ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೋವಿಡ್ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸದ್ಯ ಜಾರಿಯಿರುವ ಲಾಕ್ ಡೌನ್ ನ್ನು ಮತ್ತೊಂದು ವಾರಗಳ ಕಾಲ ವಿಸ್ತರಣೆ ಮಾಡಲಾಗಿದೆ.
ಭಾನುವಾರ ಈ ಬಗ್ಗೆ ಮಾತನಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್, ‘ದೆಹಲಿಯಲ್ಲಿ ಕೋವಿಡ್ ಪ್ರಸರಣವನ್ನು ತಡೆಯಲು ಹೇರಲಾಗಿರುವ ಲಾಕ್‌ಡೌನ್ ಅನ್ನು ಒಂದು ವಾರದವರೆಗೆ ವಿಸ್ತರಿಸಲಾಗಿದೆ’ ಎಂದು ತಿಳಿಸಿದರು.
‘ದೆಹಲಿಯಲ್ಲಿ ಕೋವಿಡ್ ಪರಿಸ್ಥಿತಿಯಲ್ಲಿ ಸುಧಾರಣೆಯಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡುವುದರಿಂದ ಪ್ರಕರಣಗಳು ಮತ್ತೆ ಹೆಚ್ಚಾಗಬಹುದು. ಹಾಗಾಗಿ ಲಾಕ್‌ಡೌನ್ ವಿಸ್ತರಿಸಲಾಗಿದೆ’ ಎಂದು ಕೇಜ್ರಿವಾಲ್ ಅವರು ಹೇಳಿದರು.
ಏಪ್ರಿಲ್ 19ರಂದು ವಿಧಿಸಲಾದ ಲಾಕ್‌ಡೌನ್ ಅನ್ನು ನಾಲ್ಕನೇ ಬಾರಿ ವಿಸ್ತರಿಸಲಾಗಿದ್ದು, ನಾಳೆ(ಸೋಮವಾರ) ಬೆಳಿಗ್ಗೆ 5 ಗಂಟೆಗೆ ಕೊನೆಗೊಳ್ಳಬೇಕಾಗಿದ್ದ ಲಾಕ್‌ಡೌನ್ ಅನ್ನು ಮೇ 24ರ ಬೆಳಿಗ್ಗೆವರೆಗೆ ವಿಸ್ತರಿಸಲಾಗಿದೆ.
ಕೋವಿಡ್ ವಿರುದ್ದ ಸಮರ ಸಾರಿರುವ ಕೇಜ್ರಿವಾಲ್ ಸರ್ಕಾರ, ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುತ್ತಿದೆ. ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡುತ್ತಿದೆ. ಕೋವಿಡ್ ಕೇಂದ್ರಗಳನ್ನು ತೆರೆದಿದೆ.
ಕೇವಲ ದೆಹಲಿಯಲ್ಲಿ ಮಾತ್ರವಲ್ಲದೆ ರಾಷ್ಟ್ರದ ಬಹುತೇಕ ರಾಜ್ಯಗಳು ಲಾಕ್ ಡೌನ್ ಮೊರೆ ಹೋಗಿವೆ. ಕರ್ನಾಟಕದಲ್ಲಿಯೂ ಮೇ.24 ರ ವರೆಗೆ ಲಾಕ್ ಡೌನ್ ಹೇರಲಾಗಿದೆ.