ಬೆಂಗಳೂರು: ನಾನು ಚುನಾವಣೆಗೆ ಸ್ಪರ್ಧೆ ಮಾಡಿದಾಗಿನಿಂದ ಬಿಜೆಪಿ ಸೇರ್ಪಡೆ ಬಗ್ಗೆ ಮಾತು ಕೇಳಿ ಬರುತ್ತಿದೆ. ನನ್ನ ಜಿಲ್ಲೆಯ ಅಭಿವೃದ್ಧಿಯೇ ನನ್ನ ಉದ್ದೇಶ. ಈಗ ಯಾವುದೇ ಪಕ್ಷ ಸೇರಲು ನನಗೆ ತಾಂತ್ರಿಕ ಸಮಸ್ಯೆಯಿದೆ. ಜಿಲ್ಲೆಯ ಜನ ಹೇಗೆ ಹೇಳುತ್ತಾರೆಯೋ ಹಾಗೆ. ಒಂದು ಪಕ್ಷ ಸೇರಲು ಮಂಡ್ಯದ ಜನ ಹೇಳಬೇಕೇ ಹೊರತು ನಾನಾಗಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿದರು.
ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಹೇಳಿದ್ದಕ್ಕೆ ಪಕ್ಷೇತರನಾಗಿ ಸ್ಪರ್ಧಿಸಿದ್ದೆ. ಅಭಿಷೇಕ್ ಅವರನ್ನೂ ಚುನಾವಣೆಗೆ ನಿಲ್ಲಿಸಿ ಎಂದು ಜನ ಹೇಳುತ್ತಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರ ಅಭಿಷೇಕ್ ಗೆ ಬಿಟ್ಟಿದ್ದು ಎಂದರು.
ಸಂಘಟನೆಗಳು, ಸಮುದಾಯದ ಮುಖಂಡರ ಹೇಳಿಕೆಗಳಿಗೆ ಬಡವರು ಬಲಿಯಾಗುತ್ತಿದ್ದಾರೆ. ಎಲ್ಲರೂ ಶಾಂತಿಯಿಂದ ಇರಬೇಕಾಗುತ್ತದೆ. ಸರ್ಕಾರ ಪ್ರಚೋದನೆ ಮಾಡುವವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕಿದೆ ಎಂದರು.
ಮುಸ್ಕಾನ್ ಪರ ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಮುಖ್ಯಸ್ಥ ಜುವಾಹಿರಿ ಬೆಂಬಲ ವಿಚಾರಕ್ಕೆ ತನಿಖೆಗೆ ಆಗ್ರಹಿಸಿ ಸಿಎಂಗೆ ಸಂಸದ ಅನಂತ್ ಕುಮಾರ್ ಹೆಗಡೆ ಪತ್ರದ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ತನಿಖೆ ನಡೆದರೆ ತಪ್ಪೇನೂ ಇಲ್ಲ. ತನಿಖೆ ನಡೆದರೆ ಸತ್ಯ ಹೊರಗೆ ಬರುತ್ತದೆ. ಆದರೆ ಮಂಡ್ಯದಲ್ಲಿ ಶಾಂತಿ ವಾತಾವರಣವಿದೆ. ತನಿಖೆಯಾಗಬೇಕು. ತನಿಖೆಯಾದರೆ ಸಂಚು ಇದೆಯೇ ಇಲ್ಲವೇ ಎಂದು ತಿಳಿಯುತ್ತದೆ ಎಂದರು.
ಇದನ್ನೂ ಓದಿ:ಮುರುಘಾ ಶರಣರ ಜನ್ಮದಿನ ‘ಸಮಾನತೆ ದಿನ’ವಾಗಿ ಆಚರಣೆ- ಸಿಎಂ ಬೊಮ್ಮಾಯಿ ಘೋಷಣೆ
ಮಂಡ್ಯದಲ್ಲಿ, ರಾಜ್ಯದಲ್ಲಿ ವಾತಾವರಣ ಶಾಂತಿಯಿಂದಿದೆ, ಸಮುದಾಯದ ನಾಯಕರು, ರಾಜಕೀಯ ನಾಯಕರು ಇದನ್ನು ಅರ್ಥ ಮಾಡ್ಕೋಬೇಕು. ಯಾರೂ ಶಾಂತಿ ವಾತಾವರಣ ಕೆಡಿಸುವ ಹೇಳಿಕೆ ಕೊಡಬಾರದು. ರಾಜಕೀಯ ಲಾಭಕ್ಕೆ ಹೇಳಿಕೆಗಳನ್ನು ಯಾರೂ ಕೊಡಬಾರದು. ವ್ಯಾಪಾರ ನಿಷೇಧ, ಹಲಾಲ್ ನಿಂದ ಬಡವರ ಜೀವನಕ್ಕೆ ತೊಂದರೆಯಾಗಿದೆ ಎಂದು ಸುಮಲತಾ ಹೇಳಿದರು