Advertisement

ಸಿಎಂ ಅಧ್ಯಕ್ಷತೆಯ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ವರದಿ ಚರ್ಚೆ: ಸಚಿವ ಸುಧಾಕರ್‌

05:06 PM May 31, 2021 | Team Udayavani |

ಚಿಕ್ಕಬಳ್ಳಾಪುರ: ಮುಂದಿನ ಒಂದು ತಿಂಗಳ ಅವಧಿಗೆ ಕೋವಿಡ್‌ ಹಿನ್ನೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ವರದಿ ನೀಡಿದ್ದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯುವ ಸಭೆಯಲ್ಲಿ ಆ ಕುರಿತು ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯ ಆವಲಗುರ್ಕಿ ಗ್ರಾಮ ಪಂಚಾಯಿತಿಯ ಸೂಲಕುಂಟೆ ಗ್ರಾಮದಲ್ಲಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ನಿವಾಸಿಗಳಿಗೆ ಸದ್ಗುರು ಜಗ್ಗಿವಾಸುದೇವ್‌ ಅವರ ಇಶಾ ಫೌಂಡೇಶನ್‌ವತಿಯಿಂದ ನೀಡಿರುವ ಆಹಾರ ಧಾನ್ಯಗಳ ಕಿಟ್‌ ವಿತರಿಸಿ ಸೋಮವಾರ ಅವರು ಮಾತನಾಡಿದರು.

ಕೋವಿಡ್‌ ಎರಡನೇ ಅಲೆಗೆ ಸಂಬಂಧಿಸಿದಂತೆ ವೈಜ್ಞಾನಿಕ ಅಂಶಗಳ ತಳಹದಿಯ ಮೇಲೆ ಅಧ್ಯಯನ ನಡೆಸಿರುವ ಸಮಿತಿಯು ಮುಂದಿನ 15ರಿಂದ ಒಂದು ತಿಂಗಳ ಅವಧಿಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ಜು ವರದಿಯಲ್ಲಿ ತಿಳಿಸಿದೆ. ಅದನ್ನು ಮುಖ್ಯಮಂತ್ರಿಯವರಿಗೆ ನೀಡಿದ್ದೇವೆ. ಸಚಿವ ಸಂಪುಟದ ಹಿರಿಯ ಸದಸ್ಯರ ಜತೆ ನಡೆಯುವ ಸಭೆಯಲ್ಲಿ ಸಿಎಂ ಅವರು ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ತಜ್ಞರು ನೀಡುವ ಸಲಹೆಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ಅವರು ತಿಳಿಸಿದರು.

ಲಾಕ್‌ಡೌನ್‌ನಿಂದ ಸೋಂಕಿನ ಪ್ರಮಾಣ ತಗ್ಗಿಸಲು ಸಾಧ್ಯವಾಗಿದೆ. ಶೇಕಡಾ ನಲವತ್ತೈದರಿಂದ ಐವತ್ತರಿಷ್ಟಿದ್ದ ಸೋಂಕಿನ ಪ್ರಮಾಣ ಲಾಕ್‌ಡೌನ್‌ ಬಳಿಕ ಶೇಕಡಾ ಹದಿನೈದರಿಂದ ಹದಿನೇಳಕ್ಕೆ ಇಳಿದಿದೆ. ಮೈಸೂರು ಸಹಿತ ಕೆಲ ಜಿಲ್ಲೆಗಳಲ್ಲಿ ಮಾತ್ರ ಸೋಂಕಿನ ಪ್ರಮಾಣ ಇನ್ನೂ ಹೆಚ್ಚಿದೆ. ಇದು ಇನ್ನೂ ಕಡಿಮೆ ಆಗಬೇಕು. ಕಡಿಮೆ ಆಗಿದೆ ಎಂದಾಕ್ಷಣ ಎರಡನೇ ಅಲೆ ಮುಕ್ತಾಯವಾಗಿದೆ ಎಂದು ಭಾವಿಸುವಂತಿಲ್ಲ. ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಜನರು ಎಚ್ಚರಿಕೆಯಿಂದ ಅನುಸರಿಸಬೇಕು. ಎಚ್ಚರ ತಪ್ಪಿದರೆ ಎರಡನೇ ಅಲೆ ಮುಂದುವರಿಯುತ್ತದೆ ಎಂದೂ ಅವರು ಕಿವಿ ಮಾತು ಹೇಳಿದರು.

