Advertisement

ಒಲಿಯುವುದೇ ಹ್ಯಾಟ್ರಿಕ್‌ ವಿಜಯ?

11:46 AM Mar 15, 2018 | Team Udayavani |

ಬೆಂಗಳೂರು: ಕ್ಷೇತ್ರ ಪುನರ್‌ವಿಂಗಡಣೆಗೆ ಮುಂಚೆ ಬಿನ್ನಿಪೇಟೆ ಕ್ಷೇತ್ರದ ಭಾಗವಾಗಿದ್ದ ವಿಜಯನಗರ ಆ ನಂತರ ಸ್ವತಂತ್ರ ಕ್ಷೇತ್ರವಾಯಿತು. ಈ ಕ್ಷೇತ್ರವನ್ನು ಕಾಂಗ್ರೆಸ್‌ನ ಎಂ.ಕೃಷ್ಣಪ್ಪ ಪ್ರತಿನಿಧಿಸುತ್ತಿದ್ದಾರೆ. ಸಿಎಂ ಸಂಪುಟದಲ್ಲಿ ಅವರು ವಸತಿ ಸಚಿವರೂ ಹೌದು. ಸತತ ಎರಡು ಬಾರಿ ಗೆಲುವು ಸಾಧಿಸಿದಿರುವ ಇವರು “ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿದ್ದಾರೆ. ಗಾಳಿ
ಆಂಜನೇಯ ದೇವಾಲಯ ಈ ಕ್ಷೇತ್ರದಲ್ಲಿರುವುದು ವಿಶೇಷ. ಮಳೆ ಬಂದರೆ ಪ್ರವಾಹದ ಭೀತಿ ಉಂಟುಮಾಡುವ ವೃಷಭಾವತಿ ಕಾಲುವೆಯೂ ಇದೇ ಕ್ಷೇತ್ರಕ್ಕೆ ಸೇರಿದ್ದು. ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಮೈಸೂರು ರಸ್ತೆ ಎರಡು ತಿಂಗಳಿನಿಂದ ವೈಟ್‌ಟಾಪಿಂಗ್‌ನಡಿ ಸಿಮೆಂಟ್‌ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸವಾರರು ತೊಂದರೆ ಎದುರಿಸುತ್ತಿದ್ದಾರೆ. ಯುಗಾದಿ ನಂತರ ಗಾಳಿ ಆಂಜನೇಯ ಸ್ವಾಮಿ ಜಾತ್ರೆ ಇರುವುದರಿಂದ ಅಷ್ಟರಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಇಲ್ಲಿನ ಶಾಸಕರೂ ಆಗಿರುವ ಸಚಿವ ಎ.ಕೃಷ್ಣಪ್ಪ ನೀಡಿದ್ದಾರೆ. ಅದನ್ನು ಆ ಭಾಗದ ಭಕ್ತರೂ ನಂಬಿದ್ದಾರೆ.

Advertisement

ಈ ಕ್ಷೇತ್ರದಲ್ಲಿ ವರ್ಷಪೂರ್ತಿ ಒಂದಿಲ್ಲೊಂದು ಕಾಮಗಾರಿ ನಡೆಯುತ್ತಲೇ ಇರುತ್ತದೆ. ಮಾಗಡಿ ರಸ್ತೆಯಿಂದ ದೀಪಾಂಜಲಿನಗರವರೆಗೆ ಮೆಟ್ರೋ ವ್ಯವಸ್ಥೆ ಇರುವುದು ಕ್ಷೇತ್ರದ ಹೆಗ್ಗಳಿಕೆ. ಮೆಟ್ರೋ ಸಂಚಾರ ಆರಂಭವಾದ ನಂತರ ಆ ಭಾಗದಲ್ಲಿ ತಕ್ಕ ಮಟ್ಟಿಗೆ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಿದೆಯಾದರೂ ಇತ್ತೀಚೆಗೆ ಕೈಗೆತ್ತಿಕೊಂಡಿರುವ
ವೈಟ್‌ಟಾಪಿಂಗ್‌ ಕಾಮಗಾರಿಯಿಂದ ಕೆಲವೆಡೆ ಟ್ರಾಫ್ರಿಕ್‌ ಬಿಸಿ ತಟ್ಟಿದೆ.

