ಮಂಡ್ಯ: ಇಡೀ ರಾಜ್ಯದಲ್ಲೇ ಅತ್ಯಂತ ಪ್ರತಿಷ್ಠಿತ ಕ್ಷೇತ್ರವೆಂದು ಬಿಂಬಿತವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಜಿಲ್ಲೆಯ ಜೆಡಿಎಸ್ ನಾಯಕರನ್ನು ಅಗ್ನಿಪರೀಕ್ಷೆಗೆ ಗುರಿಪಡಿಸಿದೆ. ಜೆಡಿಎಸ್ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ವರಿಷ್ಠರ ಶಹಬ್ಟಾಸ್‌ಗಿರಿಯೊಂದಿಗೆ ಗೆಲುವಿನ ರೂವಾರಿಗಳಾಗಬಹುದು. ಒಮ್ಮೆ ಸೋತರೆ ತಲೆದಂಡದ ಭೀತಿ ಎದುರಾಗಲಿದೆ.
ಫಲಿತಾಂಶಕ್ಕೆ ಎದುರು ನೋಡುತ್ತಿರುವ ಜನ: ಹೈವೋಲ್ಟಾಜ್ ಕ್ಷೇತ್ರವಾಗಿರುವ ಮಂಡ್ಯ ಲೋಕಸಭಾ ಕಣ ಚುನಾವಣಾ ಆರಂಭದಿಂದಲೂ ರಾಜಕೀಯ ಕಾವನ್ನು ಕಾಯ್ದುಕೊಂಡೇ ಬಂದಿದೆ. ಸಮ್ಮಿಶ್ರ ಸರ್ಕಾರದ ಉಳಿವು ಸಕ್ಕರೆ ನಾಡಿನ ಫಲಿತಾಂಶದ ಮೇಲೆ ಅವಲಂಬಿತವಾಗಿರುವಂತೆ ಬಿಂಬಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಮಂಡ್ಯ ಫಲಿತಾಂಶವನ್ನು ಎಲ್ಲರೂ ತುದಿಗಾಲಲ್ಲಿ ನಿಂತು ಕುತೂಹಲದಿಂದ ಎದುರುನೋಡುತ್ತಿದ್ದಾರೆ.
ಭವಿಷ್ಯದ ದೃಷ್ಟಿಯಿಂದ ಗೆಲುವು ಅನಿವಾರ್ಯ: ಮಂಡ್ಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಅಸ್ತಿತ್ವವನ್ನು ಕಾಯ್ದುಕೊಂಡಿರುವ ಜೆಡಿಎಸ್ ಶಾಸಕರು ಕ್ಷೇತ್ರದ ಜೊತೆಗೆ ಸ್ಥಳೀಯ ಸಂಸ್ಥೆಗಳಲ್ಲೂ ಅಧಿಪತ್ಯ ಸಾಧಿಸಿದ್ದಾರೆ. ಜೆಡಿಎಸ್ ಶಕ್ತಿಕೇಂದ್ರದೊಳಗೆ ಸೋಲನ್ನು ಅರಗಿಸಿಕೊಳ್ಳುವ ಶಕ್ತಿ ಪಕ್ಷದವರಿಗಿಲ್ಲ. ಅದಕ್ಕಾಗಿ ಜೆಡಿಎಸ್ ಶಾಸಕರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪಕ್ಷದ ಗೆಲುವು ಅನಿವಾರ್ಯವಾಗಿದೆ.
ಆತಂಕ ಸೃಷ್ಟಿಸಿದ ಸಮೀಕ್ಷಾ ವರದಿಗಳು: ಲೋಕಸಭಾ ಚುನಾವಣೆಯಲ್ಲಿ ಆಗಿರುವ ಹೆಚ್ಚುವರಿ ಮತದಾನ, ಗುಪ್ತಚರ ಇಲಾಖೆ ಸಲ್ಲಿಸಿರುವ ನಾಲ್ಕು ಸಮೀಕ್ಷಾ ವರದಿಗಳು ಜೆಡಿಎಸ್‌ನವರಲ್ಲಿ ಆತಂಕ ಸೃಷ್ಟಿಸಿದೆ. ಚುನಾವಣಾ ಫಲಿತಾಂಶ ವ್ಯತಿರಿಕ್ತ ವಾಗಿ ಬಂದಲ್ಲಿ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ, ವರಿಷ್ಠರ ಕೆಂಗಣ್ಣಿಗೆ ಗುರಿಯಾಗದಂತೆ ಪಾರಾಗುವ ಬಗೆ ಹೇಗೆ ಎಂಬ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಅದಕ್ಕಾಗಿ ಎಲ್ಲರೂ ಪಕ್ಷದ ಗೆಲುವನ್ನೇ ಧ್ಯಾನ ಮಾಡುತ್ತಿದ್ದಾರೆ.
