ಮಂಡ್ಯ: ಲೋಕಸಭಾ ಚುನಾವಣೆ ಸಮಯದಲ್ಲಿ ಜೆಡಿಎಸ್‌ನ ಯಾವ್ಯಾವ ನಾಯಕರು ಆ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣೆ ಮಾಡಿದರು, ಮಾಡಲಿಲ್ಲ ಎನ್ನುವುದಕ್ಕೆ ನಮ್ಮ ಬಳಿ ಬಹಳಷ್ಟು ಸಾಕ್ಷಿಗಳಿವೆ. ಸಾಕ್ಷಿಗಳು ಬೇಕಿದ್ದರೆ ಕೊಡುವುದಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಜಿಲ್ಲಾ ರಾಜಕಾರಣಕ್ಕೆ ಹೊಸ ತಿರುವು ನೀಡುವಂತಹ ಹೇಳಿಕೆ ನೀಡಿದ್ದಾರೆ.
ಮಳವಳ್ಳಿ ತಾಲೂಕಿನ ಪೂರಿಗಾಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ವೇಳೆ ಜೆಡಿಎಸ್ ಪಕ್ಷದ ಯಾವ ನಾಯಕರು ಯಾರ ಪರವಾಗಿದ್ದರು ಎನ್ನುವುದು ಈಗಾಗಲೇ ಚರ್ಚೆಗೆ ಬಂದಿದೆ. ಕುಮಾರಸ್ವಾಮಿ ಅವರಿಗೆ ಯಾರೆಲ್ಲಾ ಮೋಸ ಮಾಡಿದ್ದಾರೆ. ದೇವೇಗೌಡರ ಹೆಸರೇಳುತ್ತಿದ್ದವರು ಯಾರ್ಯಾರು ಎಲ್ಲೆಲ್ಲಿ, ಹೇಗೆಲ್ಲಾ ದ್ರೋಹ ಮಾಡಿದರು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.
ತಟಸ್ಥರಾಗಿದ್ದೆವು: ಲೋಕ ಚುನಾವಣಾ ಸಮ ಯದಲ್ಲಿ ಕಾಂಗ್ರೆಸ್‌ನ ಪರಾಜಿತ ಶಾಸಕರೆಲ್ಲರೂ ತಟಸ್ಥವಾಗಿದ್ದೆವು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಭಸ ದಿಂದಲೇ ಚುನಾವಣೆ ಮಾಡಿ ಸೋತಿದ್ದೇವೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾವೆಲ್ಲರೂ 2.75 ಲಕ್ಷ ಮತಗಳ ಅಂತರದಲ್ಲಿ ಪರಾಭವ ಗೊಂಡಿದ್ದೇವೆ. ಜೆಡಿಎಸ್ ಅಭ್ಯರ್ಥಿಗಳೆಲ್ಲರೂ ಕುಮಾರಸ್ವಾಮಿ ಹಾಗೂ ದೇವೇಗೌಡರ ಹೆಸರಿನಲ್ಲಿ ಗೆದ್ದಿದ್ದಾರೆ. ಅಲ್ಲದೆ, ಲೋಕಸಭೆ ಚುನಾವಣೆ ವೇಳೆ ನಾವು ಯಾವುದೇ ವೇದಿಕೆ ಹತ್ತಲಿಲ್ಲ, ಪ್ರಚಾರ ಮಾಡಲಿಲ್ಲ, ಯಾರ ಪರವಾಗಿ ಭಾಷಣ ಮಾಡಲೂ ಇಲ್ಲ, ಯಾವುದೇ ಮಾಧ್ಯಮ ಗಳೆದುರು ಬಂದು ಪ್ರತಿಕ್ರಿಯೆ ಕೊಟ್ಟಿಲ್ಲ. ನಾವು ತಟಸ್ಥರಾಗಿ ಉಳಿದಿದ್ದೆವು ಎನ್ನುವುದಕ್ಕೆ ಇದಕ್ಕಿಂತ ಇನ್ನೇನು ತೋರಿಸಬೇಕು ಎಂದು ಪ್ರಶ್ನಿಸಿದರು.
