ಹೊಸದಿಲ್ಲಿ : ಪದ್ಮಾವತ್ ವಿರುದ್ಧದ ಹಿಂಸೆಗೆ ನಮ್ಮನ್ನು ದೂರಬೇಡಿ; ನಾವು ಪದ್ಮಾವತ್ ಪ್ರದರ್ಶಿಸುವ ಚಿತ್ರ ಮಂದಿರಗಳ ಎದುರು ಜನತಾ ಕರ್ಫ್ಯೂ ವಿಧಿಸುತ್ತೇವೆ ಎಂದು ಕರ್ಣಿ ಸೇನೆಯ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕಲ್ವಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನಿಂದ ಎರಡು ದಿನಗಳ ಹಿಂದಷ್ಟೇ ಕ್ಲೀನ್ ಚಿಟ್ ಪಡೆದಿರುವ ಪದ್ಮಾವತ್ ಚಿತ್ರ ಇದೇ ಜನವರಿ 25ರ ಗುರುವಾರ ದೇಶಾದ್ಯಂತ ಬಿಡುಗಡೆಗೊಳ್ಳಲಿದೆ.
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಿತ ಐತಿಹಾಸಿಕ ಕಥಾ ಚಿತ್ರ ಪದ್ಮಾವತ್ (ಈ ಹಿಂದಿನ ಹೆಸರು ಪದ್ಮಾವತಿ) ಚಿತ್ರದ ವಿರುದ್ಧದ ದೇಶಾದ್ಯಂತದ ಹಿಂಸಾತ್ಮಕ ಪ್ರತಿಭಟನೆಗೆ ನಮ್ಮ ಸಂಘಟನೆಯನ್ನು ಯಾರೂ ದೂರಬಾರದು; ರಾಣಿ ಪದ್ಮಿನಿಯ ಘನತೆ ಗೌರವಗಳನ್ನು ರಕ್ಷಿಸುವುದು ರಾಜಪೂತರ ಕರ್ತವ್ಯವಾಗಿರುವುದರಿಂದ ಇತಿಹಾಸ ತಿರುಚಲಾದ ಪದ್ಮಾವತ್
ಚಿತ್ರವನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಲೋಕೇಂದ್ರ ಸಿಂಗ್ ಕಲ್ವಿ ಹೇಳಿದರು.
ಪದ್ಮಾವತ್ ಚಿತ್ರ ಕಥೆಯನ್ನು 16ನೇ ಶತಮಾನದ ಸೂಫಿ ಸಂತರೊಬ್ಬರ ಮಹಾ ಕಾವ್ಯವನ್ನು ಆಧರಿಸಿ ಸಿದ್ಧಪಡಿಸಲಾಗಿದೆ ಎಂದು ಚಿತ್ರ ನಿರ್ಮಾಪಕರು ನೀಡಿರುವ ಹೇಳಿಕೆ ಕರ್ಣಿ ಸೇನೆಗೆ ಸಮಾಧಾನ ತಂದಿಲ್ಲ ಎನ್ನುವುದು ಗಮನಾರ್ಹವಾಗಿದೆ.
“ನಾವು ಹಿಂಸೆಯ ಪರವಾಗಿಲ್ಲ; ಇತಿಹಾಸ ತಿರುಚಿರುವ ಪದ್ಮಾವತ್ ಚಿತ್ರವನ್ನು ನಾವು ನಮ್ಮದೇ ಆದ ರೀತಿಯಲ್ಲಿ ವಿರೋಧಿಸುತ್ತಿದ್ದೇವೆ. ಚಿತ್ರವನ್ನು ನಿಷೇಧಿಸಬೇಕೆಂಬ ನಮ್ಮ ಬೇಡಿಕೆ ಈಡೇರುವ ವರೆಗೂ ನಮ್ಮ ಪ್ರತಿಭಟನೆ ನಿಲುವುದಿಲ್ಲ; ನಾವು ಜನತಾ ಕರ್ಫ್ಯೂ ಹೇರುತ್ತೇವೆ’ ಎಂದು ಕಲ್ವಿ ಹೇಳಿದರು.