ಚಂಢೀಗಢ: ಕರ್ತಾಪುರದಲ್ಲಿರುವ ಐತಿಹಾಸಿಕ ಗುರುದ್ವಾರ ಸಾಹೀಬ್ ಗೆ ಭೇಟಿ ನೀಡಲು ಪಾಕಿಸ್ಥಾನಕ್ಕೆ ಹೋಗಲು ಸಿದ್ಧವಾಗಿರುವ ಕಾಂಗ್ರೆಸ್ ನಾಯಕ ಮತ್ತು ಮಾಜೀ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಇದೀಗ ಕೇಂದ್ರ ಸರಕಾರದ ವಿರುದ್ಧ ಗರಂ ಆಗಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಪಾಕಿಸ್ಥಾನದಲ್ಲಿರುವ ಕರ್ತಾಪುರಕ್ಕೆ ತೆರಳಲು ಅನುಮತಿ ಕೋರಿ ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಸಿಧು ಬರೆದಿರುವ ಎರಡೆರಡು ಪತ್ರಗಳಿಗೆ ಇದುವರೆಗೆ ಅಲ್ಲಿಂದ ಪ್ರತಿಕ್ರಿಯೆ ಲಭಿಸದೇ ಇರುವುದು ಸಿಧು ಅವರ ಸಿಟ್ಟಿಗೆ ಕಾರಣವಾಗಿದೆ. ಈ ಕುರಿತಾಗಿ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಮತ್ತೊಂದು ಪತ್ರ ಬರೆದಿರುವ ಸಿಧು ಅವರು ಈ ವಿಚಾರದಲ್ಲಿ ಸರಕಾರ ತನ್ನ ನಿರ್ಧಾರವನ್ನು ಖಚಿತವಾಗಿ ತಿಳಿಸುವಂತೆ ಆಗ್ರಹಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಧು ಅವರಿಗೆ ಪಾಕಿಸ್ಥಾನ ಸರಕಾರ ಗುರುವಾರದಂದು ವೀಸಾ ಮಂಜೂರು ಮಾಡಿತ್ತು. ಕರ್ತಾಪುರ ಕಾರಿಡಾರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿಧು ಅವರಿಗೆ ಅನುಮತಿ ನೀಡುವ ವಿಚಾರದಲ್ಲಿ ವಿದೇಶಾಂಗ ಇಲಾಖೆ ಇದುವರೆಗೂ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಸಿಧು ಬರೆದಿರುವ ಪತ್ರಕ್ಕೆ ವಿದೇಶಾಂಗ ಇಲಾಖೆಯ ಕಡೆಯಿಂದ ಎಸ್ ಅಥವಾ ನೋ ಎಂಬ ಉತ್ತರ ಲಭಿಸಿದೇ ಇರುವುದು ಕೇಂದ್ರ ಸರಕಾರದ ವಿರುದ್ಧ ಸಿಧು ಸಿಟ್ಟಿಗೆ ಕಾರಣವಾಗಿದೆ.
ಈ ಕುರಿತಾಗ ಮಾಧ್ಯಮದವರ ಮುಂದೆ ಮಾತನಾಡಿದ ಸಿಧು ಅವರು, ‘ನನ್ನ ಪತ್ರಕ್ಕೆ ಪ್ರತಿಕ್ರಿಯಿಸುವಲ್ಲಿ ತೋರಲಾಗುತ್ತಿರುವ ವಿಳಂಬ ನೀತಿ ಅಥವಾ ಪ್ರತಿಕ್ರಿಯೆ ನೀಡದಿರುವುದು ಈ ವಿಚಾರದಲ್ಲಿ ನನ್ನ ಮುಂದಿನ ನಡೆಯನ್ನು ನಿರ್ಧರಿಸಲು ಅಡ್ಡಿಯಾಗಿದೆ. ಒಂದು ವೇಳೆ ನಾನು ಅಲ್ಲಿಗೆ ತೆರಳುವುದಕ್ಕೆ ಕೇಂದ್ರ ಸರಕಾರ ‘ನೋ’ ಎಂದರೆ ಈ ದೇಶದ ಕಾನೂನನ್ನು ಪಾಲಿಸುವ ಒಬ್ಬ ಪ್ರಜೆಯಾಗಿ ನಾನು ಸರಕಾರದ ನಿರ್ಧಾರವನ್ನು ಗೌರವಿಸುತ್ತೇನೆ ಮತ್ತು ನಾನು ಕರ್ತಾಪುರಕ್ಕೆ ಹೋಗುವುದಿಲ್ಲ’ ಎಂದು ಹೇಳಿದ್ದಾರೆ.
‘ಆದರೆ ಒಂದುವೇಳೆ ಸರಕಾರ ನನ್ನ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಹೋದಲ್ಲಿ ಮಾತ್ರ ಲಕ್ಷಾಂತರ ಸಿಖ್ಖರು ತಮ್ಮ ಅರ್ಹ ವೀಸಾದಡಿಯಲ್ಲಿ ಕರ್ತಾಪುರಕ್ಕೆ ಹೋಗುವಂತೆ ನಾನೂ ಹೋಗುತ್ತೇನೆ’ ಎಂದು ಸಿಧು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಕರ್ತಾಪುರ ಕಾರಿಡಾರ್ ಉದ್ಘಾಟನೆಗೆ ಇನ್ನೂ ಎರಡು ದಿನಗಳು ಬಾಕಿ ಇರುವಂತೆ ಸಿಧು ಅವರು ವಿದೇಶಾಂಗ ಸಚಿವಾಲಯಕ್ಕೆ ತಮ್ಮ ಮೂರನೇ ಪತ್ರವನ್ನು ಬರೆದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಪ್ರತಿಕ್ರಿಯೆಯನ್ನು ನೀಡಿರುವ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಅವರು, ‘ಇದೊಂದು ಐತಿಹಾಸಿಕ ಸಂದರ್ಭವಾಗಿರುವುದರಿಂದ ಇಲ್ಲಿ ವ್ಯಕ್ತಿಯೊಬ್ಬರಿಗೆ (ಸಿಧು) ಸಂಬಂಧಿಸಿದ ಪ್ರಕರಣವನ್ನು ಚರ್ಚಿಸುವುದು ಸೂಕ್ತವಲ್ಲ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.