ಜೆಡಿಎಸ್‌ಗೆ ಅಧಿಕಾರ: ಗೊಂದಲದಲ್ಲಿ ಸರ್ಕಾರ ಮುನ್ನಡೆಸುವ ಬದಲು ರಾಜ್ಯ ಸಮ್ಮಿಶ್ರ ಸರ್ಕಾರ ವಿಸರ್ಜನೆ ಮಾಡುವುದು ಸೂಕ್ತ ಎಂಬ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪಿ.ಎಂ.ನರೇಂದ್ರಸ್ವಾಮಿ, ರಾಜ್ಯದಲ್ಲಿ ಜೆಡಿಎಸ್ ಆಡಳಿತ ನಡೆಸಲು ಅವಕಾಶ ಕಲ್ಪಿಸಿರುವುದೇ ಕಾಂಗ್ರೆಸ್ ಪಕ್ಷ. 37 ಸದಸ್ಯಬಲ ಹೊಂದಿದ್ದ ಜೆಡಿಎಸ್‌ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ತೀರ್ಮಾನ ಮಾಡಿದ್ದೂ ಕಾಂಗ್ರೆಸ್ಸೇ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕೆಂಬ ಏಕೈಕ ಉದ್ದೇಶದಿಂದ ರಾಹುಲ್ ಗಾಂಧಿ ಅವರು ಉದಾರತನದಲ್ಲಿ ಜೆಡಿಎಸ್ ಸಣ್ಣಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರ ನಮಗೆ ಕೊಡಿ ಎಂದು ಕೇಳದೆ ಅವರಿಗೇ ಬಿಟ್ಟುಕೊಟ್ಟರು. ಹೀಗೆ ಅಧಿಕಾರ ಬಿಟ್ಟುಕೊಟ್ಟ ಸಂದರ್ಭದಲ್ಲಿ ನಾಯಕತ್ವದ ಜವಾಬ್ದಾರಿಯಲ್ಲಿ ಇಡೀ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಜೊತೆಯಲ್ಲಿಟ್ಟುಕೊಂಡು ಅಭಿವೃದ್ಧಿ ಜೊತೆಯಲ್ಲಿ ಈ ರಾಜ್ಯದ ಜವಾಬ್ದಾರಿಯನ್ನು ನಿರ್ವಹಿಸುವುದು ಮುಖ್ಯಮಂತ್ರಿಯಾದವರ ಕರ್ತವ್ಯ ಎಂದರು.
ಸಹಕರಿಸುತ್ತಿಲ್ಲ ಎನ್ನುವುದು ಸರಿಯಲ್ಲ: ಯಾರೇ ಆಗಲಿ ಮುಖ್ಯಮಂತ್ರಿಯಾಗುವುದು ಸಾಧನೆಯ ವಿಚಾರ. ಕುಮಾರಸ್ವಾಮಿ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದ ಸಂದ ರ್ಭದಲ್ಲಿ ಕಾಂಗ್ರೆಸ್ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸಿದೆ. ಇಂದು ಕಾಂಗ್ರೆಸ್ ಹೈಕಮಾಂಡ್‌ನ್ನು ವಿರೋಧಿಸುವ ಶಕ್ತಿಯಾಗಲೀ, ತೀರ್ಮಾನವನ್ನು ಪ್ರಶ್ನೆ ಮಾಡುವ ಅಧಿಕಾರ ನಮಗ್ಯಾರಿಗೂ ಇಲ್ಲ. ರಾಹುಲ್ ಗಾಂಧಿ ಗೆರೆ ಹಾಕಿದರೆ ಅದನ್ನು ಯಾರೂ ತಪ್ಪಲೂ ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಅಧಿಕಾರ ನಡೆಸುವವರು ನಮಗೆ ಸಹಕಾರ ನೀಡುತ್ತಿಲ್ಲ ವೆಂದು ಮಾಧ್ಯಮಗಳೆದುರು ಹೇಳಿಕೆ ನೀಡುತ್ತಿ ರುವುದು ಸರಿಯಲ್ಲ ಎಂದು ಹೇಳಿದರು.
