ಮೈಸೂರು: 2023ರ ಚುನಾವಣೆ ಬಳಿಕ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಯಾವ ಸ್ಥಾನಮಾನ, ಯಾವುದೇ ಹುದ್ದೆಯೂ ನನಗೆ ಬೇಡ. ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ. ನನ್ನನ್ನು ಖುಷಿಪಡಿಸಲೆಂದು ಈ ವಿಚಾರ ಮತ್ತೆ ಪ್ರಸ್ತಾಪ ಮಾಡಬೇಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಜರಗಿದ ಚಾಮುಂಡೇಶ್ವರಿ ಮತ್ತು ಇಳವಾಲ, ಜಯಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಂಚೂಣಿ ಘಟಕಗಳ ಪದಗ್ರಹಣ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕೆಪಿಸಿಸಿ ಸದಸ್ಯ ಕೆ.ಮರಿಗೌಡ ಮಾತನಾಡಿ, ಸಿದ್ದರಾಮಯ್ಯ ಅವರು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ಅಲ್ಲಿಯೇ ಇದ್ದ ಕಾಂಗ್ರೆಸ್ ಮುಖಂಡ ಬಸವರಾಜು, ಮತ್ತೆ ಚಾಮುಂಡೇಶ್ವರಿಗೆ ಕರೆದು ಅಪಮಾನ ಮಾಡುವುದಕ್ಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಸೂರಿ ಎಂಬಾತ ಆಗಿರುವ ತಪ್ಪನ್ನು ಸರಿಪಡಿಸಲು ತಾವು ಮತ್ತೆ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿದರು. ತಮ್ಮ ಬೆಂಬಲಿಗರೇ ಅನ್ಯಾಯ ಮಾಡಿದರೆಂದು ಮತ್ತೊಬ್ಬರು ಜೋರು ದನಿಯಲ್ಲಿ ಹೇಳಿದರು. ಇದರಿಂದ ಕಾರ್ಯಕ್ರಮದಲ್ಲಿ ಕೆಲ ಕ್ಷಣ ಗೊಂದಲ ನಿರ್ಮಾಣವಾಯಿತು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 5 ಚುನಾವಣೆಗಳಲ್ಲಿ ಗೆದ್ದಿದ್ದೇನೆ. 3 ಬಾರಿ ಸೋಲು ಕಂಡಿದ್ದೇನೆ. 10 ವರ್ಷ ವರುಣಾದಿಂದ ಸ್ಪರ್ಧೆ ಮಾಡಿದ್ದೆ. 2018ರಲ್ಲಿ ಮತ್ತೆ ಸ್ಪರ್ಧಿಸಿ ಸೋಲು ಕಂಡಿದ್ದೇನೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ತಾನು ಸೋಲು-ಗೆಲುವನ್ನು ಸಹಜವಾಗಿ ಸ್ವೀಕರಿಸಿದ್ದೇನೆ. 2018ರಲ್ಲಿ ಜನರು ಆಶೀರ್ವಾದ ಮಾಡಲಿಲ್ಲ. ಸೋತಿದ್ದಕ್ಕೆ ವ್ಯಥೆ ಪಟ್ಟಿಲ್ಲ. ಬಾದಾಮಿಯಲ್ಲಿ 2 ದಿನ ಪ್ರಚಾರ ಮಾಡಿದರೂ ಜನರು ಗೆಲ್ಲಿಸಿದರು ಎಂದು ಚಾಮುಂಡೇಶ್ವರಿ ಸೋಲಿನ ಕಹಿಯನ್ನು ಸ್ಮರಿಸಿದರು.