Advertisement

ತಿಪ್ಪಾರೆಡ್ಡಿಗೆ ಆದ ಅನ್ಯಾಯ ಸರಿಪಡಿಸಲು ಯತ್ನ

06:45 PM Oct 20, 2021 | Team Udayavani |

 ಚಿತ್ರದುರ್ಗ: ಹಿರಿಯ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ನಮ್ಮಿಂದಲೇ ಅನ್ಯಾಯ ಆಗಿದೆ. ಇದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

Advertisement

ಸೋಮವಾರ ಸಂಜೆ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರ ನಿವಾಸಕ್ಕೆ ಆಗಮಿಸಿದ್ದ ಬಿಎಸ್‌ವೈ, ಸುದ್ದಿಗಾರರ ಜತೆ ಮಾತನಾಡುವ ವೇಳೆ, ಈ ವಿಷಯವನ್ನು ಪ್ರಸ್ತಾಪಿಸಿದರು. ಜಿ.ಎಚ್‌. ತಿಪ್ಪಾರೆಡ್ಡಿ ಏಳು ಬಾರಿ ಶಾಸಕರಾಗಿ ಆಯ್ಕೆಯಾದವರು. ಹಿರಿಯರು, ಅನುಭವಿಗಳೂ ಆಗಿದ್ದಾರೆ. ಅವರಿಗೆ ಮಂತ್ರಿ ಪದವಿ ಸಿಗಬೇಕಾಗಿತ್ತು. ಆದರೆ, ನಮ್ಮಿಂದ ಅನ್ಯಾಯ ಆಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಸಂಪುಟ ವಿಸ್ತರಣೆ ವೇಳೆ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಿಫಾರಸ್ಸು ಮಾಡುತ್ತೇನೆ ಎಂದು ಹೇಳಿದರು.

ಇತ್ತೀಚೆಗೆ ಮುರುಘಾ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಬಿಎಸ್‌ವೈ ಪುತ್ರ ಬಿ.ವೈ. ವಿಜಯೇಂದ್ರ ಕೂಡಾ ಶಾಸಕ ತಿಪ್ಪಾರೆಡ್ಡಿ ಅವರ ಮನೆಗೆ ಭೇಟಿ ನೀಡಿದ್ದರು. ಈಗ ಯಡಿಯೂರಪ್ಪನವರು ಕೂಡಾ ತಿಪ್ಪಾರೆಡ್ಡಿ ಅವರ ಮನೆಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು. ಇದೇ ವೇಳೆ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗಬೇಕಾಗಿತ್ತು ಎಂಬ ಭಾವನೆ ಅವರಲ್ಲಿ ಬಂದಿದ್ದು, ಮಾಧ್ಯಮಗಳ ಬಳಿ ಮಾತನಾಡುವಾಗ ವ್ಯಕ್ತಪಡಿಸಿದರು. ಈ ಹಿಂದೆ ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದ ಅವ ಧಿಯಲ್ಲಿ ಸಂಪುಟ ವಿಸ್ತರಣೆಯಾದಾಗಲೂ ಚಿತ್ರದುರ್ಗ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರ ಹೆಸರು ಪ್ರಸ್ತಾಪವಾಗುತ್ತಿತ್ತು. ಇನ್ನೇನು ಮಂತ್ರಿಯಾಗುತ್ತಾರೆ ಎನ್ನುವಾಗ ಕೊನೆ ಹಂತದಲ್ಲಿ ಅವರ ಹೆಸರು ಪಟ್ಟಿಯಲ್ಲಿ ಮಾಯವಾಗಿರುತ್ತಿತ್ತು. ಈ ಬಗ್ಗೆ ಶಾಸಕ ತಿಪ್ಪಾರೆಡ್ಡಿ ಅನೇಕ ಸಲ ಬೇಸರ ವ್ಯಕ್ತಪಡಿಸಿದ್ದರು. ಆದರೆ, ಸಚಿವ ಸ್ಥಾನಕ್ಕಾಗಿ ಬೀದಿ ರಂಪಾಟ ಮಾಡದೆ, ಯಾರ ಮೇಲೆಯೂ ಒತ್ತಡ ಹೇರದೆ ಸುಮ್ಮನಾಗುತ್ತಿದ್ದರು. ಇದೆಲ್ಲವನ್ನೂ ಗಮನಿಸಿಯೋ ಅಥವಾ ಹಿರಿತನಕ್ಕೆ ಮನ್ನಣೆ ನೀಡಲಿಲ್ಲ ಎಂಬ ಭಾವನೆ ಯಡಿಯೂರಪ್ಪ ಅವರಿಗೆ ಕಾಡಿದ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರಿಗೆ ಶಿಫಾರಸ್ಸು ಮಾಡುತ್ತೇನೆ ಎಂದು ಬಹಿರಂಗವಾಗಿ ಹೇಳಿ ಹೋಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ದಿನಗಳಲ್ಲಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಸಚಿವರಾಗುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಬಿಎಸ್‌ವೈ ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ಖನಿಜ ನಿಗಮದ ಅಧ್ಯಕ್ಷ ಎಸ್‌.ಲಿಂಗಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next