ಕಲಬುರಗಿ: ಜೀವನದಲ್ಲಿ ಉಸಿರು ಇರುವವರೆಗೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು ಸತ್ಯಕ್ಕೆ ದೂರಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಲಾಪುರೆ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಆರಂಭದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿನ ಸಿಪಾಯಿ. ಜತೆಗೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಪಕ್ಷಕ್ಕಾಗಿ ಚಿಂಚೋಳಿ ವಿಧಾನಸಭೆ ತ್ಯಾಗ ಮಾಡಿದೆ. ಪಕ್ಷದ ನಾಯಕರು ಹೇಳಿದ ಮಾತಿಗೆ ಕ್ಷೇತ್ರ ಬಿಟ್ಟು ಕೊಡಲಾಗಿದೆ. ಆ ಸಂದರ್ಭದಲ್ಲೇ ಅನೇಕ ಆಫರ್ ಗಳು ಬಂದಿದ್ದರೂ ಕೇರ್ ಮಾಡಿರಲಿಲ್ಲ. ಈ ಸಮಯದಲ್ಲಿ ಹೇಗೆ ಕಾಂಗ್ರೆಸ್ ಗೆ ಹೋಗುತ್ತೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಚಿತ್ತಾಪುರ ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿಯಾಗಿರುವುದಾಗಿ ತಿಳಿಸಿದರು.
ಮಾಜಿ ಸಚಿವ ಬಾಬುರಾವ ಚಿಂಚನಸೂರ ಬಿಜೆಪಿ ಪಕ್ಷದಲ್ಲಿ ಎಲ್ಲವನ್ನು ಅನುಭವಿಸಿ ಪಕ್ಷ ತ್ಯಜಿಸಿರುವುದು ಆತ್ನಾವಲೋಕನ ಮಾಡಿಕೊಳ್ಳುವಂತಿದೆ. ಈಗ ಚಿಂಚನಸೂರ ಚಿತ್ತಾಪುರ ಕ್ಷೇತ್ರ ಬಿಜೆಪಿ ಝೀರೋ ಮಾಡುವುದಾಗಿ ಹೇಳುತ್ತಿದ್ದಾರೆ. ಹಿಂದೆ ಬಾಬುರಾವ ಚಿಂಚನಸೂರ ಹಾಗೂ ಇತರರು ಕಾಂಗ್ರೆಸ್ ನಲ್ಲಿದ್ದರೂ ತಾವು ಶಹಾಬಾದ್ ದಲ್ಲಿ ಹಾಗೂ ವಾಲ್ಮೀಕಿ ನಾಯಕ ಶಾಸಕರಾಗಿದ್ದೆವು. ಇದನ್ನೆಲ್ಲ ಅವರೇ ಅರ್ಥ ಮಾಡಿಕೊಳ್ಳಬೇಕೆಂದರು.
ಚಿಂಚನಸೂರ ಕಾಂಗ್ರೆಸ್ ಗೆ ಹೋಗುವುದಾದರೆ ಸುಮ್ಮನೆ ಹೋಗಬೇಕಿತ್ತು. ಅದನ್ನು ಬಿಟ್ಟು ತಳಬುಡವಿಲ್ಲದ ಮಾತು ಗಳನ್ನಾಡುತ್ತಿರುವುದು ಜನರೆಲ್ಲ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ ಎಂದರು.
ತಾವೂ ಸಹ ಚಿತ್ತಾಪುರ ದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದರಿಂದ ಕಾಂಗ್ರೆಸ್ ಗೆ ನಡುಕ ಶುರುವಾಗಿದೆ. ಹೀಗಾಗಿ ಕಾಂಗ್ರೆಸ್ ಗೆ ಏನು ಮಾಡಬೇಕೆಂಬುದು ತೋಚುತ್ತಿಲ್ಲ ಎಂದರು.
ಮೊನ್ನೆ ತಮ್ಮ ಜನ್ಮ ದಿನದಂಗವಾಗಿ ಅಭಿಮಾನಿ ಬಳಗದವರು ಕುಕ್ಕರ್ ಹಂಚಿದ್ದಾರೆ. ಅಭಿಮಾನಿ ಬಳಗ ಕಳೆದ ಹಲವಾರು ವರ್ಷಗಳಿಂದ ಚಿತ್ತಾಪುರ, ಚಿಂಚೋಳಿ ಸೇರಿದಂತೆ ಇತರೆಡೆ ಉಚಿತ ಸಾಮೂಹಿಕ ವಿವಾಹ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಸ್ಪಷ್ಟಪಡಿಸಿದರು.