ವಿಜಯನಗರದಲ್ಲಿ ಮೇಲ್ನೋಟಕ್ಕೆ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದೆಯಾದರೂ ಲಿಂಗಾಯತ, ಮುಸ್ಲಿಂ ಹಾಗೂ ಇತರೆ ಹಿಂದುಳಿದ ವರ್ಗದ ಮತಗಳೂ ಹೆಚ್ಚಿನ ಸಂಖ್ಯೆಯಲ್ಲೇ ಇವೆ. ಕೆಂಪಾಪುರ ಅಗ್ರಹಾರ, ವಿಜಯನಗರ, ಹೊಸಹಳ್ಳಿ, ಅತ್ತಿಗುಪ್ಪೆ, ಹಂಪಿನಗರ, ಬಾಪೂಜಿನಗರ, ಗಾಳಿ ಆಂಜನೇಯ ದೇವಾಲಯ ಸೇರಿ ಎಂಟು ವಾರ್ಡ್‌ಗಳನ್ನು ಹೊಂದಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಮತ ಪಡೆದರೂ ಪಾಲಿಕೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಸಂಪುಟದಲ್ಲಿರುವ ಕೃಷ್ಣಪ್ಪ ಕ್ಷೇತ್ರಕ್ಕೆ ಅನುದಾನವು ಬಂದಿದೆ.

ಕ್ಷೇತ್ರದಲ್ಲಿ ಬೆಸ್ಟ್‌ ಏನು?
“ಜಯ ವಿಜಯನಗರ’ ಘೋಷಣೆಯಡಿ ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿದಂತೆ ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. “ನವ ಸುರಕ್ಷತೆ’ ಕಲ್ಪನೆಯಡಿ 400 ಕಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡುವ ಯೋಜನೆ ರೂಪಿಸಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಸರಗಳವು, ದ್ವಿಚಕ್ರ ವಾಹನ ಕಳವು, ರಾತ್ರಿ ವೇಳೆ ಪುಂಡ ಪೋಕರಿಗಳ ಹಾವಳಿಯಿಂದ ಬೇಸತ್ತಿದ್ದ ಜನತೆಗೆ ಇದು ಸಮಾಧಾನ ತಂದಿದೆ.

ಕ್ಷೇತ್ರದ ದೊಡ್ಡ ಸಮಸ್ಯೆ?
ವೃಷಭಾವತಿ ಪ್ರವಾಹ ಗಾಳಿ ಆಂಜನೇಯ ಸ್ವಾಮಿಯನ್ನೂ ಬಿಡುವುದಿಲ್ಲ. ಮಳೆ ಬಂದರೆ ವೃಷಭಾವತಿ ಕಾಲುವೆಯಲ್ಲಿ ಪ್ರವಾಹ ಉಂಟಾಗಿ ಮನೆಗಳಿಗೆ ನೀರು ನುಗ್ಗುವುದು ಈ ಕ್ಷೇತ್ರದ ಶಾಶ್ವತ ಸಮಸ್ಯೆ. ಇದರೊಂದಿಗೆ ಪ್ರತಿಬಾರಿ ಕಾಲುವೆ ಉಕ್ಕಿ ಹರಿದಾಗಲೂ ಗಾಳಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ನೀರು ನುಗ್ಗುತ್ತದೆ. ಇತ್ತೀಚೆಗೆ ಕಾಲುವೆಯ ಹೂಳು ತೆಗೆದು ಆ ಭಾಗದಲ್ಲಿ ಸೇತುವೆ ಉನ್ನತೀಕರಿಸಿ ಪ್ರವಾಹ ಸ್ಥಿತಿ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸಮಸ್ಯೆ ನಿವಾರಣೆಯಾಗಿದೆಯಾ ಎಂಬುದು ಮುಂದಿನ ಮಳೆಗಾಲದಲ್ಲಿ ತಿಳಿಯಲಿದೆ.

Advertisement

ಮೂಲಸೌಕರ್ಯ ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರದಲ್ಲಿ ಕೆಲಸ ಆಗಿದೆ. ಆದರೆ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ವೈಟ್‌ಟಾಪಿಂಗ್‌ ಮುಗಿಯದೆ, ವ್ಯಾಪಾರಿಗಳಿಗೆ ತೊಂದೆಯಾಗಿದೆ. 
 ನಾಸಿರ್‌

ನಮ್ಮಲ್ಲಿ ತೀರಾ ತೊಂದರೆಯಾ ಗಿದ್ದ ಕುಡಿಯುವ ನೀರು ಸಮಸ್ಯೆಗೆ ಶಾಸಕರು ಸ್ಪಂದಿಸಿದ್ದಾರೆ. ಶಾಸಕ ರಂತೆ ಸ್ಥಳೀಯ ಪಾಲಿಕೆ ಸದಸ್ಯರೂ ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಉತ್ತಮ.
 ಶೈಲಜಾ