ನಾನು ಖರ್ಗೆ ವಿರೋಧಿಯಲ್ಲ: ಸಿದ್ದರಾಮ ಯ್ಯನವರ ಬೆಂಬಲಿಗ. ಹಾಗೇ ಮಲ್ಲಿಕಾರ್ಜುನ ಖರ್ಗೆ ಅವರ ವಿರೋಧಿಯಲ್ಲ. ನಾನೂ ಅದೇ ಸಮುದಾಯದಿಂದ ಬಂದವನು. ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದರೆ ನಾನೂ ಸಂತೋಷ ಪಡುತ್ತೇನೆ. ಆದರೆ, ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬಾರದು ಎಂದು ಯಾರೂ ಹೇಳಲಿಕ್ಕೆ ಸಾಧ್ಯವಿಲ್ಲ ಎಂದರು.
ಸ್ವಾಭಿಮಾನಕ್ಕೆ ಧಕ್ಕೆಯಾಗುವ ಕೆಲಸ ಮಾಡಿಲ್ಲ: ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಕೆಲಸ ಮಾಡಿದ್ದಾರೆ ಎಂಬ ಶಾಸಕ ಡಾ.ಕೆ.ಅನ್ನದಾನಿ ಹೇಳಿಕೆ ಬಗ್ಗೆ ಮಾತನಾಡಿ, ಯೋಗ್ಯರು ಮಾತನಾಡಿದಾಗ ಮಾತ್ರ ಉತ್ತರ ಕೊಡುವೆ. ನನ್ನ ಪಕ್ಷ ಹಾಗೂ ನನ್ನ ತೀರ್ಮಾನದ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ. ನಾನೊಬ್ಬ ಸ್ವಾಭಿಮಾನಿ. ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಿಲ್ಲ ಎಂದು ನುಡಿದರು.
ನಾನೊಬ್ಬ ಜವಾಬ್ದಾರಿಯುತ ವ್ಯಕ್ತಿ: ನನ್ನ ವಿರುದ್ಧ ಆರೋಪ ಮಾಡಬೇಕಾದರೆ ದಾಖಲೆಗಳು ಬೇಕು. ಹೇಳಿಕೆ ಕೊಡಬೇಕಾದರೂ ದಾಖಲೆಗಳು ಬೇಕು. ಅವರು ಯಾವ ದೃಷ್ಟಿಯಲ್ಲಿ ಯಾರನ್ನು ಉದ್ದೇಶಿಸಿ ಹೇಳಿದ್ದಾರೋ ಗೊತ್ತಿಲ್ಲ. ನಾನಂತೂ ನನ್ನ ಹೇಳಿಕೆಯನ್ನು ನನ್ನ ನಾಯಕರಿಗೂ ಸ್ಪಷ್ಟಪಡಿಸಿದ್ದೇನೆ. ವೈಯಕ್ತಿಕ ಅಭಿಪ್ರಾಯಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಅದು ಅವರ ಭಾವನೆಗಳ್ಳೋ, ಸಂದರ್ಭಗಳ್ಳೋ, ಏತಕ್ಕೆ ಮಾತನಾಡಿದ್ದಾರೋ ಗೊತ್ತಿಲ್ಲ. ನಾನೊಬ್ಬ ಜವಾಬ್ದಾರಿಯುತ ವ್ಯಕ್ತಿ. ನನ್ನ ತನ ನಾನು ಉಳಿಸಿಕೊಂಡಿದ್ದೇನೆ. ಬೇರೆಯವರಂತೆ ಮಾತನಾಡುವುದೇ ಒಂದು ಶೋಕಿ. ಹೇಳಿಕೆ ಕೊಡುವುದೇ ಒಂದು ಮೋಜು ಎಂದು ತಿಳಿದಿಲ್ಲ ಎಂದಷ್ಟೇ ಹೇಳಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಬಗ್ಗೆ ಕೇಳಿದ ಪ್ರಶ್ನೆಗೆ ಮಂಡ್ಯ ಜಿಲ್ಲೆಯ ಜನರು ನೀಡುವ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದಷ್ಟೇ ಮಾಹಿತಿ ನೀಡಿದರು.