ಪ್ರತಿದಿನ ನಾವು ಕಾಲ್, ಮೆಸೇಜ್ ಮಾಡಿಕೊಳ್ಳುತ್ತಿರಬಹುದು. ಆದರೂ ಮನಸ್ಸಿಗೆಕೋ ತೃಪ್ತಿಯೇ ಸಿಗದು. ಫೋನ್‌ನಲ್ಲಿ ಎಷ್ಟೇ ಮಾತಾಡಿದರೂ, ಮೆಸೇಜ್ ಮಾಡಿದರೂ ನೀ ಎದುರಿಗೆ ಸಿಕ್ಕ ಹಾಗಲ್ಲ ನೋಡು. ನನ್ನ ಬದುಕು, ನನ್ನ ಉಸಿರು, ನನ್ನ ಭವಿಷ್ಯ, ನನ್ನ ಸಂತೋಷವೇ ನೀನಾಗಿರುವಾಗ ನಿನ್ನ ನೆನಪುಗಳಲ್ಲಿಯೇ ದಿನ ಕಳೆಯುವುದು ಹೇಗೆ?
ಮನಸ್ಸೇಕೋ ನಿನ್ನನ್ನು ನೋಡಲೇಬೇಕೆಂದು ಹಠ ಹಿಡಿದಿದೆ. ಸಮಾಧಾನ ಹೇಳಿದಷ್ಟೂ ಮುನಿಸಿಕೊಳ್ಳುವ ಮನಸ್ಸು ನಿನ್ನಾಗಮನವನ್ನೇ ಎದುರು ನೋಡುತ್ತಿದೆ. ಮನದಂಗಳದಲ್ಲಿ ಹಚ್ಚಹಸಿರಾಗಿರುವ ನೆನಪುಗಳ ಮಧ್ಯೆ ಅದೆಷ್ಟು ದಿನ ಬದುಕಲಿಕ್ಕಾಗುತ್ತದೆ ಹೇಳು? ಆಗಾಗ ನಾನು ನಿನ್ನನ್ನು ನೋಡುತ್ತಿರಬೇಕು. ನಿನ್ನೊಡನೆ ಮುಗಿಯದಷ್ಟು ಮಾತಾಡುತ್ತಿರಬೇಕು. ಆ ಬಣ್ಣದ ಛತ್ರಿಯ ಅಡಿಯಲ್ಲಿ ನಿನ್ನೊಡನೆ ನಿಂತು ಮುಂಗಾರಿನ ಸ್ವಾದ ಸವಿಯಬೇಕು. ನಿನ್ನ ಪಕ್ಕಕ್ಕೆ ಬೆಚ್ಚನೆ ಕುಳಿತು ಬರುವ ಚಳಿಗಾಲವನ್ನು ಖುಷಿಯಿಂದ ಸ್ವಾಗತಿಸಬೇಕು. ತಂಪು ತಂಗಾಳಿಗೆ ನಾಚುವ ಮುಂಗುರುಳು ಮೆಲ್ಲನೇ ನಿನ್ನ ಹಣೆಗೆ ಮುತ್ತಿಡಬೇಕು. ನಿನ್ನ ತೋಳಿನಲಿ ನಾನು ಬಂಧಿಯಾಗಿರಬೇಕು. ನೀ ಎದುರಿಗೆ ಬಂದಾಗೆಲ್ಲಾ ಸಣ್ಣ ಕೋಪ, ಸಣ್ಣ ಹಠ ಮಾಡಿ ನಿನ್ನನ್ನು ಕಾಡುತ್ತಿರಬೇಕು. ಮನದಲ್ಲಿ ಮೂಡುತ್ತಿರುವ ಈ ಭಾವನೆಗಳಿಗೆಲ್ಲಾ
ಸಾರಥಿಯಾಗಬೇಕಾದವನು ನೀನೇ!