ವಾಸುದೇವ ಭಟ್ಟಾಚಾರ್ಯ, ಚೇರ್ಮನ್‌ ನರಸಿಂಹ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇದೆ. ವೃಷಭಾವತಿ ಕಾಲುವೆಯಲ್ಲಿ ಹೂಳು ತೆಗೆದಿರುವುದರಿಂದ ಪ್ರವಾಹ ಭೀತಿ ಇರದು.
 ಚೇರ್ಮನ್‌ ಮಂಜು

ಕ್ಷೇತ್ರದ ಸಮಸ್ಯೆಗಳಿಗೆ ಶಾಸಕರ ಸ್ಪಂದನೆ ವಿಚಾರದಲ್ಲಿ ನಾನು 100ಕ್ಕೆ 50 ಅಂಕ ಕೊಡಲು ಇಚ್ಛಿಸುತ್ತೇನೆ.
ಕ್ಷೇತ್ರದಾದ್ಯಂಥ ಸಿಮೆಂಟ್‌ ರಸ್ತೆಯಾಗಿದೆ. ಅರ್ಧದಷ್ಟು ಅಭಿವೃದ್ಧಿ ಬಾಕಿಯಿದೆ. 
 ಮಂಜುನಾಥ್‌

ಶಾಸಕರು ಏನಂತಾರೆ?
ಕುಡಿಯುವ ನೀರು, ರಸ್ತೆ, ಬೀದಿ ದೀಪ, ಒಳಚರಂಡಿ ಸೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಕ್ಷೇತ್ರದಲ್ಲಿನ ಶೇ.90ರಷ್ಟು ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಕ್ಷೇತ್ರದಲ್ಲಿ ಶಾಂತಿ-ನೆಮ್ಮದಿಗೆ ಭಂಗ ತರಲು ಎಂದೂ ಅವಕಾಶ ನೀಡಿಲ್ಲ. ಕ್ಷೇತ್ರದ ಮತದಾರರು ಯಾರಿಂದಲೂ ದೌರ್ಜನ್ಯ ಹಾಗೂ ದರ್ಪಕ್ಕೆ ಒಳಗಾಗದಂತೆ ನೋಡಿಕೊಂಡಿದ್ದೇನೆ. 
  ಎಂ.ಕೃಷ್ಣಪ್ಪ, ವಸತಿ ಸಚಿವ

ಕ್ಷೇತ್ರದ ಮಹಿಮೆ
ಗಾಳಿ ಆಂಜನೇಯ ಸ್ವಾಮಿ ದೇವಾಲಯದಿಂದ ಈ ಕ್ಷೇತ್ರ ಪ್ರಸಿದ್ಧಿ ಪಡೆದಿದೆ. ಯುಗಾದಿ ನಂತರ ನಡೆಯುವ ಗಾಳಿ ಆಂಜನೇಯಸ್ವಾಮಿ ಜಾತ್ರೆ ಉತ್ಸವಕ್ಕೆ ರಾಜ್ಯದೆಲ್ಲಡೆಯಿಂದ ಭಕ್ತರು ಆಗಮಿಸುತ್ತಾರೆ. ರಾಜಕೀಯವಾಗಿಯೂ ಹಲವಾರು ಘಟಾನುಘಟಿ ನಾಯಕರು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಬಿನ್ನಿಪೇಟೆ ಕ್ಷೇತ್ರವಾಗಿದ್ದಾಗ ದಲಿತ ಮುಖಂಡ ಐಪಿಡಿ ಸಾಲಪ್ಪ, ಕನ್ನಡ ಚಳವಳಿ ನಾಯಕ ಜಿ.ನಾರಾಯಣಕುಮಾರ್‌, ಕಾಂಗ್ರೆಸ್‌ನ ನಸೀರ್‌ಅಹಮದ್‌, ಪ್ರಸ್ತುತ ಬಿಜೆಪಿಯಲ್ಲಿರುವ ವಿ.ಸೋಮಣ್ಣ ಈ ಕ್ಷೇತ್ರ ಪ್ರತಿನಿಧಿಸಿದ್ದರು. ಕ್ಷೇತ್ರ ವಿಂಗಡಣೆಯಾದ ನಂತರ ನಡೆದ ಎರಡೂ ಚುನಾವಣೆಗಳಲ್ಲಿ ಕೃಷ್ಣಪ್ಪ ಜಯಗಳಿಸಿದ್ದಾರೆ. ಕಳೆದ ಬಾರಿ ಅವರು ವಿ.ಸೋಮಣ್ಣ ಅವರ ವಿರುದ್ಧ ಜಯ ಗಳಿಸಿದ್ದರು.

ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next