ವಿಜಯಪುರ: ಹೆಚ್ಚು ಜನಸಂಖ್ಯೆ ಇರುವ ಪಂಚಮಸಾಲಿ ಸಮಾಜದಲ್ಲಿ ವೈಚಾರಿಕ ಭಿನ್ನತೆಯೂ ಸಹಜ. ಎಲ್ಲ ಪೀಠಗಳೂ ನಮ್ಮವೇ, ಮೂರು ಪೀಠಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇವೆ. ನಾವು ಹಾಗೂ ನಮ್ಮ ಟ್ರಸ್ಟ್ ಪಂಚಮಸಾಲಿ ಸಮಾಜವನ್ನು ಜೋಡಿಸುವ ಸೂಜಿ- ದಾರದ ಕೆಲಸ ಮಾಡಲಿದೆಯೇ ಹೊರತು ತುಂಡರಿಸುವ ಕತ್ತರಿ ಕೆಲಸ ಮಾಡದು ಎಂದು ಪಂಚಶಕ್ತಿ ಕಾಯಕ ಶಕ್ತಿ ಟ್ರಸ್ಟ್ ಗೌರವಾಧ್ಯಕ್ಷ ಅಥಣಿಯ ಕಕಮರಿ ರಾಯಲಿಂಗೇಶ್ವರ ಸಂಸ್ಥಾನದ ಮಠದ ಅಭಿನವ ಗುರುಲಿಂಗಜಂಗಮ ಶ್ರೀಗಳು ಹೇಳಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದೀರ್ಘ ಇತಿಹಾಸ ಹೊಂದಿರುವ ಪಂಚಮಸಾಲಿ ಸಮಾಜದಲ್ಲಿ ಆಧುನಿಕ ಜೀವನದ ಪರಿಣಾಮ ಧರ್ಮ ಸಂಸ್ಕಾರದಿಂದ ದೂರವಾಗಿದ್ದೇವೆ. ಹೀಗಾಗಿ ಸಮಾಜದ ಜನರಲ್ಲಿ ಸಂಸ್ಕೃತಿ, ಸಂಸ್ಕಾರ, ಧರ್ಮ, ಸಾಧನೆ, ಆಧ್ಯಾತ್ಮ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ಪಂಚಶಕ್ತಿ. ಸಮಾಜದ ಜನರಲ್ಲಿ ಧಾರ್ಮಿಕ ಸಂಸ್ಕಾರ ಜಾಗೃತಿಗಾಗಿ ಮೇ 9 ರಿಂದ 11 ರ ವರೆಗೆ ಸೋಲಾಪುರ ರಸ್ತೆಯಲ್ಲಿರುವ ಅಲ್ಲಮಪ್ರಭು ಶಾಲೆಯಲ್ಲಿ ಲಿಂಗ ದೀಕ್ಷೆ, ಚಿಂತನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಪಂಚಶಕ್ತಿ ಕಾಯಕ ಟ್ರಸ್ಟ್ ಸಹಯೋಗದಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ಸಮೂಹದಲ್ಲಿ ಸಮಾಜದ ಯುವಶಕ್ತಿಗೆ ಧರ್ಮ ಮಾರ್ಗದ ಜೀವನಕ್ಕಾಗಿ ಸಂಸ್ಕಾರ ನೀಡಲು ಈ ಲಿಂಗ ದೀಕ್ಷೆ-ಚಿಂತನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸದರಿ ಸಮಾರಂಭದಲ್ಲಿ ರಾಜಕೀಯ ನಾಯಕರು ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶವಿದೆ. ಆದರೆ ರಾಜಕೀಯ ನಾಯಕರಿಗೆ ಭಾಷಣ ಮಾಡಲು ಅವಕಾಶ ಇಲ್ಲ ಎಂದರು.
ಇದನ್ನೂ ಓದಿ:ಆದಿಶಂಕರರ ಅದ್ವೈತ ತತ್ತ್ವವೇ ಭಾರತದ ಆಧಾರಸ್ತಂಭ: ಸಚಿವ ಅಶ್ವಥ ನಾರಾಯಣ
ಸಿದ್ಧಶ್ರೀ ಅದ್ವೈತ ಆಶ್ರಮದ ಸಂಗಮೇಶ ಶರಣರು, ಟ್ರಸ್ಟ್ ಸಂಚಾಲಕ ಮಲ್ಲನಗೌಡ ಪಾಟೀಲ ಮನಗೂಳಿ ಇತರರು ಉಪಸ್ಥಿತರಿದ್ದರು.