ಬೆಂಗಳೂರು: ಕಾಂಗ್ರೆಸ್ ಜತೆಗೂಡಿ ಸಮ್ಮಿಶ್ರ ಸರ್ಕಾರ ಮಾಡಿ ಹದಿನಾಲ್ಕು ತಿಂಗಳಿಗೇ ಪತನವಾದ ಬೆನ್ನಲ್ಲೇ ಜೆಡಿಎಸ್ ಶಾಸಕರಲ್ಲಿ ಕಮಲ ಪಕ್ಷದತ್ತ ಒಲವು ಶುರುವಾಗಿದ್ದು, ಈಗಲ್ಲದಿ ದ್ದರೂ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಮರು ಮೈತ್ರಿಗೆ ‘ಚಾಯ್ಸ’ ಇಟ್ಟುಕೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ. ಮಾಜಿ ಸಚಿವರಾದ ಸಾ.ರಾ.ಮಹೇಶ್ ಹಾಗೂ ಜಿ.ಟಿ.ದೇವೇಗೌಡರು ಬಿಜೆಪಿ ಯತ್ತ ಚಿತ್ತ ಹರಿಸಿರುವ ಶಾಸಕರ ನೇತೃತ್ವ ವಹಿಸಿದ್ದು,ಅಗತ್ಯವಾದರೆ ಬಿಜೆಪಿ ನಾಯಕರ ಜತೆ ಮಾತುಕತೆಗೂ ಸೈ ಎಂಬ ಹಂತಕ್ಕೂ ಹೋಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇದಕ್ಕೆ ಒಪ್ಪಿಗೆ ನೀಡುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಅಂತಹ ಪ್ರಯತ್ನಕ್ಕೆ ಕೈ ಹಾಕಬೇಡಿ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಶನಿವಾರ ನಡೆದ ಜೆಡಿಎಸ್ ಶಾಸಕರ ಸಭೆಯಲ್ಲೂ ಕೆಲವು ಶಾಸಕರು ಇಂತದ್ದೊಂದು ಪ್ರಸ್ತಾಪವನ್ನು ಎಚ್.ಡಿ.ಕುಮಾರಸ್ವಾಮಿ ಅವರ ಮುಂದಿಟ್ಟಿದ್ದು, ನಾವು ಕಾಂಗ್ರೆಸ್ ಜತೆ ಹೋಗಿ ತಪ್ಪು ಮಾಡಿದೆವು. ಬಿಜೆಪಿ ಜತೆ ಹೋಗಿದ್ದರೆ ಐದು ವರ್ಷ ಸರ್ಕಾರ ಮಾಡಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ. ಮೈತ್ರಿ ಮಾಡಿಕೊಂಡು ಉಪ ಮುಖ್ಯಮಂತ್ರಿ ಪಡೆಯಬಹುದು ಬಾಹ್ಯ ಬೆಂಬಲ ನೀಡಬಹುದು. ಇಲ್ಲದಿದ್ದರೂ ತಕ್ಷಣಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ಆಕ್ರಮಣಕಾರಿ ಹೋರಾಟ ಮಾಡುವುದು ಬೇಡ ಎಂದು ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ. ಅತೃಪ್ತರು ಮುಂಬೈಗೆ ಹೋದ ನಂತರವೂ ಸರ್ಕಾರ ಉಳಿಸಿಕೊಳ್ಳುವ ಅವಕಾಶವಿತ್ತು. ಆದರೆ, ಕಾಂಗ್ರೆಸ್ ನಾಯಕರೇ ಆಸಕ್ತಿ ತೋರಲಿಲ್ಲ. ಡಿ.ಕೆ.ಶಿವಕುಮಾರ್ ಹೊರತುಪಡಿಸಿದರೆ ಇತರ ನಾಯಕರು ಪ್ರಾರಂಭದಲ್ಲಿ ಪ್ರಯತ್ನ ಮಾಡಲಿಲ್ಲ. ಹೈಕಮಾಂಡ್ ಮಧ್ಯಪ್ರವೇಶದ ನಂತರ ಎಲ್ಲ ನಾಯಕರು ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದರಾದರೂ ಅಷ್ಟರಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಹೀಗಾಗಿ, ಕಾಂಗ್ರೆಸ್ ಜತೆ ಮೈತ್ರಿ ಕಡಿದುಕೊಂಡು, ಬಿಜೆಪಿ ಜತೆ ಹೋಗುವ ಬಗ್ಗೆ ಯೋಚಿಸೋಣವೆಂದು ಹೇಳಿದರು ಎಂದು ತಿಳಿದು ಬಂದಿದೆ.
ಆದರೆ, ಈಗ ಜೆಡಿಎಸ್, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದು ಉಪ ಚುನಾವಣೆಯಲ್ಲೂ ಆ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹಿಂದೊಮ್ಮೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ವಚನಭ್ರಷ್ಟತೆ ಆರೋಪ ಎದುರಿಸುವಂತಾಯಿತು. ಹೀಗಿರುವಾಗ ಮತ್ತೂಮ್ಮೆ ಮೈತ್ರಿ ಎಂದರೆ ಸರಿ ಹೋಗುವುದಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಂತೂ ಇದಕ್ಕೆ ಒಪ್ಪುವುದಿಲ್ಲ. ಮಧ್ಯಂತರ ಚುನಾವಣೆಗೆ ಸಜ್ಜಾಗಿ ಎಂದು ಈಗಾಗಲೇ ಸೂಚನೆ ಸಹ ನೀಡಿ ಪಕ್ಷ ಸಂಘಟನೆಗೆ ಇಳಿದಿದ್ದಾರೆ. ಅಂತಹ ಯಾವುದೇ ಪ್ರಸ್ತಾಪವೇ ಬೇಡ ಎಂದು ಹೇಳಿ ಎಚ್.ಡಿ.ಕುಮಾರಸ್ವಾಮಿಯವರು ಶಾಸಕರನ್ನು ಸುಮ್ಮನಾಗಿಸಿದರು ಎಂದು ಹೇಳಲಾಗಿದೆ.
