ಹೊಸದಿಲ್ಲಿ: ಪೂರ್ವ ಲಡಾಖ್‌ನ ಗಾಲ್ವನ್‌ನಲ್ಲಿ ಸೇನಾಪಡೆಗಳ ಸಂಘ ರ್ಷದ ಬಳಿಕ ಇದೇ ಮೊದಲ ಬಾರಿಗೆ ಉಜ್ಬೇಕಿಸ್ಥಾನದ ಸಮರ ಕಂಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯಾಗುವ ಸಾಧ್ಯತೆಗಳು ಇವೆ.
ಸೋಮವಾರವಷ್ಟೇ ಗೋಗ್ರಾ- ಹಾಟ್‌ಸ್ಪ್ರಿಂಗ್‌ಗಳಿಂದ ಎರಡೂ ದೇಶಗಳ ಸೇನೆಗಳು ವಾಪಸಾಗಿವೆ. ಆದರೆ ಇಬ್ಬರು ನಾಯಕರ ಭೇಟಿ ಇನ್ನೂ ದೃಢಪಟ್ಟಿಲ್ಲ.
ಸೆ. 15 ಮತ್ತು 16ರಂದು ಉಜ್ಬೇಕಿಸ್ಥಾನದ ಸಮರ ಕಂಡದಲ್ಲಿ ಆಯೋಜಿಸಿರುವ ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ)ದ ಸಭೆಯಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಆದರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜತೆಗೆ ಪ್ರಧಾನಿ ಮೋದಿ ಭೇಟಿಯಾಗಿ, ಮಾತುಕತೆ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ 2 ರಾಷ್ಟ್ರಗಳ ನಡುವಿನ ಸಹಕಾರ, ವಿಶ್ವಸಂಸ್ಥೆ, ಜಿ20 ಮತ್ತು ಶಾಂಘೈ ಸಹಕಾರ ಒಕ್ಕೂಟದ ಸಭೆಗಳಲ್ಲಿ ಪ್ರಸ್ತಾವ ಮಾಡಬೇಕಾದ ವಿಚಾರಗಳು ಸೇರಿದಂತೆ ಹಲವು ಅಂಶಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಉಜ್ಬೇಕಿಸ್ಥಾನ ಅಧ್ಯಕ್ಷ ಶವ್ಕತ್ ಮಿರ್ಜಿಯೋವ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
“ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳ ಅನಂತರ ಶಾಂಘೈ ಸಹಕಾರ ಒಕ್ಕೂಟ ರಾಷ್ಟ್ರಗಳ ನಾಯಕರು ಪರಸ್ಪರ ಭೇಟಿಯಾಗುತ್ತಿದ್ದಾರೆ. ಸಭೆಯ ನೇಪಥ್ಯದಲ್ಲಿ ಕೆಲವು ನಾಯಕರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಆದರೆ ಇದರ ಸಂಪೂರ್ಣ ಮಾಹಿತಿ ಇನ್ನೂ ಅಂತಿಮ ಗೊಂಡಿಲ್ಲ,’ ಎಂದು ಉಜ್ಬೇಕಿಸ್ಥಾನದಲ್ಲಿ ಭಾರತೀಯ ರಾಯಭಾರಿ ಮನೀಶ್ ಪ್ರಭಾತ್ ತಿಳಿಸಿದರು.