ಚಾಣಾಕ್ಷ ನಡೆ ಪ್ರದರ್ಶಿಸಿರುವ ಕಾಂಗ್ರೆಸ್: ಕಾಂಗ್ರೆಸ್‌ನ ಪರಾಜಿತ ಶಾಸಕರ ಅಸ್ತಿತ್ವದ ಉಳಿವಿಗೆ ಸುಮಲತಾ ಗೆಲುವು ಅನಿವಾರ್ಯವಾಗಿದೆ. ವರ್ಚಸ್ಸನ್ನು ಕಳೆದುಕೊಂಡಿರುವ ಕ್ಷೇತ್ರದೊಳಗೆ ಮತ್ತೆ ತಮ್ಮ ಪ್ರಾಬಲ್ಯ ಸಾಧಿಸಲು ಪಕ್ಷೇತರ ಅಭ್ಯರ್ಥಿಯ ಗೆಲುವನ್ನೇ ಎದುರುನೋಡುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿ ಜೊತೆ ಪ್ರಚಾರದ ಅಖಾಡದಲ್ಲೆಲ್ಲೂ ಕಾಣಿಸಿಕೊಳ್ಳದೆ ಬೆಂಬಲಿಗರನ್ನಷ್ಟೇ ಮುಂದೆ ಬಿಟ್ಟು ಚುನಾವಣಾ ಚಾಣಾಕ್ಷ ನಡೆ ಪ್ರದರ್ಶಿಸಿರುವ ಕಾಂಗ್ರೆಸ್ ಮಾಜಿ ಶಾಸಕರು, ಸುಮಲತಾ ಗೆಲುವಿನೊಂದಿಗೆ ರಾಜಕೀಯ ಅಧಿಕಾರದ ಹೋರಾಟಕ್ಕೆ ಸನ್ನದ್ಧರಾಗುವ ಕನಸು ಕಾಣುತ್ತಿದ್ದಾರೆ.
ಮೇ 23ರಂದು ಉತ್ತರ ಸಿಗಲಿದೆ: ಅಧಿಕಾರ ವಂಚಿತರಾಗಿರುವ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೂ ಸಹ ಸುಮಲತಾ ಗೆಲುವನ್ನೇ ಕಾತರದಿಂದ ಎದುರುನೋಡುತ್ತಿದ್ದಾರೆ. ಸರ್ಕಾರದ ನಾಮ ನಿರ್ದೇಶನ ಸೇರಿದಂತೆ ನಿಗಮ-ಮಂಡಳಿ ಅಧಿಕಾರವನ್ನೂ ಜೆಡಿಎಸ್ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವುದರಿಂದ ಜೆಡಿಎಸ್‌ಗೆ ಶಾಕ್ ನೀಡಬೇಕಾದರೆ ಸುಮಲತಾ ಅವರನ್ನು ಕಾಂಗ್ರೆಸ್ಸಿಗರು ಪ್ರಬಲ ಅಸ್ತ್ರವಾಗಿ ಪ್ರಯೋಗಿಸಿದ್ದಾರೆ. ಅದು ಉತ್ತಮ ಪರಿಣಾಮ ಬೀರಿರುವ ಆಶಾಭಾವನೆಯಲ್ಲೂ ಕಾಂಗ್ರೆಸ್ಸಿಗರಿದ್ದಾರೆ. ಎಲ್ಲದಕ್ಕೂ ಮೇ 23ರಂದು ಉತ್ತರ ಸಿಗಲಿದೆ.
● ಮಂಡ್ಯ ಮಂಜುನಾಥ್