Advertisement

ಉದ್ಧವ್‌ ಟೀಕೆಗೆ ಸೂಕ್ತ ಸಮಯದಲ್ಲಿ ಉತ್ತರ: ಸಿಎಂ ಫಡ್ನವೀಸ್‌

06:06 AM Jan 02, 2019 | |

ಮುಂಬಯಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧದ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ಚೌಕಿದಾರ್‌ ಕುರಿತ ಟೀಕೆಗೆ ಸರಿಯಾದ ಸಮಯದಲ್ಲಿ ಸೂಕ್ತ ಉತ್ತರ  ನೀಡಲಾಗುವುದು ಎಂದು ಮುಖ್ಯಮಂತ್ರಿ  ಫಡ್ನವೀಸ್‌  ತಿಳಿಸಿದ್ದಾರೆ.

Advertisement

ಇತ್ತೀಚೆಗೆ ಪಂಢರಾಪುರದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಠಾಕ್ರೆ ಕಾವಲುಗಾರರು ಕಳ್ಳರಾಗಿದ್ದಾರೆ ಎಂಬ ಕಾಂಗ್ರೆಸ್‌ ಘೋಷಣೆಗೆ ಧ್ವನಿಗೂಡಿಸಿದ್ದರು. ಒಂದು ಸಮಯದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಚೌಕಿದಾರ್‌ ಚೋರ್‌ ಹೈ (ಕಾವಲುಗಾರ ಕಳ್ಳನಾಗಿದ್ದಾನೆ) ಎಂದು ಟೀಕಾಪ್ರಹಾರ ಮಾಡಿ ಚರ್ಚೆಗೆ ಗ್ರಾಸವಾಗಿದ್ದರು.

ಸೋಮವಾರ ಇಲ್ಲಿನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಫಡ್ನವೀಸ್‌ ಅವರು, ಪ್ರತಿಯೊಂದು ಪ್ರತ್ಯುತ್ತರವು ತನ್ನದೇ ಆದ ಸಮಯವನ್ನು ಹೊಂದಿದ್ದು, ಅದಕ್ಕಾಗಿ ಕಾಯಬೇಕಾಗಿದೆ. ಯಾರು ಯಾವ ಸಂದರ್ಭದಲ್ಲಿ ಏನನ್ನು ಹೇಳಿರುವರೋ ಅದಕ್ಕೆ ನಾವು ಸರಿಯಾದ ಸಮಯದಲ್ಲಿ ಸೂಕ್ತವಾದ ಪ್ರತ್ಯುತ್ತರವನ್ನು ನೀಡುತ್ತೇವೆ ಎಂದರು. ಆದಾಗ್ಯೂ, ಕೂಡಲೇ ಅವರು, ಎರಡೂ ಪಕ್ಷಗಳು ಮುಂಬರುವ ಚುನಾವಣೆ ಗಳಲ್ಲಿ ಒಟ್ಟಾಗಿ ಸ್ಪರ್ಧಿಸಲಿವೆ ಎಂದೂ ಪುನರುಚ್ಚರಿಸಿದರು.

ಮುಂಬರುವ ಚುನಾವಣೆಗಳಲ್ಲಿ ಎರಡೂ ಪಕ್ಷಗಳು ಕಾಂಗ್ರೆಸ್‌-ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಮೈತ್ರಿಕೂಟದ ವಿರುದ್ಧ  ಸ್ಪರ್ಧಿಸಿ  ಎನ್‌ಡಿಎ ಸರಕಾರವನ್ನು ಮರಳಿ ಆಡಳಿತಕ್ಕೆ ತರಲಿದೆ ಎಂದವರು ಪ್ರತಿಪಾದಿಸಿದ್ದಾರೆ.

ಪ್ರಧಾನಿ ಮೋದಿ ವಿರುದ್ಧದ ಶಿವಸೇನೆಯ ಟೀಕೆಗಳಿಗೆ ನಾವು ಪ್ರಾಮುಖ್ಯತೆ ನೀಡುವು ದಿಲ್ಲ. ಇಂತಹ ಟೀಕಾ-ಟಿಪ್ಪಣಿಗಳು ಉರಿಯುವ ಸೂರ್ಯನ ಮೇಲೆ ಉಗುಳುವ ಹಾಗೆ. ಮೋದಿ ಅವರು ದೇಶಕ್ಕಾಗಿ ತಮ್ಮ ಕುಟುಂಬದ ಬಗ್ಗೆ ಯೋಚಿಸದೆ ಅಥವಾ ಯಾವುದೇ ವೈಯಕ್ತಿಕ ಲಾಭಗಳಿಲ್ಲದೆ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಇದು ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವುದಾಗಿದೆ ಎಂದರು.

Advertisement

ಎನ್‌ಸಿಪಿ ಜತೆ ಕೈಜೋಡಿಸಿರಲಿಲ್ಲ 
ಅಹ್ಮದ್‌ನಗರದಲ್ಲಿ ಮೇಯರ್‌ ಸ್ಥಾನವನ್ನು ಪಡೆಯಲು ಬಿಜೆಪಿ ಎನ್‌ಸಿಪಿಯೊಂದಿಗೆ ಕೈಜೋಡಿಸಿ ರಲಿಲ್ಲ.  ವಾಸ್ತವವಾಗಿ  ನಾವು ಶಿವಸೇನೆಗೆ ಬೇಷರತ್‌ ಬೆಂಬಲ ನೀಡಲು ಬಯಸಿದ್ದೆವು ಎಂದು ಫ‌ಡ್ನವೀಸ್‌ ಅವರು   ಹೇಳಿದ್ದಾರೆ. ಶಿವಸೇನೆಯು ಮೈತ್ರಿಯ ಪ್ರಸ್ತಾವ ಅಥವಾ ವಿನಂತಿಯೊಂದಿಗೆ ಮುಂದೆ ಬಂದರೆ ಅದರೊಂದಿಗೆ ಮೈತ್ರಿಮಾಡಿಕೊಳ್ಳುವಂತೆ ನಾನು ನಮ್ಮ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದೆ. ಕೊನೆಯ ನಿಮಿಷದವರೆಗೂ ನಾವು ಕಾದುಕುಳಿತಿದ್ದೆವು, ಆದರೆ ಶಿವಸೇನೆ ನಮಗೆ ಯಾವುದೇ ಪ್ರಸ್ತಾವವನ್ನು ನೀಡಿಲಿಲ್ಲ. ಅಂತೆಯೇ, ನಾವು ಎನ್‌ಸಿಪಿಯಿಂದಲೂ ಬೆಂಬಲವನ್ನು ಕೇಳಿರಲಿಲ್ಲ. ಅವರು ಸ್ವ-ಇಚ್ಛೆಯಿಂದ ನಮಗೆ ಬೆಂಬಲ ನೀಡಿದರು. ಆದ್ದರಿಂದ, ಈ ಬಗ್ಗೆ  ಎನ್‌ಸಿಪಿಯನ್ನು  ಪ್ರಶ್ನಿಸಬೇಕೇ ಹೊರತೂ ನಮ್ಮನ್ನಲ್ಲ ಎಂದು ಸಿಎಂ ಫ‌ಡನ್ವೀಸ್‌ ನುಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next