ಬೆಂಗಳೂರು: ಹಿಜಾಬ್ ಕಾರಣದಿಂದ ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡರೆ, ಅವರಿಗೆ ಬೇರೆ ಅವಕಾಶ ನೀಡುವುದಿಲ್ಲ. ಪರೀಕ್ಷೆ ಬೇಕೆಂದರೆ ಹಿಜಾಬ್ ತೆಗೆದು ಬರೆಯಲಿ. ಕೇವಲ ಅವರಿಗಷ್ಟೇ ಅಲ್ಲ, ಬೇರೆ ಯಾವುದೇ ಕಾರಣಕ್ಕೆ ಪರೀಕ್ಷೆ ತಪ್ಪಿಸಿಕೊಂಡ ಹಿಂದೂ ಮಕ್ಕಳಿಗೂ ಅವರಿಗೆ ಬೇರೆ ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಆದೇಶವಿದೆ. ಅದನ್ನು ಕೆಲವು ಹೆಣ್ಣುಮಕ್ಕಳು ವಿರೋಧಿಸಿದ್ದಾರೆ. ಆದರೆ, ಅವರ ಪರ ಕಾಂಗ್ರೆಸ್ ನವರು ಮಾತನಾಡುತ್ತಾರೆ. ಇದಕ್ಕೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.
ನಾಳೆ ಶಾಲೆ ಆರಂಭ: ಶಿವಮೊಗ್ಗದಲ್ಲಿ ಶಾಲಾ ಕಾಲೇಜು ಆರಂಭಿಸುವ ಬಗ್ಗೆ ಡಿಸಿ ನಿರ್ಧಾರ ಮಾಡುತ್ತಾರೆ. ಇವತ್ತು ಗಂಭೀರ ಪರಿಸ್ಥಿತಿಯಿದ್ದ ಕಾರಣ ಇಂದು ಒಂದು ದಿನ ರಜೆ ನೀಡಲಾಗಿದೆ. ಕರ್ಫ್ಯೂ ಇದ್ದ ಕಾರಣದಿಂದ ಶಾಲೆಗಳು ಇಂದು ಪ್ರಾರಂಭವಾಗಿಲ್ಲ. ನಾಳೆಯಿಂದ ಯಥಾಸ್ಥಿತಿ ಕಾಯ್ದುಕೊಂಡು ಶಾಲೆ ತೆರೆಯುತ್ತೇವೆ ಎಂದು ನಾಗೇಶ್ ಹೇಳಿದರು.
ಇದನ್ನೂ ಓದಿ:ಈಶ್ವರಪ್ಪ ವಿರುದ್ಧ ಕೇಸ್ ಯಾಕಿಲ್ಲ: ಸರ್ಕಾರ ಮತ್ತು ಪೋಲಿಸರ ವಿರುದ್ದ ಡಿಕೆ ಶಿವಕುಮಾರ್ ಗರಂ
ಕಾಂಗ್ರೆಸ್ ಇಷ್ಟು ದಿನ ನೀಡಿರುವ ಹೇಳಿಕೆಗಳನ್ನು ಜನ ಗಮನಿಸುತ್ತಿದ್ದಾರೆ. ವಿನಾ ಕಾರಣ ರಾಷ್ಟ್ರಧ್ವಜದ ವಿವಾದ ಮಾತನಾಡುತ್ತಿದ್ದಾರೆ. ಬೇರೆ ಯಾರಾದರೂ ರಾಷ್ಟ್ರೀಯವಾದಿಗಳು ದೇಶಭಕ್ತಿ ಪಾಠ ಹೇಳಿಕೊಟ್ಟರೆ ಕಲಿಯಬಹುದು. ಆದರೆ ಕಾಂಗ್ರೆಸ್ ನವರಿಂದ ನಾವು ರಾಷ್ಟ್ರಭಕ್ತಿ ಕಲಿಯಬೇಕಿಲ್ಲ ಎಂದು ಬಿ.ಸಿ ನಾಗೇಶ್ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಕಾಲದ ಐದು ವರ್ಷದ ಲಿಸ್ಟ್ ತೆಗೆದು ನೋಡಿ. ಇಂತಹ ಕೃತ್ಯ ಮಾಡಿದವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿದ್ದಾರೆ. ಹಾಗೆ ಕೇಸ್ ಗಳನ್ನು ವಾಪಸ್ ಪಡೆಯದೇ ಇದ್ದರೆ ಅವರಿಗೂ ಭಯ ಇರುತ್ತಿತ್ತು ಎಂದು ಬಿ.ಸಿ.ನಾಗೇಶ್ ಹೇಳಿದರು.