ಮೈಸೂರು: ‘ನಾನು ಚುನಾವಣೆಗೆ ಎಲ್ಲೇ ಸ್ಪರ್ಧಿಸಿದರೂ, ಹಳೇ ಮೈಸೂರು ಭಾಗವನ್ನು ನಾನು ಮರೆಯುವುದಿಲ್ಲ. ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟಿರುವುದು ಹಳೇ ಮೈಸೂರು ಮತ್ತು ವರುಣಾ ಕ್ಷೇತ್ರ.ಇಲ್ಲಿ ಪಕ್ಷ ಸಂಘಟನೆ ನಿರಂತರವಾಗಿ ನಡೆಸುತ್ತೇನೆ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಬುಧವಾರ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಉಗ್ರರ ಬಂಧನ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ‘ವಿದ್ಯಾವಂತರು ಐಸಿಸ್ ಸಂಘಟನೆ ಜತೆ ನಂಟು ಹೊಂದಿರುವುದು ಆತಂಕಕಾರಿ ಬೆಳವಣಿಗೆ.ಶಿವಮೊಗ್ಗ ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂತಹ ಬೆಳವಣಿಗೆ ಕಂಡುಬಂದಿದೆ. ಅದರಲ್ಲೂ ಇಂಜಿನಿಯರಿಂಗ್ ಸೇರಿದಂತೆ ಉತ್ತಮ ವಿದ್ಯಾಭ್ಯಾಸ ಹೊಂದಿದವರು ಐಸಿಸ್ ಸಂಪರ್ಕ ಹೊಂದಿರುವುದು ಗೊತ್ತಾಗಿದೆ’ ಎಂದು ಕಳವಳ ವ್ಯಕ್ತ ಪಡಿಸಿದರು.
ಇದನ್ನೂ ಓದಿ: ಚಿಕ್ಕಮಗಳೂರು: ಬಸ್ ಚಲಿಸುತ್ತಿರುವಾಗಲೇ ಆಯತಪ್ಪಿ ಬಿದ್ದು ವಿದ್ಯಾರ್ಥಿನಿ ಮೆದುಳು ನಿಷ್ಕ್ರಿಯ
‘ಕರ್ನಾಟಕ ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟ. ಶಾಂತಿ ವಾತಾವರಣ ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ.ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರು ಇರುವ ಜಾಗದಲ್ಲಿ ಸಾರ್ವಕರ್ ಫೋಟೋ ಯಾಕೆ ಹಾಕಬೇಕು ಅಂತ ಕೇಳಿದ್ದರು. ಇಂತಹ ಓಲೈಕೆ ಮಾತುಗಳಿಂದ ಶಾಂತಿ ಕದಡುವ ವಾತಾವರಣ ನಿರ್ಮಾಣ ಆಗುತ್ತಿದೆ.ಚುನಾವಣಾ ವರ್ಷ ಆಗಿರುವುದರಿಂದ ಇಂತಹ ಮಾತುಗಳು ಸಹಜ’ಎಂದರು.
‘ಪಂಚಮಸಾಲಿ ಮೀಸಲಾತಿಗೆ ಯಡಿಯೂರಪ್ಪ ವಿರೋಧ ಮಾಡುತ್ತಿದ್ದಾರೆ’ ಎಂಬ ಸ್ವಾಮೀಜಿಗಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ,’ಯಡಿಯೂರಪ್ಪ ಹಾಗೂ ನನ್ನ ಹೆಸರನ್ನ ಈ ವಿಚಾರದಲ್ಲಿ ಪದೇ ಪದೇ ಎಳೆದು ತರುತ್ತಿದ್ದಾರೆ.ಯಡಿಯೂರಪ್ಪನವರು ಮೀಸಲಾತಿಗೆ ವಿರೋಧಿಸಿಲ್ಲ.ಸಿಎಂ ಮೇಲೆ ಯಡಿಯೂರಪ್ಪನವರು ಯಾವುದೇ ಒತ್ತಡ ಹೇರಿಲ್ಲ.ಯಡಿಯೂರಪ್ಪನವರು ಹಾಗೂ ವಿಜಯೇಂದ್ರ ಪಂಚಮಸಾಲಿ ಲಿಂಗಾಯತರ ವಿರೋಧಿ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ.ಯಾರೋ ರಾಜಕೀಯ ಕಾರಣಕ್ಕೆ ಸ್ವಾಮೀಜಿಗಳ ಮನಸ್ಸು ಕೆಡಿಸಿದ್ದಾರೆ’ ಎಂದರು.