ಆದರೆ, ಈಗಿನ ಬೆಳವಣಿಗೆಯಲ್ಲಿ ಜೆಡಿಎಸ್ ಜತೆಗಿನ ಮರು ಸಂಬಂಧ ಕುರಿತು ಬಿ.ಎಸ್.ಯಡಿಯೂರಪ್ಪ ಅವರ ನಿಲುವು ಮುಖ್ಯವಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸುತ್ತವೆ.
Advertisement
ಸದ್ಯಕ್ಕೆ ಬಿಜೆಪಿ ಸರ್ಕಾರ ರಚನೆಯಾದರೂ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸದೆ ಯಡಿಯೂರಪ್ಪ ಅವರ ಸರ್ಕಾರದ ಬಗ್ಗೆ ‘ಸಾಫ್ಟ್ ಕಾರ್ನರ್’ ಅನುಸರಿಸುವುದು. ಮುಂದೆ ಉಪ ಚುನಾವಣೆ ನಡೆದ ನಂತರದ ವಿದ್ಯಮಾನಗಳನ್ನು ನೋಡಿಕೊಂಡು ಬಿಜೆಪಿಗೆ ಬಾಹ್ಯ ಬೆಂಬಲ ನೀಡಿ, ಎಚ್.ಡಿ.ಕುಮಾರಸ್ವಾಮಿಯವರನ್ನು ಕೇಂದ್ರ ಸಚಿವರನ್ನಾಗಿ ಮಾಡುವಂತೆ ಬೇಡಿಕೆ ಇಡುವ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Related Articles
ಬಿಜೆಪಿ ಜತೆ ಮೈತ್ರಿ ಹೊಸದೇನಲ್ಲ
2018ರ ಚುನಾವಣೆ ಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದಾಗಲೇ ಖುದ್ದು ಅಮಿತ್ ಶಾ, ಪ್ರಧಾನಿ ಮೋದಿ ಅವರೂ ಕುಮಾರಸ್ವಾಮಿ ಅವರ ಸಂಪರ್ಕ ಮಾಡಿ ಮೈತ್ರಿ ಮಾಡಿಕೊಳ್ಳೋಣ ಎಂಬ ಪ್ರಸ್ತಾಪ ಇರಿಸಿದ್ದರು. ಆಗ ದೇವೇಗೌಡರು ಕಾಂಗ್ರೆಸ್ ಜತೆ ಮೈತ್ರಿಗೆ ಒಲವು ವ್ಯಕ್ತಪಡಿಸಿದ್ದರಿಂದ ಅವರ ಇಚ್ಚೆಗೆ ವಿರುದ್ಧವಾಗಿ ಹೋಗಲು ಕುಮಾರಸ್ವಾಮಿ ಒಪ್ಪಿರಲಿಲ್ಲ. ಆ ನಂತರ ಲೋಕಸಭಾ ಚುನಾವಣೆಗೆ ಮುಂಚೆಯೂ ಮತ್ತೂಮ್ಮೆ ಅಂತಹ ಪ್ರಸ್ತಾಪ ಬಂದು 28 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಬಗ್ಗೆಯೂ ‘ಆಫರ್’ ನೀಡಲಾಗಿತ್ತು. ಆಗಲೂ ಕುಮಾರಸ್ವಾಮಿ ಒಪ್ಪಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಬಾಹ್ಯ ಬೆಂಬಲದ ಮಾತೇಕೆ?
ಜೆಡಿಎಸ್‌ನ ಕೆಲವು ಶಾಸಕರಲ್ಲಿ ದಿಢೀರ್ ಬಿಜೆಪಿ ಬಗ್ಗೆ ಹುಟ್ಟಿಕೊಂಡಿರುವ ಒಲವು ಹಾಗೂ ಬಾಹ್ಯ ಬೆಂಬಲದ ಮಾತುಗಳ ಬಗ್ಗೆ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸೋಮವಾರದ ವಿಶ್ವಾಸಮತ ಸಂದರ್ಭದಲ್ಲಿ ಜೆಡಿಎಸ್ ಯಾವ ನಿಲುವು ತಾಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈಗಲೂ ಕಾಂಗ್ರೆಸ್ ಜತೆ ನಮಗೆ ವ್ಯತ್ಯಾಸಗಳೇನಿಲ್ಲ ಎಂದು ಹೇಳಿದ್ದಾರೆ. ಮೈತ್ರಿ ಮುಂದುವರಿಕೆ ಕುರಿತು ಕಾಂಗ್ರೆಸ್ ನಾಯಕರು ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ, ಮುಂದಿನ ಬೆಳವಣಿಗೆಗಳು ಏನಾಗುವುದೋ ಕಾದು ನೋಡಬೇಕಾಗಿದೆ.
-ಎಸ್.ಲಕ್ಷ್ಮಿನಾರಾಯಣ
Advertisement