ಕೋಲ್ಕತಾ: ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತುವುದಕ್ಕಾಗಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಸುತ್ತಲಿನ ವಿವಾದದಿಂದ ಅಂತರ ಕಾಯ್ದುಕೊಳ್ಳಲು ತೃಣಮೂಲ ಕಾಂಗ್ರೆಸ್ ನಿರ್ಧರಿಸಿದೆ.
ಮಹುವಾ ಮೊಯಿತ್ರಾ ವಿರುದ್ಧದ ‘ಪ್ರಶ್ನೆಗೆ ನಗದು (cash-for-query)’ ಆರೋಪದ ಕುರಿತು ತೃಣಮೂಲ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದ್ದು ‘ ಈ ವಿಷಯವನ್ನು ಸಂಸತ್ತಿನ ವೇದಿಕೆಯ ಮೂಲಕ ತನಿಖೆ ಮಾಡಲಿ’ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಭಾನುವಾರ ಪ್ರತಿಕ್ರಿಯೆ ನೀಡಿದ್ದಾರೆ.
ಆರೋಪಗಳಿಗೆ ಸಂಬಂಧಿಸಿದಂತೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಮಹುವಾ ಮೊಯಿತ್ರಾ ಅವರಿಗೆ ಪಕ್ಷ ಸಲಹೆ ನೀಡಿದೆ ಎಂದು ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.
“ನಾವು ಮಾಧ್ಯಮಗಳಲ್ಲಿ ವರದಿಗಳನ್ನು ಗಮನಿಸಿದ್ದು, ಆರೋಪಗಳ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಪಕ್ಷದ ನಾಯಕತ್ವದಿಂದ ಸಂಬಂಧಪಟ್ಟ ಸದಸ್ಯರಿಗೆ ಸೂಚಿಸಲಾಗಿದೆ. ಅವರು ಈಗಾಗಲೇ ಅದನ್ನು ಮಾಡಿದ್ದಾರೆ. ಆದಾಗ್ಯೂ, ಈ ವಿಷಯವು ಚುನಾಯಿತ ಸಂಸದರಿಗೆ ಸಂಬಂಧಿಸಿರುವುದರಿಂದ, ಈ ವಿಷಯವನ್ನು ಸಂಸತ್ತಿನ ಸರಿಯಾದ ವೇದಿಕೆಯಿಂದ ತನಿಖೆ ಮಾಡಲಿ, ಅದರ ನಂತರ ಪಕ್ಷದ ನಾಯಕತ್ವವು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ” ಎಂದು ಹೇಳಿದ್ದಾರೆ.
”ಈ ವಿಚಾರದಲ್ಲಿ ಪಕ್ಷವು ಏನೂ ಹೇಳುವುದಿಲ್ಲ. ಈ ವಿವಾದವು ಯಾರ ಸುತ್ತ ಸುತ್ತುತ್ತಿದೆಯೋ ಅವರೇ ಇದಕ್ಕೆ ಪ್ರತಿಕ್ರಿಯಿಸಲು ಸೂಕ್ತ ಎಂದು ನಾವು ಭಾವಿಸುತ್ತೇವೆ” ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.
ಕಳೆದ ಭಾನುವಾರ (ಅ15 ) ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಉದ್ಯಮಿ, ದರ್ಶನ್ ಹಿರಾನಂದಾನಿ(ರಿಯಲ್ ಎಸ್ಟೇಟ್-ಟು-ಎನರ್ಜಿ ಗ್ರೂಪ್ ಹಿರನಂದಾನಿ ಸಿಇಒ) ಅವರಿಂದ ನಗದು ಮತ್ತು ಉಡುಗೊರೆಗಳನ್ನು ಪಡೆದು ಸಂಸತ್ತಿನಲ್ಲಿ ಅದಾನಿ ಗ್ರೂಪ್ ವಿರುದ್ಧ ಪ್ರಶ್ನೆಗಳನ್ನು ಕೇಳಿದ್ದಾರೆ” ಎಂದು ಆರೋಪಿಸಿದ ನಂತರ ರಾಜಕೀಯ ಬಿರುಗಾಳಿ ಎದ್ದಿದೆ.