅಗತ್ಯದ ಪ್ರಮಾಣಕ್ಕಿಂತಲೂ ಹೆಚ್ಚೇ ಇದೆ. ಒಂದು ವೇಳೆ ಪಾಶ್ಚಾತ್ಯ ದೇಶಗಳು ಕಠಿನ ನೀತಿಯನ್ನು ರಷ್ಯಾದ ಮೇಲೆ ಜಾರಿಗೊಳಿಸಿದರೆ ಇದೇ ದೇಶಕ್ಕೆ ತೊಡಕಾಗಿ ಪರಿಣಮಿಸಿಬಹುದು. ಒಂದು ವೇಳೆ ಯಥಾಸ್ಥಿತಿ ಮುಂದುವರಿದರೆ ಆರ್ಥಿಕತೆಯೂ ಸರಿಯಾದ ಹಾದಿಯಲ್ಲಿ ಹೋಗಲಿದೆ.

ವಿಧಾತ್ರಿ ಭಟ್‌, ಉಪ್ಪುಂದ

Advertisement

Udayavani is now on Telegram. Click here to join our channel and stay updated with the latest news.

Next