ಸತತ ಸಂಪರ್ಕದಲ್ಲಿದ್ದೇವೆ: ರಾಜ್ಯದಲ್ಲಿ ಒಟ್ಟು ಸಾವಿರದ ಇನ್ನೂರೈವತ್ತು ಮಂದಿಗೆ ಬ್ಲಾಕ್‌ ಫಂಗಸ್‌ ಸೋಂಕು ಕಾಣಿಸಿಕೊಂಡಿದೆ. ಚಿಕಿತ್ಸೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಅಗತ್ಯ ಪ್ರಮಾಣದಲ್ಲಿ ಔಷಧ  ಸಿಗುತ್ತಿಲ್ಲ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ಸಾಧ್ಯವಾದಷ್ಟು ಔ಼ಷಧ ತರಿಸುವ ಕೆಲಸ ಮಾಡಲಾಗುತ್ತಿದೆ. ಪ್ರತಿ ದಿನ ಎಂಟರಿಂದ ಹತ್ತು ಸಾವಿರ ವಯಲ್ಸ್‌ ಬೇಕಾಗಿದೆ ಎಂದು ಮನವಿ ಮಾಡಲಾಗಿದೆ. ಸದ್ಯ ರಾಜ್ಯಾದ್ಯಂತ ಆಕ್ಸಿಜನ್‌ ಬಳಕೆ ಕಡಿಮೆಯಾಗಿದೆ ಎಂದೂ ಸಚಿವರು ತಿಳಿಸಿದರು.

Advertisement

ಬ್ಲಾಕ್‌ಫಂಗಸ್‌ ಸೋಂಕಿಗೆ ಕಾರಣಗಳನ್ನು ಪತ್ತೆ ಹಚ್ಚಲು ತಜ್ಞರ ಸಮಿತಿ ರಚಿಸಲಾಗಿದೆ. ಈಗಾಗಲೇ ಅವರು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಇನ್ನೂ ಅಂತಿಮ ವರದಿ ಬರಬೇಕಿದೆ. ಸಕ್ಕರೆ ಕಾಯಿಲೆ ಇದ್ದು ನಿಯಂತ್ರಣದಲ್ಲಿ ಇಲ್ಲದವರಿಗೆ ಕೋವಿಡ್‌ ರಿಂದ ಗುಣಮಖರಾದ ಬಳಿಕ, ಅತಿ ಹೆಚ್ಚು ಆಕ್ಸಿಜನ್‌ ಬಳಕೆ ಮಾಡಿದ್ದವರಿಗೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸ್ಟಿರಾಯ್ಡ್‌ ಬಳಕೆ ಮಾಡಿದ್ದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಅಂತಿಮ ವರದಿ ಇನ್ನೂ ಬರಬೇಕಿದೆ ಎಂದು ಸ್ಪಷ್ಟಪಡಿಸಿದರು.

ವೈದ್ಯರ ನಡಿಗೆ ಗ್ರಾಮಗಳ ಕಡೆಗೆ ನಿಜಕ್ಕೂ ಅತ್ಯುತ್ತಮ ಕಾರ್ಯಕ್ರಮ. ಜನರ ಬಳಿಗೇ ತೆರಳಿ ಸರ್ಕಾರದ ಸವಲತ್ತುಗಳನ್ನುಒದಗಿಸುವುದು ಎಂದಿಗೂ ಉತ್ತಮ ಕೆಲಸ. ಇಂಥ ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿ ವೈದ್ಯರೇ ಗ್ರಾಮಗಳಿಗೆ ತೆರಳಿ ತಪಾಸಣೆ ಮಾಡುವುದು ನಿಜಕ್ಕೂ ಉತ್ತಮ ಕಾರ್ಯಕ್ರಮವಾಗಿದೆ ಎಂದೂ ಸಚಿವ ಸುಧಾಕರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next