ನವದೆಹಲಿ: ಪ್ರಕರಣಗಳ ವಿಚಾರಣೆಯ ನೇರ ಪ್ರಸಾರಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ತನ್ನದೇ ಆಗಿರುವ ವ್ಯವಸ್ಥೆಯನ್ನು ಹೊಂದಲಿದೆ. ಸದ್ಯ ಯೂಟ್ಯೂಬ್‌ನಲ್ಲಿ ಪ್ರಸಾರವಾಗಲಿದ್ದು, ಅದೇನಿದ್ದರೂ ತಾತ್ಕಾಲಿಕ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಹೇಳಿದ್ದಾರೆ. ಮಂಗಳವಾರದಿಂದಲೇ ಕಲಾಪಗಳ ನೇರ ಪ್ರಸಾರ ಶುರುವಾಗಲಿದೆ.
ಬಿಜೆಪಿ ಮಾಜಿ ನಾಯಕ ಕೆ.ಎನ್.ಗೋವಿಂದಾಚಾರ್ಯ ಅವರ ಪರ ನ್ಯಾಯವಾದಿ ವಿರಾಗ್ ಗುಪ್ತಾ ಸಂವಿಧಾನ ಪೀಠಕ್ಕೆ ಸಂಬಂಧಿಸಿದ ಪ್ರಕರಣಗಳ ನೇರ ಪ್ರಸಾರದ ವ್ಯವಸ್ಥೆಯ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಬೇಕು ಎಂದು ಅರಿಕೆ ಮಾಡಿದ ವೇಳೆ ನ್ಯಾಯಪೀಠ ಈ ವಿಚಾರ ತಿಳಿಸಿದೆ.
ಖಾಸಗಿ ವ್ಯಾಪ್ತಿಯಲ್ಲಿ ಇರುವ ಯುಟ್ಯೂಬ್‌ಗ ಸುಪ್ರೀಂಕೋರ್ಟ್ ಹೊಂದಿರುವ ಕೃತಿಸ್ವಾಮಿತ್ವವನ್ನು ಒಪ್ಪಿಸಿಕೊಳ್ಳುವಂಥ ಪರಿಸ್ಥಿತಿ ಬರಬಾರದು ಎಂದು ನ್ಯಾಯವಾದಿ ವಿರಾಗ್ ಗುಪ್ತಾ ಪ್ರತಿಪಾದಿಸಿದರು.
ಅದಕ್ಕೆ ಉತ್ತರಿಸಿದ ಸಿಜೆಐ ಲಲಿತ್ ನೇತೃತ್ವದ ನ್ಯಾಯಪೀಠ “ಯೂಟ್ಯೂಬ್ ಮೂಲಕ ಪ್ರಸಾರದ ವ್ಯವಸ್ಥೆ ಕೇವಲ ತಾತ್ಕಾಲಿಕ.
ಶೀಘ್ರದಲ್ಲಿಯೇ ನೇರ ಪ್ರಸಾರಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ತನ್ನದೇ ಆದ ವ್ಯವಸ್ಥೆ ಹೊಂದಲಿದೆ. ಕೃತಿಸ್ವಾಮಿತ್ವ ವಿಚಾರದ ಬಗ್ಗೆ ಗಮನ ಹರಿಸಲಿದ್ದೇವೆ’ ಎಂದಿದೆ.