ಆದರೆ ನೀನು? ನಮ್ಮೂರು ಹಾಗಿರಲಿ, ನಮ್ಮ ರಾಜ್ಯದ ಗಡಿಯನ್ನೇ ದಾಟಿ ಆಚೆ ಹೋಗಿರುವೆಯಲ್ಲಾ. ನಿನ್ನನ್ನು ನೋಡಲು ಈ ಮನಸ್ಸು ಅದೆಷ್ಟು ದಿನದಿಂದ ಹಂಬಲಿಸುತ್ತಿದೆ ಗೊತ್ತಾ? ನಿನ್ನೊಂದಿಗೆ ಕಳೆಯಲೇಬೇಕಾದ ಮಧುರ ಕ್ಷಣಗಳು, ಹೇಳಲೇಬೇಕಾದ ಮಾತುಗಳು, ಮಾಡಲೇಬೇಕಾದ ತುಂಟಾಟಗಳು ಮನದಲ್ಲೀಗ ಸದ್ದು ಮಾಡಲು ಶುರು ಮಾಡಿವೆ. ನಿನ್ನನ್ನೊಮ್ಮೆ ಸ್ಪರ್ಶಿಸಬೇಕೆಂದು ಈ ಹೃದಯ ಕಾತರದಿಂದ ಕಾಯುತ್ತಿದೆ ಕಣೋ.
ಪ್ರತಿದಿನ ನಾವು ಕಾಲ್, ಮೆಸೇಜ್ ಮಾಡಿಕೊಳ್ಳುತ್ತಿರಬಹುದು. ಆದರೂ ಮನಸ್ಸಿಗೆಕೋ ತೃಪ್ತಿಯೇ ಸಿಗದು. ಫೋನ್‌ನಲ್ಲಿ ಎಷ್ಟೇ ಮಾತಾಡಿದರೂ, ಮೆಸೇಜ್ ಮಾಡಿದರೂ ನೀ ಎದುರಿಗೆ ಸಿಕ್ಕ ಹಾಗಲ್ಲ ನೋಡು. ನನ್ನ ಬದುಕು, ನನ್ನ ಉಸಿರು, ನನ್ನ ಭವಿಷ್ಯ, ನನ್ನ ಸಂತೋಷವೇ ನೀನಾಗಿರುವಾಗ ನಿನ್ನ ನೆನಪುಗಳಲ್ಲಿಯೇ ದಿನ ಕಳೆಯುವುದು ಹೇಗೆ? ಕಣ್ಣಂಚಿಂದ ಕೆನ್ನೆಯ ಮೇಲೆ ಜಾರುವ ಕಣ್ಣೀರನ್ನು ಕೇಳು, ನನ್ನ ಕಷ್ಟವೇನೆಂದು. ಮುಸ್ಸಂಜೆಯಲಿ ಮೌನವಾಗಿ ಕುಳಿತರೆ, ಬೀಸುವ ತಂಗಾಳಿಯೂ ನಿನ್ನದೇ ಲೋಕಕ್ಕೆ ನನ್ನನ್ನು ಕರೆಯುತ್ತದೆ. ನಿನ್ನ ನೆನಪಿಂದಲೇ ದಿನ ಆರಂಭಿಸುತ್ತವೆ. ಸಿಹಿ ನಿದ್ದೆಯಲ್ಲೂ ಸೊಗಸಾದ ಒಂದು ಕನಸು ನನ್ನೊಳಗೆ ಪ್ರವೇಶಿಸುತ್ತದೆ. ನಿನ್ನೊಂದಿಗೆ ಕಳೆಯಬೇಕಾಗಿರುವ ಸುಂದರ ಕ್ಷಣಗಳನ್ನು ಕಣ್ಮುಂದೆ ತರುತ್ತದೆ.
ಗಡಿದಾಟಿರುವ ಈ ಪ್ರೀತಿ, ನೆನಪುಗಳ ಕುರಿತು ಬರೆಯಲು ಹೋದರೆ ಸುಂದರ ಕಾವ್ಯ ಸೃಷ್ಟಿಯಾಗಿ ನನ್ನೊಳಗೊಬ್ಬ ಕವಿ ಉದಯಿಸಬಹುದೇನೋ! ಅದೇನೇ ಇರಲಿ, ಆದರೆ ನನಗೀಗ ನೀನು ಬೇಕೇಬೇಕು. ನಿನ್ನನ್ನು ನೋಡಲೇಬೇಕು ಅಷ್ಟೇ! ಈ ಶನಿವಾರದ ಸೂರ್ಯ ಮರೆಯಾಗುವ ಮುನ್ನ ನಿನ್ನ ಕೈ ನನ್ನ ಹೆಗಲಮೇಲಿರಲಿ..
ಇಂತಿ ,
ನಿನ್ನ ಮುದ್ದು ಗೊಂಬೆ.
ಜಯಶ್ರೀ ಎಸ್ ಕಾನಸೂರ್